ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ಇಬ್ಬರಿಂದ ಮೂರು ಜನ ಬಣಬಣಜಿಗರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 1.60 ಲಕ್ಷ ಬಣಜಿಗರಿದ್ದಾರೆ. ಜಿಲ್ಲೆಯ 8 ಮತಕ್ಷೇತ್ರಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಬೇಕು. ವಿಜಯಪುರ ನಗರದಲ್ಲಿಯೇ 35 ಸಾವಿರ ಬಣಜಿಗ ಸಮಾಜದವರಿದ್ದಾರೆ. ನಾನಾ ಮತಕ್ಷೇತ್ರಗಳಲ್ಲಿ ಕನಿಷ್ಠ 25 ಸಾವಿರ ಜನಸಂಖ್ಯೆಯಿದೆ. ಪ್ರತಿ ಮತಕ್ಷೇತ್ರದಿಂದ ಬಜಣಜಿಗ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿವ ಸಮಾಜದ ಹಿತ ಕಾಪಾಡಬೇಕು ಎಂದು ಅವರು ಆಗ್ರಹಿಸಿದರು.
ಈಗಾಗಲೇ ಕಾಂಗ್ರೆಸ್ ಪಕ್ಷ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಈ ನಾಲ್ಕು ಮತಕ್ಷೇತ್ರದ ಅಭ್ಯರ್ಥಿಗಳನ್ನು ಪುನರ್ ಪರಿಶೀಲಿಸಿ ಇಲ್ಲಿಯೂ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕು. ಉಳಿದ ಮತಕ್ಷೇತ್ರಗಳಲ್ಲಿ ಪ್ರಬಲ ಬಣಜಿಗ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಕೂಡ ಇದೇ ಮಾನದಂಡ ಅನುಸರಿಸಬೇಕು. ವಿಜಯಪುರ ನಗರ ಮತಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಬಬಲೇಶ್ವರ ಮತಕ್ಷೇತ್ರಕ್ಕೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಗುರುಲಿಂಗಪ್ಪ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯ ಎಂಟು ವಿಧಾನಸಭೆ ಮತಕ್ಷೇತ್ರಗಳ ಪೈಕಿ ಕನಿಷ್ಠ 2- 3 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಬೇಕು. ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಮತ್ತು ಗುರುಲಿಂಗಪ್ಪ ಅಂಗಡಿಯವರಿಗೆ ಟಿಕೆಟ್ ನೀಡಲೇಬೇಕು. ಕಳೆದ ಚುನಾವಣೆಯಲ್ಲೂ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಸಮಾಜದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದೇವು. ಆದರೆ ನೀಡಿಲ್ಲ. ಈ ಬಾರಿಯೂ ಒತ್ತಾಯ ಮಾಡುತ್ತಿದ್ದೇವೆ. ಒಂದು ವೇಳೆ 3- 4 ಮತಕ್ಷೇತ್ರಗಳಿಗೆ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದಿದ್ದರೆ ಟಿಕೆಟ್ ಅಂತಿಮಗೊಂಡ ಬಳಿಕ ಸಮಾಜದ ಸಭೆಯಲ್ಲಿ ಚರ್ಚಿಸಿ, ಯಾರನ್ನು ಬೆಂಬಲಿಸಬೇಕು ಎಂಬುದರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಕುರಿತು ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷ ಮುಖಂಡರನ್ನು ಕಂಡು ಸಮಾಜದ ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲು ವಿನಂತಿಸಿದ್ದೇವೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳು ಬಣಜಿಗ ಸಮಾಜದ ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕು ಎಂದು ಮಲ್ಲಿಕಾರ್ಜುನ ರೂಢಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಮುಖಂಡರಾದ ಚನ್ನುಗೌಡ ಪಾಟೀಲ, ಮುತ್ತು ಕಿಣಗಿ, ಎಸ್. ಎಸ್. ಬಣಜಿಗೇರ, ಬಸವರಾಜ ತಾಳಿಕೋಟೆ, ಬಸವರಾಜ ಮಂಟೂರ, ಸುಭಾಸ ಸಾಲಂಕಿ, ವಿವೇಕ ಕೋರಿ, ಶಿವಲಿಂಗಪ್ಪ ಪಾಲಕಿ, ಸುನೀಲ ರಬಶೆಟ್ಟಿಘಿ, ಗಂಗಾಧರ ಬಬಲೇಶ್ವರ, ಶಿವಾನಂದ ತಾಳಿಕೋಟೆ, ರಾಜು ಗುಡ್ಡೋಡಗಿ, ರವೀಂದ್ರ ಬಿಜ್ಜರಗಿ, ಕಲ್ಲಪ್ಪ ಕೋರಿ, ಈರಣ್ಣ ಕಲಬುರ್ಗಿ, ಜಿ. ಎಸ್. ಜಂಬಲದಿನ್ನಿ, ವಿರುಪಾಕ್ಷಪ್ಪ ಹಣಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.