ಬೆಂಗಳೂರು: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ವಿಜಯಪುರ ನಗರ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿ ಬಣಜಿಗ ಸಮಾಜದ ಮುಖಂಡರು ಮಾಜಿ ಸಿಎಂ ಗಳಾದ ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.
ಬಣಜಿಗ ಸಂಘದ ರಾಜ್ಯಾಧ್ಯಕ್ಷ ಅಂದಾನೆಪ್ಪ ಜವಳಿ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ವಿಜಯಪುರ ಜಿಲ್ಲೆಯ ಸುಮಾರು 150 ಜನ ಬಣಜಿಗರ ನಿಯೋಗ ಈ ಮನವಿ ಮಾಡಿತು.
ವಿಜಯಪುರ ಜಿಲ್ಲೆಯ 1.50 ಲಕ್ಷ ಬಣಜಿಗ ಮತದಾರರು ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರ ಬದಲು ಕೊನೆಯ ಗಳಿಗೆಯಲ್ಲಿ ಬೇರೋಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೂ, ನಮ್ಮ ಸಮಾಜ ಬಿಜೆಪಿ ಅಧಿಕಾರಕ್ಕೆ ಬರಲಿ ಎಂಬ ಸದುದ್ದೇಶದಿಂದ ಸಹಿಸಿಕೊಂಡು ಬಿಜೆಪಿಗೆ ಮತ ಹಾಕಿದೆ. ಆದರೆ, ನಾವು ಎಂದೂ ಬಿಜೆಪಿ ವಿರುದ್ಧ ಹೋಗಿಲ್ಲ. ಆದರೆ, ಈಗ ಬದಲಾದ ಸನ್ನಿವೇಶದಲ್ಲಿ ಮತ್ತದೆ ತಪ್ಪನ್ನು ಮಾಡದೇ ಈ ಬಾರಿ ಅಪ್ಪು ಪಟ್ಟಣಶೆಟ್ಟಿ ಅವರಿಗೆ ವಿಜಯಪುರ ನಗರ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕು. ಒಂದು ವೇಳೆ ನೀಡದಿದ್ದರೆ ನಮ್ಮ ಸಮಾಜದ ಶಕ್ತಿಯನ್ನು ತೋರಿಸುವ ಬದಲು ಬಿಜೆಪಿ ವಿರುದ್ಧ ಮತದಾನ ಮಾಡುವ ಮೂಲಕ ಸ್ಪಷ್ಟ ಉತ್ತರ ನೀಡುತ್ತೇವೆ. ವಿಜಯಪುರ ನಗರದಲ್ಲಿರುವ 30 ಸಾವಿರಕ್ಕೂ ಹೆಚ್ಚು ಬಣಜಿಗ ಮತದಾರರಿದ್ದು ಇದನ್ನು ಗಮನಿಸಬೇಕು ಎಂದು ಸಮಾಜ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಣಜಿಗ ಸಮಾಜ ಮುಖಂಡರಾದ ಶಾಂತಪ್ಪ ಜತ್ತಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.