ವಿಜಯಪುರ: ಚುನಾವಣೆ ನಾಮಪತ್ರ ಸಲ್ಲಿಕೆ ಸಮೀಪಿಸುತ್ತಿದ್ದಂತೆ ವಿಜಯಪುರ ನಗರ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ನ್ನು ಪಟ್ಟಣಶೆಟ್ಟಿ ಮತ್ತು ಯತ್ನಾಳ ಅವರಿಗೆ ನೀಡಬೇಕು ಎಂಬ ಎಂದು ಇಬ್ಬರೂ ನಾಯಕರ ಬೆಂಬಲಿಗರ ಆಗ್ರಹ ಹೆಚ್ಚಾಗುತ್ತಿದೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗದರು ಈ ಬಾರಿ ವಿಜಯಪುರ ನಗರ ಮತಕ್ಷೇತ್ರದಿಂದ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕು ಎಂದು ಅಗ್ರಹಿಸಿದ್ದಾರೆ.
ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಮಾತನಾಡಿ, ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಯತ್ನಾಳ ಅವರಿಗೆ ರಾಜ್ಯದ ಯಾವುದೇ ಕ್ಷೇತ್ರದಿಂದ ಟಿಕೆಟ್ ನೀಡಿದರೂ ಗೆದ್ದು ಬರುವ ಶಕ್ತಿಯಿದೆ. ಹೀಗಾಗಿ ಅವರಿಗೆ ಬೇರೆ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ವಿಜಯಪುರ ನಗರ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
2018ರಲ್ಲಿ ಅಪ್ಪ ಪಟ್ಟಣಶೆಟ್ಟಿ ಬದಲಾಗಿ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಇದರಿಂದಾಗಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಬಣಜಿಗ ಸಮುದಾಯದವರಿಗೆ ಅನ್ಯಾಯ ಮಾಡಲಾಗಿತ್ತು. ಈ ಬಾರಿ ಬಣಜಿಗ ಸಮುದಾಯ ಮತ್ತು ಅಪ್ಪು ಪಟ್ಟಣಶೆಟ್ಟಿ ಅವರಿಗೆ ನ್ಯಾಯ ಒದಗಿಸಲು ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬಿಜೆಪಿಯನ್ನು ಇನ್ನೂ ಬಲಿಷ್ಠ ಮಾಡಬೇಕಾಗಿದೆ. ಯತ್ನಾಳ ಅವರಿಗೆ ಜಿಲ್ಲೆಯ ಬೇರೊಂದು ಮತಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಬಿಜೆಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಲು ಸಹಾಯವಾಗುತ್ತದೆ. ಅಪ್ಪು ಪಟ್ಟಣಶೆಟ್ಟಿ ಶಾಸಕ ಮತ್ತು ಸಚಿವರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಲ್ಲ ಸಮುದಾಯಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಬಿಜೆಪಿಯ ಬೇರುಮಟ್ಟದ ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ನೀಡಬೇಕು ಎಂದು ಗೋಪಾಲ ಘಟಕಾಂಬಳೆ ಹೈಕಮಾಂಡ್ ಗೆ ಮನವಿ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಮಾತನಾಡಿ, ಅಪ್ಪು ಪಟ್ಟಣಶೆಟ್ಟಿ ಅವರಿಗೆ ನಗರ ಮತಕ್ಷೇತ್ರದಲ್ಲಿ ಹೆಚ್ಚಿನ ಜನ ಬೆಂಬಲವಿದೆ. ಇಲ್ಲಿ ಬಣಜಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಬಿಜೆಪಿ ಸುಲಭವಾಗಿ ಗೆಲ್ಲಲಿದೆ. ಬೇರೆ ಮತಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯ ಪ್ರಬಲರಿದ್ದಾ. ಆ ಮತಕ್ಷೇತ್ರದಲ್ಲಿ ಯತ್ನಾಳ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ. ಯತ್ನಾಳ ಅವರು ಈ ಹಿಂದೆ ಸಂಸದರಾಗಿ ಇಡೀ ಜಿಲ್ಲೆಗೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ನಮ್ಮ ನಾಯಕರು. ವಿಜಯಪುರ ನಗರ ಮತಕೇತ್ರದಲ್ಲಿ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಕಾರ್ಯಕರ್ತರು ಅತೀ ಹೆಚ್ಚು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇವೆ. ಅಷ್ಟೇ ಅಲ್ಲ, ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಎಂದು ತಿಳಿಸಿದರು.
ಅಪ್ಪ ಪಟ್ಟಣಶೆಟ್ಟಿ ಅವಧಿಯಲ್ಲಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಲೀಜ್ ಆಸ್ತಿ, ಯುಜಿಡಿ ಕಾಮಗಾರಿಗಳು ಸೇರಿದಂತೆ ಅನೇಕ ಮಹತ್ವದ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಲೀಜ್ ಆಸ್ತಿ ಬಗ್ಗೆ ಕೆಲಸ ಮಾಡಿದ ಹೆಮ್ಮೆ ಅವರಿಗಿದೆ. ಅಭಿವೃದ್ಧಿ ಚಿಂತಕರಾಗಿ ಸಣ್ಣ ಕಾರ್ಯಕರ್ತರನ್ನು ಬೆಳೆಸುತ್ತ ಪಕ್ಷದ ಶಿಸ್ತು ಪಾಲಿಸುತ್ತಿರುವ ಮತ್ತು ಎಲ್ಲ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ಅವರಿಗೆ ವಿಜಯಪುರ ನಗರದ ಮತಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶಿವಾನಂದ ಮಾನಕರ, ಬಿಜೆಪಿ ಮಾಜಿ ಕಾರ್ಪೋರೇಟರ್ ಗಳಾದ ಪ್ರಕಾಶ ಮಿರ್ಜಿ, ಅಪ್ಪು ಸಜ್ಜನ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತು ಶಿಂಧೆ ಮುಂತಾದವರು ಉಪಸ್ಥಿತರಿದ್ದರು.