ಬಸವನಾಡಿನಲ್ಲಿ ಹನುಮ ಜಯಂತಿ ಆಚರಣೆ- ನಸುಕಿನಿಂದಲೇ ಆಂಜನೇಯ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ಭಕ್ತರು- ಪ್ರಸಾದ ವ್ಯವಸ್ಥೆಯೂ ಜೋರು

ವಿಜಯಪುರ: ಇಂದು ರಾಮಭಕ್ತ ಹನುಮ ಜಯಂತಿ.  ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹನುಮ ಜಯಂತಿ ಸಂಭ್ರಮ ಜೋರಾಗಿದೆ.  ಜಿಲ್ಲೆಯ ನಾನಾ ಬಡಾವಣೆಗಳಲ್ಲಿರುವ ಎಲ್ಲ ಹನುಮಾನ ಮಂದಿರಗಳಲ್ಲಿ ಹನುಮ ಜಯಂತಿ ಅಂಗವಾಗಿ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ರಾಮಭಕ್ತ, ಸರ್ವಶಕ್ತ, ಚಿರಂಜೀವಿ, ವಾಯುಪುತ್ರ, ಆಂಜನಿಸುತ, ಮಾರುತಿ ಸೇರಿದಂತೆ ನಾನಾ ಹೆಸರುಗಳಿಂದ ಕರೆಯಲಾಗುವ ಆಂಜನೆಯ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ.  ಹೀಗಾಗಿ ಹನುಮಂತನ ಪ್ರತಿಯೊಂದು ದೇವಸ್ಧಾನಗಳಲ್ಲಿ ನಸುಕಿನ ಜಾವದಿಂದಲೇ ಜನಜಂಗುಳಿ ಕಂಡು ಬಂತು.  ಹನುಮ ದೇಗುಲಗಳಲ್ಲಿ ಸಂಭ್ರಮದಿಂದ ಪೂಜಾ ಕೈಂಕರ್ಯ ನಡೆಸಲಾಯಿತು.  ನಸುಕಿನ ಜಾವದಲ್ಲಿಯೇ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದರು.

ಆದರ್ಶ ನಗರದಲ್ಲಿರುವ ಮಾರುತಿ ಮಂದಿರದಲ್ಲಿ ಹನುಮ ಜಯಂತಿಯನ್ನು ಆಚರಿಸಲಾಯಿತು

ದರ್ಶನಕ್ಕೆ ಬಂದ ಮಾರುತಿ ಭಕ್ತರಿಗಾಗಿ ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳು ಮತ್ತು ಭಕ್ತರು ಪ್ರಸಾದದ ವ್ಯವಸ್ಥೆ ಮಾಡಿದ್ದರು.  ದರ್ಶನಕ್ಕೆ ಬಂದ ಭಕ್ತರಿಗೆ ಕೋಸುಂಬರಿ, ಶರಬತ್ತು ಹಾಗೂ ಶುಂಠಿ  ಸಕ್ಕರೆ ಪ್ರಸಾದ ವಿತರಣೆ ಮಾಡಿದರು.

ವಿಜಯಪುರ ನಗರದಲ್ಲಿಯೇ ಅತೀ ಎತ್ತರದ ಹನುಮನ ಮೂರ್ತಿ ಹೊಂದಿರುವ ಆದರ್ಶ ನಗರದಲ್ಲಿರುವ ಮಾರುತಿ ಮಂದಿರದಲ್ಲಿಯೂ ಬೆಳಿಗ್ಗೆಯಿಂದಲೇ ಭಕ್ತರು ದರ್ಶನಕ್ಕೆ ಮುಗಿ ಬಿದ್ದರು.  ಹನುಮನ ವಿಗ್ರಹವನ್ನು ತೊಟ್ಟಿಲಲ್ಲಿ ಹಾಕಿ ತೂಗುವ ಮೂಲಕ ನಾಮಕರಣ ಶಾಸ್ತ್ರವೂ ಸಂಪ್ರದಾಯವಾಗಿ ನಡೆಯಿತು.  ಬೆಳಿಗ್ಗಗೆ ಅಲ್ಪೋಪಹಾರ ಮತ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.  ಇದು ಜಾಗೃತ ದೇವಸ್ಥಾನವಾಗಿದ್ದು, ಹಣಮಂತ ಭಕ್ತರ ಬಯಕೆಗಳನ್ನು ಈಡೇರಿಸುತ್ತಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ, ಚೌದರಿ, ಧರ್ಮರಾಯ ಮಮದಾಪುರ ಮುಂತಾದವರು ತಿಳಿಸಿದರು.

ಅದೇ ರೀತಿ, ವಿಜಯಪುರ ನಗರದ ಮದಲಾ ಮಾರುತಿ ದೇವಸ್ಥಾನ, ವಜ್ರ ಹನುಮಾನ ನಗರ, ಕೆ. ಎಚ್. ಬಿ. ಕಾಲನಿ, ಜಲನಗರ, ವೀರಾಂಜನೇಯ, ಜಬರದಸ್ತ್, ಪೋಸ್ಟ್ ಹನುಮಪ್ಪ, ಲದ್ದಿಕಟ್ಟಿ ಹನುಮಂತ, ತೆಗ್ಗಿನ ಹನುಮಂತ, ಮನಗೂಳಿ ಅಗಸಿ ಹನಮಂತ ಹೀಗೆ ಪ್ರತಿಯೊಂದು ಓಣಿ ಓಣಿಯಲ್ಲಿರುವ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.

ವಿಜಯಪುರ ನಗರದ ಎಂ. ಜಿ. ರಸ್ತೆಯಲ್ಲಿರುವ ಮಧಲಾ ಮಾರುತಿ ದೇವಸ್ಥಾನ ಸುಮಾರು ಐದಾರು ಶತಮಾನಗಳ ಇತಿಹಾಸ ಹೊಂದಿದ್ದು ವ್ಯಾಸರಾಯರು ಇಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು.  ಬೃಹತ್ ಆಲದ ಮರದ ಕೆಳಗಡೆ ಇದ್ದ ಈ ದೇವಸ್ಥಾನವನ್ನು ಕೆಲವು ವರ್ಷಗಳ ಹಿಂದೆ ರಸ್ತೆ ಅಗಲಿಕರಣ ಸಂದರ್ಭದಲ್ಲಿ ಪಕ್ಕದಲ್ಲಿಯೇ ಸ್ಥಳಾಂತರಿಸಲಾಗಿದೆ.  ಈ ದೇವಸ್ಥಾನಕ್ಕೂ ಕೂಡ ಸಾವಿರಾರು ಭಕ್ತರು ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.

ವಿಜಯಪುರ ನಗರದ ಮಧಲಾ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಚರಿಸಲಾಯಿತು

ಹನುಮ ಜಯಂತಿಗೂ ತಟ್ಟಿರುವ ಚುನಾವಣೆ ನೀತಿ ಸಂಹಿತೆ ಬಿಸಿ

ರಾಜ್ಯ ವಿಧಾನ ಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆಯೂ ಜಾರಿಯಲ್ಲಿದೆ.  ಈ ಮಾದರಿ ನೀತಿ ಸಂಹಿತೆಯ ಬಿಸಿ ಹನುಮ ಜಯಂತಿಯ ಮೇಲೂ ಪರಿಣಾಮ ಬೀರಿದೆ.  ದೇವಸ್ಥಾನದ ಆಡಳಿತ ಮಂಡಳಿಗಳು ಹನುಮ ಜಯಂತಿ ಅಂಗವಾಗಿ ಮಧ್ಯಾಹ್ನ ನಡೆಯುವ ಅನ್ನಪ್ರಸಾದಕ್ಕೆ ಈ ಬಾರಿ ಬ್ರೇಕ್ ಹಾಕಿವೆ.  ಮಧ್ಯಾಹ್ನ ಬಹುತೇಕ ಕಡೆಗಳಲ್ಲಿ ಶೀರಾ, ಸಜ್ಜಕ, ಅನ್ನ ಸಾರು ಅಥವಾ ಮಸಾಲಾ ರೈಸ್ ವಿತರಣೆ ಮಾಡಲಾಗುತ್ತಿತ್ತು.  ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಲವೆಡೆ ಕೇವಲ ಶೀರಾ ಮತ್ತು ಕೆಲವೆಡೆ ಕೇವಲ ಉಪ್ಪಿಟ್ಟನ್ನು ಮಾತ್ರ ವಿತರಣೆ ಮಾಡಲಾಗುವುದು ಎಂದು ಮಧಲಾ ಮಾರುತಿ ದೇವಸ್ಧಾನದ ಅರ್ಚಕ ಗೋವಿಂದ ಜೋಶಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌