ವಿಜಯಪುರ: ರಾಜ್ಯ ಸರಕಾರ ಘೋಷಣೆ ಮಾಡಿರುವ ಒಳಮೀಸಲಾತಿಗೆ ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಂಜಾರಾ ಸಮುದಾಯಕ್ಕೆ ಮೀಸಲಾತಿ ಪ್ರಮಾಣದಲ್ಲಿ ಕಡಿಮೆಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರಕಾರ ಜೇನುಗೂಡಿಗೆ ಕಲ್ಲು ಹೊಡೆದಿದೆ. ಒಳ ಮೀಸಲಾತಿಯಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಬಂಜಾರ ಸಮುದಾಯದ ತಾಳ್ಮೇ ಪರೀಕ್ಷಿಸಬೇಡಿ. ಸರಕಾರಕ್ಕೆ ಎಚ್ಚರಿಕೆ ಕೊಡ್ತೀನಿ. ಬಂಜಾರ ಸಮುದಾಯ ಸೌಮ್ಯ ಸಮುದಾಯ. ಒಂದೊಂದು ಸಮುದಾಯಗಳಿಗೆ ಒಳ ಮೀಸಲಾತಿ ಹೆಚ್ಚು ಮಾಡಿದ್ದರೆ ಇದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಈವರೆಗೆ 101 ಪಂಗಡಗಳು ಅಣ್ಣ- ತಮ್ಮಂದಿರಂತೆ ಬದುಕಿಕೊಂಡು ಬಂದಿದ್ದೇವೆ. ಇಂಥದರಲ್ಲಿ ಒಬ್ಬರ ಕಣ್ಣಿಗೆ ಬೆಣ್ಣೆ ಮತ್ತೋಬ್ಬರ ಕಣ್ಣಿಗೆ ಸುಣ್ಣ ಎಂದರೆ ಎಲ್ಲರಿಗೂ ನೋವಾಗುತ್ತದೆ. ಸೌಮ್ಯದಿಂದ ಇರುವ ಒಂದು ಸಮದಾಯದ ತಾಳ್ಮೆ ಪರೀಕ್ಷೆ ಮಾಡುವುದನ್ನು ಸರಕಾರ ಮಾಡಬಾರದು ಎಂದು ಎಚ್ಚರಿಕೆ ನೀಡಲು ಬಯಸುತ್ತೇನೆ ಎಂದು ಅವರು ಹೇಳಿದರು.
ಮೀಸಲಾತಿಯಲ್ಲಿ ಒಟ್ಟು 101 ಜಾತಿಗಳಿವೆ. ಒಂದೊಂದು ಸಮುದಾಯಗಳಿಗೆ ಪರ್ಸೆಂಟೇಜ್ ಹೆಚ್ಚು ಮಾಡಿದ್ದಾರೆ. ಇದರ ಅವಶ್ಯಕತೆ ಇರಲಿಲ್ಲ. ಒಬ್ಬರಿಗೆ ಶೇ. 6 ಮತ್ತೋಬ್ಬರಿಗೆ ಶೇ. 5.5 ಉಳಿದ 99 ಸಮುದಾಯಗಳಿಗೆ ಶೇ. 4.5 ಮೀಸಲಾತಿ ನೀಡಿದ್ದಾರೆ. ಇದು ಯಾವ ಸೀಮೆಯ ನ್ಯಾಯ? ಸಮಾನತೆ ಇದ್ದರೆ ಸಾಕಾಗಿತ್ತು. ಜೇನುಗೂಡಿಗೆ ಕಲ್ಲು ಹೊಡುಯುವ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯ ತತ್ವದಡಿ ಮೀಸಲಾತಿ ನೀಡಲಾಗಿದೆ ಎಂದು ಸರಕಾರ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ದೇವಾನಂದ ಚವ್ಹಾಣ, ಸಾಮಾಜಿಕ ನ್ಯಾಯಕ್ಕಾಗಿ ಇವರು ಯಾವ ರೀತಿ ವರದಿ ರಚಿಸಿದ್ದಾರೆ? ಯಾರ ಮನೆಗೆ ಹೋಗಿ ಭೇಟಿಯಾಗಿದ್ದಾರೆ? ಹೋಟೇಲ್, ಲಾಡ್ಜ್ ನಲ್ಲಿ ಕುಳಿತುಕೊಂಡು ವರದಿ ತಯಾರಿಸಿದ ಸದಾಶಿವ ಆಯೋಗದ ರಿಪೋರ್ಟ್ ಒಪ್ಪಿಕೊಂಡಿದ್ದು ಅನ್ಯಾಯದಿಂದ ಕೂಡಿದೆ.
ಈಗ ಸೌಮ್ಯ ರೀತಿಯಿಂದ ನಾವು ಸರಕಾರದ ಮೇಲೆ ಒತ್ತಡ ತರುತ್ತೇವೆ. ಆದರೂ ಸ್ಪಂದಿಸದಿದ್ದರೆ ಯಾವುದೇ ರೀತಿಯ ಎಂಥದ್ದೇ ಹಿಂಸೆ, ಉಗ್ರ ಹೋರಾಟಕ್ಕೂ ನಮ್ಮ ಸಮಾಜ ತಯಾರಿದೆ. ಇದು ಚುನಾವಣೆ ಗಿಮಿಕ್ ಎನ್ನುವದಕ್ಕಿಂತ ಅವರ ವರ್ತನೆ ಅದೇ ರೀತಿಯಾಗಿದೆ. ಬಿಜೆಪಿ ಸರಕಾರ ಎಂದೂ ದೇಶದಲ್ಲಿ ಒಗ್ಗಟ್ಟಿನಿಂದ ಆಡಳಿತ ನಡೆಸುವುದಿಲ್ಲ. ದೇಶವನ್ನು ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ದೇವಾನಂದ ಚವ್ಹಾಣ ಆರೋಪಿಸಿದರು.
99 ಸಮುದಾಯಗಳಿಗೆ ಶೇ. 4.5 ಮೀಸಲಾತಿ ಕೊಟ್ಟಿದ್ದಾರೆ. ಇದು ಯಾವ ಸೀಮೆಯ ನ್ಯಾಯ? ಸಮಾನತೆ ಇರಬೇಕಿತ್ತು. ಜೇನುಗೂಡಿಗೆ ಕಲ್ಲು ಹೊಡಯಬಾರದಿತ್ತು. ಹೊಟೇಲ್, ಲಾಡ್ಜ್‌ನಲ್ಲಿ ಕುಳಿತು ಸದಾಶಿವ ಆಯೋಗದ ವರದಿ ರೆಡಿ ಮಾಡಲಾಗಿದೆ. ಸದಾಶಿವ ಆಯೋಗದ ವರದಿ ನ್ಯಾಯಸಮ್ಮತವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸೌಮ್ಯ ರೀತಿಯಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಇಲ್ಲದೆ ಹೋದರೆ ಎಂಥ ಹಿಂಸೆಗೂ ಉಗ್ರ ಹೋರಾಟಕ್ಕೂ ಸಮಾಜ ತಯಾರಾಗಿದೆ. ಬಿಜೆಪಿ ಒಗ್ಗಟ್ಟಿನಿಂದ ದೇಶ ಆಳುವುದಿಲ್ಲ, ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ದೇವಾನಂದ ಚವ್ಹಾಣ ಆರೋಪಿಸಿದರು.
ಬಿ. ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ವಿಚಾರ
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಡೀ ಘಟನೆಯನ್ನ ಖಂಡಿಸುತ್ತೇನೆ ಎಂದು ಹೇಳಿದರು. ಲಾಠಿ ಚಾರ್ಜ್ ನಡೆಸಿರುವುದು ಇದಕ್ಕೆ ಮೂಲ ಕಾರಣ. ಇವರಾಗಿಯೇ ಮಾಡಬೇಕು ಎಂದು ಮಾಡಿರುವ ಘಟನೆ ಇದಲ್ಲ. ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ. ಈ ರೀತಿ ಆಗಬಾರದು ಎಂದು ಬಂಜಾರ ಸಮುದಾಯದಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಕಲ್ಲು ತೂರಾಟ ಮಾಡಬೇಕೆಂದೆನೂ ಮಾಡಿಲ್ಲ. ಲಾಠಿ ಚಾರ್ಜ್ ಬಳಿಕ ಕಲ್ಲು ತೂರಾಟ ನಡೆದಿದೆ. ಇದೊಂದು ಆಕಸ್ಮಿಕ ಘಟನೆ. ಈ ಘಟನೆ ಮರುಕಳಿಸಬಾರದು ಎಂದು ಬಂಜಾರ ಸಮುದಾಯದಲ್ಲಿ ಕೇಳಿಕೊಳ್ಳುತ್ತೇನೆ ಎಂದು ದೇವಾನಂದ ಚವ್ಹಾಣ ತಿಳಿಸಿದರು.