ಚುನಾವಣೆ ಕಾರ್ಯದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮಕ್ಕೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ಚುನಾವಣೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಅಡೆತಡೆ ಉಂಟಾಗದಂತೆ ಮತದಾನ ನಡೆಯುವ ದಿನದಂದು ವೆಬ್‍ಕಾಸ್ಟಿಂಗ್ ಸೇರಿದಂತೆ ಮತದಾನದ ಮಾಹಿತಿ ವಿವರಗಳನ್ನು ತತಕ್ಷಣದಲ್ಲಿ ನೀಡಲು ಯಾವುದೇ ಅಡೆತಡೆಯಾಗದಂತೆ ಏರ್‍ಟೆಲ್-ಜಿಯೋ ಸೇರಿದಂತೆ ಹೈಸ್ಪೀಡ್ ಇಂಟರ್‍ನೆಟ್ ಸೇವೆ ಸೌಲಭ್ಯ ಒದಗಿಸುವಂತೆ ಸೇವಾದಾರರಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ಚುನಾವಣಾ ಕಾರ್ಯಕ್ಕೆ ನಿಯೋಜಿತ ನೋಡಲ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ, ಅವರು,ಜಿಲ್ಲೆಯಲ್ಲಿ ಒಟ್ಟು 2072 ಮತಗಟ್ಟೆ ಸ್ಥಾಪಿಸಲಾಗಿದೆ.ಚುನಾವಣಾ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ದೋಷವುಂಟಾಗದಂತೆ ಮುಂಚಿತವಾಗಿಯೇ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳಬೇಕು.  ಪೋಸ್ಟರ್ ಬ್ಯಾಲೆಟ್‍ಗೆ  ಸಂಬಂಧಿಸಿದ ಮತಪತ್ರಗಳನ್ನು ನಿಗದಿತ ಸಮಯದಲ್ಲಿ ತಲುಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಆಗಮಿಸುವ ಸಾಮಾನ್ಯ ವೀಕ್ಷಕರು ಮತ್ತು ವೆಚ್ಚ ವೀಕ್ಷಕರಿಗೆ ಸಮನ್ವಯಾಧಿಕಾರಿಗಳಾಗಿ ಈಗಾಗಲೇ ನೇಮಿಸಿ ಆದೇಶಿಸಲಾಗಿದೆ. ಸಮನ್ವಯಾಧಿಕಾರಿಗಳೂ ತಮ್ಮ ಕಾರ್ಯವನ್ನು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸೂಕ್ತವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು. ವಾಹನಗಳಲ್ಲಿ  ವ್ಯತ್ಯಾಸವಾದಲ್ಲಿ ತತಕ್ಷಣದಲ್ಲಿ ಪರ್ಯಾಯ ವಾಹನ ವ್ಯವಸ್ಥೆಗೆ ಕ್ರಮ ವಹಿಸಬೇಕು. ಸಮನ್ವಯಾಧಿಕಾರಿಗಳಿಗೆ ಗೊತ್ತುಮಾಡಿದ ಅಥವಾ ನಿಯೋಜಿಸಿದ ಸ್ಥಳದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅರಿವಿರಬೇಕು.ಸಮನ್ವಯಾಧಿಕಾರಿಗಳು ಆಯಾ ಮತಕ್ಷೇತ್ರದ ಎಲ್ಲಾ ಚುನಾವಣೆಗೆ ನಿಯೋಜಿತ ಅಧಿಕಾರಿಗಳ ವಿಳಾಸ-ವಿವರ ಸಂಪರ್ಕ ಸಂಖ್ಯೆಗಳನ್ನು ಹೊಂದಿರಬೇಕು. ಅವಶ್ಯಕ ಸಾಮಗ್ರಿಗಳಾದ ನೋಟ್ ಪ್ಯಾಡ್, ಮೋಬೈಲ್, ಪೆನ್‍ಡ್ರೈವ್, ವೆಚ್ಚ ಮಾಹಿತಿ ನಮೂನೆ ಸೇರಿದಂತೆ ವಿವಿಧ ಅವಶ್ಯಕ ಸಾಮಗ್ರಿಗಳನ್ನು ಜೊತೆಯಲ್ಲಿಟ್ಟುಕೊಂಡಿರಬೇಕು. ನಿರ್ವಾಚನಾಧಿಕಾರಿಗಳ ಮಾಹಿತಿ ಕೈಪಿಡಿ ಕೂಲಂಕೂಷವಾಗಿ ಅರಿತಿರಬೇಕು ಎಂದು ಹೇಳಿದರು.

ವಿಜಯಪುರ ಡಿಸಿ ಡಾ. ದಾನಮ್ಮನವರ ಅಧಿಕಾರಿಗಳೊಂದಿಗೆ ಚುನಾವಣೆ ಪ್ರಕ್ರಿಯೆ ಕುರಿತು ಸಭೆ ನಡೆಸಿದರು

ವೆಚ್ಚ ಸಮನ್ವಯಾಧಿಕಾರಿಗಳಿಗೆ ನಿಯಮಿತವಾಗಿ ತರಬೇತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು,  ಚುನಾವಣೆ ಶಿಷ್ಠಾಚಾರ ಒದಗಿಸುವಲ್ಲಿ ಲೋಪ , ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಕೆಲಸದಲ್ಲಿ ಯಾವುದೇ ಆಚಾತುರ್ಯವಾಗದಂತೆ ನೋಡಿಕೊಳ್ಳಬೇಕು ಜಿಲ್ಲೆಗೆ ಆಗಮಿಸುವ ವಿವಿಧ ವೀಕ್ಷಕರಿಗೆ ವಸತಿ ವ್ಯವಸ್ಥೆ, ವಾಹನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮನ್ವಯಾಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಸರಿಪಡಿಸಿಕೊಳ್ಳಬೇಕು.  ಗೊಂದಲಕ್ಕೀಡಾಗದೇ,ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಡಿಸಿ ಸೂಚನೆ ನೀಡಿದರು.

ಚುನಾವಣಾ ವೆಚ್ಚ ಮಾಹಿತಿಯನ್ನು ವಿವರವನ್ನು ನಿಯಮಿತವಾಗಿ ಪಡೆದುಕೊಳ್ಳಬೇಕು. ಕೂಲಂಕೂಷವಾಗಿ ಪರಿಶೀಲನೆ ನಡೆಸಬೇಕು. ಸಂಶಯ ಬಂದಲ್ಲಿ ನಿಯೋಜಿತ ಮೇಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸಂಶಯ ನಿವಾರಣೆಗೆ ಕ್ರಮ ಕೈಗೊಳ್ಳಬೇಕುಯ  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಖಿ ಮತಗಟ್ಟೆಗಳಲ್ಲಿ ಪಿಂಕ್ ಸಾರಿ ಥೀಮ್ ಅಳವಡಿಸಬೇಕು. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿಗಳನ್ನೇ ನಿಯೋಜಿಸಬೇಕು. ಹಾಗೂ 1 ವಿಶೇಷ ಚೇತನ ಮತದಾರರ ಬೂತ್‍ಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆಯಾದ್ಯಂತೆ 57 ಮತಗಟ್ಟೆಗಳನ್ನು ನಾನಾ ಅಂಶಗಳನ್ನೊಳಗೊಂಡ ಥೀಮ್ ಆಧಾರಿತ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಲಂಬಾಣಿ ವೇಷ-ಭೂಷಣ ಆಧಾರಿತ ಮತಗಟ್ಟೆಗಳ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.  ತರಬೇತಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಬೇಕು. ಎಲ್ಲ ತರಬೇತಿ ಕೇಂದ್ರಗಳಿಗೆ ಭೇಟಿ ನಿಡಿ, ಕಾರ್ಯಾನುಷ್ಠಾನಕ್ಕೆ ಆದ್ಯತೆ ನಿಡಬೇಕು. ಮತ ಏಣಿಕೆ ಸಿಬ್ಬಂದಿ ತರಬೇತಿಗೆ ನಿಯೋಜಿಸಬೇಕು ಎಂದು ಅವರು ಹೇಳಿದರು.

ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರಗಳ ವಿವರ

ಜಿಲ್ಲೆಯ ವಿಧಾನಸಭೆ ಚುನಾವಣೆಯ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳದ ಎಂಜಿಇಸಿ ಕಾಲೇಜ್‍ನಲ್ಲಿ, ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇವರ ಹಿಪ್ಪರಗಿ ಎ. ಬಿ. ಸಾಲಕ್ಕಿ ಪದವಿಪೂರ್ವ ಕಾಲೇಜ್ ನಲ್ಲಿ, ಬಸವನ ಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನ ಬಾಗೇವಾಡಿ ಶ್ರೀ ಬಸವೇಶರ್ವ ಸರಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ, ಬಬಲೇಶ್ವರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಬಲೇಶ್ವರ ಸರಕಾರಿ ಐಟಿಐ ಕಾಲೇಜ್‍ನಲ್ಲಿ, ಬಿಜಾಪುರ ನಗg ಹಾಗೂ ನಾಗಠಾಣಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಸೈನಿಕ್ ಶಾಲೆಯಲ್ಲಿ, ಇಂಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಹಾಗೂ ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿಂದಗಿಯ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ್ ಕಾಲೇಜ್‍ನಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾದ್ಯಂತ ಚುನಾವಣೆ ಕಾರ್ಯಗಳಿಗೆ ಸಂಬಂಧಿಸಿದಂತೆ  ಸೆಕ್ಟರ್ ಅಧಿಕಾರಿಗಳಿಗೆ 102 ವಾಹನಗಳಿದ್ದು, 69 ವಾಹನಗಳ ಹೆಚ್ಚುವರಿ ಅವಶ್ಯಕತೆ ಇದೆ. ಅದರಂತೆ ಎಫ್‍ಎಸ್‍ಟಿ ತಂಡಗಳಿಗೆ 40 ವಾಹನಗಳಿದ್ದು, ಹೆಚ್ಚುವರಿ 32 ವಾಹನಗಳ ಅವಶ್ಯಕತೆ ಹಾಗೂ ವಿಎಸ್‍ಟಿ ತಂಡಗಳಿಗೆ 8 ವಾಹನಗಳು ಲಭ್ಯವಿದ್ದು, ಹೆಚ್ಚುವರಿಯಾಗಿ 16 ವಾಹನಗಳ ಅವಶ್ಯಕತೆ ಇರುವುದರಿಂದ ವಾಹನಗಳ ನಿಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಅಗತ್ಯ ಸೇವೆಗಳಲ್ಲಿ 12 ಇಲಾಖೆಗಳನ್ನು ಗುರುತಿಸಲಾಗಿದ್ದು, ಈ ಮತದಾರರಿಗೆ ಅಂಚೆ ಮತದಾನ ಪದ್ಧತಿಯಡಿ ಮತದಾನ ಅವಕಾಶ ಕಲ್ಪಿಸಬೇಕು. ಈವರೆಗೆ 140 ಅಗತ್ಯ ಸೇವೆಗಳ ಇಲಾಖೆಯ ನೌಕರರು ಅಂಚೆ ಮತಪತ್ರಕ್ಕಾಗಿ ಮನವಿ ಸಲ್ಲಿಸಿದ್ದಾರೆ.

1866 ಸೇವಾ ಮತದಾರರು

ಜಿಲ್ಲೆಯಲ್ಲಿ ಸಿಆರಪಿಎಫ್, ಬಿಎಸ್‍ಎಫ್. ಐಟಿಬಿಟಿ, ಕೆಎಸ್‍ಆರ್‍ಪಿಯ 1866 ಮತದಾರರಿದ್ದು, ಇಟಿಪಿಬಿಎಸ್ (ಎಲೆಕ್ಟ್ರಾನಿಕಲಿ ಟ್ರಾನ್ಸಿಮಿಟೆಡ್ಗ ಪೋರ್ಟಲ್ ಬ್ಯಾಲೆಟ್ ಸಿಸ್ಟಮ್) ಮೂಲಕ ಆನ್‍ಲೈನ್ ಮತಪತ್ರ ಕಳುಹಿಸಲು ಕ್ರಮ ವಹಿಸಬೇಕು. ಚುನಾವಣಾ ಕರ್ತವ್ಯದಲ್ಲಿ ನಿರತರಾದ 16,255 ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ ಸೇರಿದಂತೆ ಜಿಲ್ಲೆಯ ಚುನಾವಣಾ ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿಗಳು ಸೇರಿದಂತೆ ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌