ವಿಜಯಪುರ: ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದರ ಪರಾಮರ್ಶೆ ಮತ್ತು ಸುಧಾರಣೆಗಾಗಿ ಕೇಂದ್ರ ಹಣಕಾಸು ಸಚಿವಾಲಯ ನಾಲ್ಕು ಜನರ ಸಮಿತಿ ರಚಿಸಿದೆ. ಕೇಂದ್ರದ ಈ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಎಂಎಲ್‌ಸಿ ಮತ್ತು ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪುರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರಕಾರ ನೌಕರರ ಹಿತ ಕಾಪಾಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಆಗಬೇಕಿರುವ ಮಾರ್ಪಾಡುಗಳು, ತರಬಹುದಾದ ಸುಧಾರಣೆ, ಇದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಬೇಕಾದ ಹೆಚ್ಚುವರಿ ಹಣಕಾಸು ವ್ಯವಸ್ಥೆ ಕುರಿತು ಸಮಿತಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
2004ರಲ್ಲಿ ಅಂದಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು ಹಳೆಯ ಪಿಂಚಣಿ ಯೋಜನೆ(OPS) ಸ್ಥಗಿತಗೊಳಿಸಿ ನೂತನ ಪಿಂಚಣಿ ಯೋಜನೆ(NPS) ಜಾರಿಗೆ ತಂದಿತ್ತು. ಹಳೆಯ ಪದ್ಧತಿಯಂತೆ ನೌಕರನ ಕೊನೆಯ ಸಂಬಳದ ಶೇ. 50 ರಷ್ಟು ಇರುತ್ತಿತ್ತು. ಈ ಸಂಪೂರ್ಣ ಹಣವನ್ನು ಸರಕಾರ ಪಾವತಿಸುತ್ತಿತ್ತು. ಆದರೆ, ಹೊಸ ಯೋಜನೆಯಡಿ ನೌಕರರ ಕೊಡುಗೆ ಆಧಾರದ ಮೇಲೆ ಪಿಂಚಣಿ ನಿರ್ಧಾರವಾಗುತ್ತಿದೆ. ಅಲ್ಲದೇ, ನೌಕರರು ತಮ್ಮ ಸಂಬಳದ ಶೇ. 10 ರಷ್ಟು ಹಣವನ್ನು ನಿವೃತ್ತಿ ನಿಧಿಗೆ ನೀಡಬೇಕಿದೆ. ಪಿಂಚಣಿ ನಿಧಿಗೆ ಸರಕಾರ ಶೇ. 14ರಷ್ಟು ಹಣ ಒದಗಿಸುತ್ತಿದೆ. ಈ ತಾರತಮ್ಯ ಹೋಗಲಾಡಿಸಲು ಸರಕಾರಿ ನೌಕರರ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈಗ ನೌಕರರ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮಿತಿ ರಚನೆ ಮಾಡಿರುವುದು ಸಂತಸ ತಂದಿದೆ ಎಂದು ಅರುಣ ಶಹಾಪುರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.