ವಿಜಯಪುರ: ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ನನಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಾಪುಗೌಡ ಮಲ್ಲನಗೌಡ ಪಾಟೀಲ(ವಡವಡಗಿ) ಆಗ್ರಹಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರ ಹಿಪ್ರರಗಿ ಮತಕ್ಷೇತ್ರದವನಾಗಿ ಕಳೆದ 19 ವರ್ಷಗಳಿಂದ ಕಾಂಗ್ರೆಸ್ ಸಂಘಟನೆಗಾಗಿ ಬಹಳಷ್ಟು ದುಡಿದಿದ್ದೇನೆ. 2005 ರಿಂದ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತ ಕಾಂಗ್ರೆಸ್ ಬಲಪಡಿಸಿದ್ದೇನೆ. ಈ ಕ್ಷೇತ್ರದಿಂದ ಎ. ಎಸ್. ಪಾಟೀಲ ನಡಹಳ್ಳಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಲು ಪ್ರಮುಖ ಪಾತ್ರ ವಹಿಸಿದ್ದೇನೆ. ಮತಕ್ಷೇತ್ರಾದ್ಯಂತ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಸರಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ದೇವರ ಹಿಪ್ಪರಗಿ ಮತಕ್ಷೇತ್ರದ ಉಸ್ತುವಾರಿಯಾಗಿ ಎಸ್. ಆರ್. ಪಾಟೀಲ, ಪ್ರಕಾಶ ರಾಠೋಡ, ಎಂ. ಬಿ. ಪಾಟೀಲರ ಸಹೋದರ ಸುನೀಲಗೌಡ ಪಾಟೀಲರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ವಿಜಯಪುರ ಜಿಲ್ಲಾ ಕಿಸಾನ ಕಾಂಗ್ರೆಸ್ ಅಧ್ಯಕ್ಷನಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಬಿ.ಎಸ್ಸಿ.ಪದವಿಧರನಾಗಿರುವ ನಾನು, ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ರೆಡ್ಡಿ ಸಮುದಾಯಕ್ಕೆ ಸೇರಿದ್ದೇನೆ. ಎಲ್ಲ ಜಾತಿಯ ಜನರೊಂದಿಗೆ ಸಾಮರಸ್ಯದಿಂದ ಇದ್ದೇನೆ. ಮತದಾರರೂ ನನ್ನ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ಅವರ ಒತ್ತಡದ ಹಿನ್ನೆಲೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಕರ್ನಾಟಕ ಕಿಸಾನ ಕಾಂಗ್ರೆಸ್ ರಾಜ್ಯಾಧ್ಯಕ್ಷರು ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಕಿಸಾನ ಕಾಂಗ್ರೆಸ್ ಗೆ ಮೀಸಲಿಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಲ್ಲದೇ, ರಾಷ್ಟ್ರೀಯ ಕಿಸಾನ ಕಾಂಗ್ರೆಸ್ ಅಧ್ಯಕ್ಷ ಸುಖಪಾಲಸಿಂಗ್ ಖೈರ್ ಕೂಡ ದೇವರ ಹಿಪ್ಪರಗಿ ಮತಕ್ಷೇತೃಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಇಷ್ಟು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನ್ಯಾಯ ಸಿಕ್ಕಂತಾಗಿದೆ ಎಂದು ಭಾವಿಸಿದ್ದೆ. ಆದರೆ, ಈ ಹಂತದಲ್ಲಿಯೇ ಮಾಜಿ ಸಚಿವ ಎಸ್. ಆರ್. ಪಾಟೀಲ ಅವರು ನನ್ನ ಟಿಕೇಟ್ ತಪ್ಪಿಸಿ ತಾವು ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಾಪುಗೌಡ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೈಕಮಾಂಡ ಎಸ್. ಆರ್. ಪಾಟೀಲರಿಗೆ ಟಿಕೆಟ್ ನೀಡಿದರೆ ಕಳೆದ 19 ವರ್ಷಗಳಿಂದ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ನನಗೆ ಅನ್ಯಾಯವಾಗುತ್ತದೆ. ಈ ಹಿಂದೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಎಸ್. ಆರ್. ಪಾಟೀಲ ಅವರ ಗೆಲುವಿಗಾಗಿ ನಾನು ಕೆಲಸ ಮಾಡಿದ್ದೇನೆ. ಈಗ ಈ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರನ್ನೂ ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಕಿಸಾನ್ ಕಾಂಗ್ರೆಸ್ ಕೋಟಾದಲ್ಲಿ ನನಗೆ ಖಂಡಿತ ಟಿಕೇಟ್ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದೇನೆ. ಒಂದು ವೇಳೆ ನನ್ನ ಬದಲು ಎಸ್. ಆರ್. ಪಾಟೀಲರಿಗೆ ಟಿಕೆಟ್ ನೀಡಿದರೆ ನಾನು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಬಾಪುಗೌಡ ಪಾಟೀಲ ವಡವಡಗಿ ಸ್ಪಷ್ಟಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪಕುಮಾರ ಬಿಸ್ಕಿನ್ ಹಾಗೂ ಬಹದ್ದೂರ ಚವ್ಹಾಣ, ನಗರ ಬ್ಲಾಕ್ ಅಧ್ಯಕ್ಷ ಕುಬು ಜಾಧವ ಮುಂತಾದವರು ಉಪಸ್ಥಿತರಿದ್ದರು.