ವಿಜಯಪುರ: ಸರಕಾರಿ ಕ್ಷೇತ್ರದ ಉದ್ಯೋಗಗಳಲ್ಲಿಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ಆಮ್ ಆದ್ಮಿ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು ಎಂದು ವಿಜಯಪುರ ನಗರ ವಿಧಾನಸಭೆ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹಾಸಿಂಪೀರ ವಾಲಿಕಾರ ಹೇಳಿದ್ದಾರೆ.
ನಗರದ 28ನೇ ವಾರ್ಡಿನ ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಆಮ್ ಆದ್ಮಿ ಪಕ್ಷ ಜನರ ಸೇವೆಗಾಗಿ ಸ್ಥಾಪಿಸಲಾಗಿದ್ದು, ಈ ಪಕ್ಷದಲ್ಲಿ ಜನರ ಹಿತಕ್ಕಾಗಿ ಪ್ರಥಮ ಆದ್ಯತೆ ನೀಡಲಾಗುತ್ತದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದರ ಜೊತೆಗೆ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಆರೋಗ್ಯವನ್ನು ನೀಡುವುದೇ ನಮ್ಮ ಗುರಿ ಎಂದು ತಿಅವರು ತಿಳಿಸಿದರು.
ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುವುದು. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಯೋಜನೆಗಳು ತಲುಪುವ ಗುರಿ ಹೊಂದಿದ್ದೇವೆ. ದೆಹಲಿ ಮತ್ತು ಪಂಜಾಬ ರಾಜ್ಯಗಳಲ್ಲಿ ಬೇರೆ ಎಲ್ಲ ಪಕ್ಷಗಳಿಗಿಂತಲೂ ಅತ್ಯುತ್ತಮವಾಗಿ ಆಮ್ ಆದ್ಮಿ ಪಕ್ಷದ ಸರಕಾರ ಆಡಳಿತ ನೀಡುತ್ತಿದೆ. ಜನರು ಮತ ನೀಡಿ ಗೆಲ್ಲಿಸಿದರೂ ಯಾವ ಪಕ್ಷಗಳು ಜನತೆಗಾಗಿ, ಜನರಿಗೋಸ್ಕರ್ ಕೆಲಸ ಮಾಡಿಲ್ಲ. ಆದರೆ, ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ಬೇಕಿದೆ. ಜನರು ನೀಡಿದ ಒಂದು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅವರ ನಂಬಿಕೆಯನ್ನು ಉಳಿಸಿಕೊಳ್ಳುವಂಥ ಕೆಲಸವನ್ನು ನಾನು ವಿಜಯಪುರದಲ್ಲಿ ಮಾಡುತ್ತೇನೆ. ಸರ್ವಜನಾಂಗದ ಹಿತವನ್ನು ಕಾಪಾಡುವ ಮೂಲಕ ಅಭಿವೃದ್ಧಿಯ ಕೆಲಸಗಳನ್ನು ಮಾಡುವುದೇ ನನ್ನ ಗುರಿ. ಹೀಗಾಗಿ ಜನರು ಈ ಬಾರಿ ನನಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸರ್ವಾನಂದ ಕೂಬರಡ್ಡಿ, ಮುದಸ್ಸರ ವಾಲಿಕಾರ, ನಾಗರಾಜ ಹೊಸಳ್ಳಿ, ಲಕ್ಷ್ಮಿ ಬಿರಾದಾರ, ಮಹಮ್ಮದ್ ವಾಲಿಕಾರ, ಸುರೇಶ ಜತ್ತಿ, ಕಸ್ತೂರಿ ಸಾರವಾಡ, ಸಂಗೀತಾ ಮಸೂತಿ, ಹಾಫೀಜ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.