ವಿಜಯಪುರ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಚಾರ ಸಾಮಗ್ರಿಗಳನ್ನು ದೃಢೀಕರಣವಿಲ್ಲದೇ ಮುದ್ರಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿಗಳು ಮತ್ತು ಯಾವುದೇ ಕರಪತ್ರಗಳಲ್ಲಿ ಆಕ್ಷೇಪಾರ್ಹ ಅಂಶಗಳು ಇರಬಾರದು. ಚುನಾವಣೆ ನಿಯಮದಂತೆ ಮುದ್ರಕರು ಪರಿಶೀಲಿಸಿ, ನಿಗದಿ ಪಡಿಸಿದ ನಮೂನೆ-ಎ ಹಾಗೂ ನಮೂನೆ-ಬಿ ಯಲ್ಲಿ ದೃಢೀಕರಿಸಿಕೊಳ್ಳಬೇಕು. ಬ್ಯಾನರ್, ಫೊಸ್ಟರ್, ಮುದ್ರಿಸುವ ಮೊದಲು ಪ್ರಕಾಶಕರ ಗುರುತಿನ ಬಗ್ಗೆ ಇಬ್ಬರು ಅನುಮೋದರರೊಂದಿಗೆ ದೃಢೀಕರಣವನ್ನು ಪಡೆದಿರಬೇಕು. ಗುರುತಿನ ದೃಡೀಕರಣವಿಲ್ಲದೇ ಮುದ್ರಣ ಮಾಡಬಾರದು. ಕರಪತ್ರ ಫೊಸ್ಟರ್ ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆಯನ್ನು ನಮೂದಿಸಬೇಕು. ನಿಯಮ ಉಲ್ಲಂಘನೆಯಾದರೆ ಪ್ರಜಾಪ್ರತಿ ನಿಧಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಚುನಾವಣೆ ಆಯೋಗದ ಸುವಿಧಾ ಹಾಗೂ ಸಿ-ವ್ಹಿಜಿಲ್ ತಂತ್ರಾಂಶವನ್ನು ಹೆಚ್ಚೆಚ್ಚು ಬಳಸಿಕೊಂಡು ಅತ್ಯಂತ ಸರಳವಾಗಿ ನಾನಾ ಅನುಮತಿ ಪಡೆಯಬಹುದಾಗಿದೆ. ಇದರಿಂದ ಸಮಯವೂ ಉಳಿತಾಯವಾಗಲಿದೆ. ಚುನಾವಣೆಗೆ ಸಂಬಂಧಿಸಿದ ದೂರುಗಳಿಗಾಗಿ ಸಂಖ್ಯೆ 1950 ಸಹಾಯವಾಣಿ ಸ್ಥಾಪಿಸಲಾಗಿದೆ. ಈ ಸಹಾಯವಾಣಿಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ನಾನಾ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚಿನ ಮತದಾರರಿರುವ 16 ಮತಗಟ್ಟೆಗಳಿರುವುದರಿಂದ ಅದೇ ಕಟ್ಟಡದಲ್ಲಿ ಹೆಚ್ಚುವರಿಯಾಗಿ ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವಿಎಂ ಮತಯಂತ್ರಗಳನ್ನು ಈಗಾಗಲೇ ಮೊದಲನೇ ಯಾದೃಚ್ಛಿಕ(Randomisation) ಕಾರ್ಯ ಪೂರ್ಣಗೊಳಿಸಲಾಗಿದೆ. ಜಿಲ್ಲೆಯ 8 ಮತಕ್ಷೇತ್ರಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ರವಾನಿಸಲಾಗಿದೆ. ಎರಡನೇ ಯಾದೃಚ್ಛಿಕ ಕಾರ್ಯ ಆಯಾ ಮತಕ್ಷೇತ್ರದಲ್ಲಿ ಅಲ್ಲಿನ ಚುನಾವಣಾಧಿಕಾರಿಗಳ ಹಂತದಲ್ಲಿ ನಡೆಸಲಾಗುವುದು ಎಂದು ಡಿಸಿ ತಿಳಿಸಿದರು.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಚುನಾವಣೆ ವೆಚ್ಚವನ್ನು ರೂ. 40ಲಕ್ಷ ಮೀರಕೂಡದು ಎಂದು ಚುನಾವಣೆ ಆಯೋಗ ನಿಗದಿ ಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ದರಪಟ್ಟಿಗಳನ್ನು ಈಗಾಗಲೇ ಸಲ್ಲಿಸಲಾಗಿದೆ. 2072ರ ಮತಗಟ್ಟೆಗಳ ಪೈಕಿ 1036 ಮತಗಟ್ಟೆಗಳ ವೆಬ್‍ಕಾಸ್ಟಿಂಗ್ ನಡೆಸಲಾಗುವುದು. ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಿರಂತರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಿಕೊಳ್ಳಬೇಕು. ಪ್ರತಿಯೊಬ್ಬರು ಚುನಾವಣೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅನಾವಶ್ಯಕ ದೂರುಗಳಿಗೆ ಆಸ್ಪದ ನೀಡಬಾರದು. ಚುನಾವಣಾ ಸಂದರ್ಭ ಇರುವುದರಿಂದ ಅಧಿಕಾರಿಗಳು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಗಮನಕ್ಕೆ ತರುವಂತೆ ಅವರು ಸಲಹೆ ನೀಡಿದರು.
80 ವರ್ಷ ಮೇಲ್ಪಟ್ಟ 38727 ಮತದಾರರು
ಜಿಲ್ಲೆಯಲ್ಲಿ ಇ.ಆರ್.ಓ.ನೆಟ್ ತಂತ್ರಾಶದ ಪ್ರಕಾರ ಒಟ್ಟು 38727 ಜನ 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ 20273 ವಿಶೇಷ ಚೇತನ ಮತದಾರರಿದ್ದಾರೆ. ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಪ್ರೇರೆಪಿಸಬೇಕು. ಅದ್ಯಾಗ್ಯೂ ಮತಗಟ್ಟೆಗೆ ಬಾರದಿರುವ ಅನಿವಾರ್ಯ ಪ್ರಸಂಗದಲ್ಲಿ ಮತದಾನಕ್ಕೆ ಮುಂಚಿತವಾಗಿ ಆಯೋಗ ನಿಗದಿ ಪಡಿಸಿದ ದಿನದಂದು ಮೈಕ್ರೋ ಆಬ್ಜರ್ವರ್ ಹಾಗೂ ಓರ್ವ ವಿಡಿಯೋಗ್ರಾಫರ್‍ದೊಂದಿಗೆ ಸಂಬಂಧಿಸಿದ ನಿಯೋಜಿತ ಅಧಿಕಾರಿಗಳು ಮತದಾರರಲ್ಲಿಗೆ ಹೋಗಿ ಬ್ಯಾಲೆಟ್ ಪತ್ರದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಆಯೋಗದ ನಿರ್ದೇಶನದಂತೆ ಈ ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈಗಾಗಲೇ ಕೇಂದ್ರ ಮೀಸಲು ಪೊಲೀಸ್ ಪಡೆಗಳು ಹಾಗೂ ಪೋಲಿಸ್‍ರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಸಿಗಾಗಿ ಸುದ್ದಿ, ಪ್ರಕಟಗೊಳಿಸುವ ಮುನ್ನ, ವಿಡಿಯೋ, ಆಡಿಯೋಗಳನ್ನು ಪೂರ್ವ ಪ್ರಮಾಣೀಕರಣಕ್ಕೆ ಒಳಗೊಳಪಡಿಸಬೇಕು. ಸಾಮಾಜಿಕ ಜಾಲತಾಣ ಬಳಸುವ ರಾಜಕೀಯ ಪಕ್ಷಗಳು ಪೂರ್ವ ಪ್ರಮಾಣೀಕರಣವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಏ. 13 ಗುರವಾರದಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಏ. 20 ಗುರುವಾರ ಕೊನೆಯ ದಿನವಾಗಿದೆ. ಏ. 21 ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ. 24 ಸೋಮವಾರ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10 ರಂದು ಬುಧವಾರ ಮತದಾನ ನಡೆಯಲಿದೆ. ಮೇ.13 ಶನಿವಾರ ಮತ ಎಣಿಕೆ ನಡೆಯಲಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ನವರ ತಿಳಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನಾನಾ ರಾಜಕೀಯ ಪಕ್ಷಗಳ ಮುಖಂಡರಾದ ಚನ್ನಬಸಪ್ಪ ನಂದರಗಿ, ಜಮೀರ ಎ. ಇನಾಂದಾರ್, ನಿತೇಶ ತೊರವಿ, ಎಚ್. ಎಸ್. ದಳವಾಯಿ, ಇರ್ಫಾನ್ ಶೇಖ್, ರಾಜು ಹಿಪ್ಪರಗಿ, ಎಸ್. ಎ. ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.