ವಿಜಯಪುರ: ನಾನಾ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದ ಶಿವಗಿರಿ ರಸ್ತೆಯಲ್ಲಿರುವ ಮತ್ತು 17ನೇ ವಾರ್ಡ್ ವ್ಯಾಪ್ತಿಯ ಸೌಭಾಗ್ಯ ನಗರ ನಿವಾಸಿಗಳು ಈ ಬಾರಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅಲ್ಲದೇ, ಈ ಕುರಿತು ಬಡಾವಣೆಯಲ್ಲಿ ಫ್ಲೆಕ್ಸ್ ಕೂಡ ಅಳವಡಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಇಲ್ಲಿನ ಮುಖಂಡರು ಶ್ರೀ ಹನುಮಾನ ಮಂದಿರ ಸೇವಾ ಸಮಿತಿ ನೇತೃತ್ವದಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ತಮ್ಮ ಬಡಾವಣೆಯಲ್ಲಿ ಕಳೆದ ಐದು ವರ್ಷಗಳಿಂದ ರಸ್ತೆ ಮಾಡಿಲ್ಲ. 24×7 ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಬಡಾವಣೆ ಸುತ್ತಮುತ್ತ ಕುಡುಕರು ಮತ್ತು ಕಳ್ಳ ಕಾಕರ ಹಾವಳಿಯನ್ನು ತಡೆಗಟ್ಟುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಉದ್ಯಾನವನ ಮತ್ತು ಆಟದ ಮೈದಾನ ಮಾಡದಿರುವುದರಿಂದ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಆಟವಾಡಲು ಮತ್ತು ವಾಕಿಂಗ್ ಮಾಡಲು ಸಮಸ್ಯೆ ಎದುರಾಗಿದೆ. ಇಲ್ಲಿ ಒಳಚರಂಡಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಇಲ್ಲಿನ ಹನುಮಾನ ದೇವಸ್ಥಾನಕ್ಕೆ ಸರಕಾರದಿಂದ ಸಹಾಯ ಧನ ಒದಗಿಸದ ಕಾರಣ ತಾವು ಈ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಸೌಭಾಗ್ಯ ನಗರ ನಿವಾಸಿಗಳು ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆಯಲ್ಲಿ ಸೌಭಾಗ್ಯ ನಗರ ಬಡಾವಣೆ ನಿವಾಸಿಗಳಾದ ಶಂಕರಗೌಡ ಸಿದ್ದನಗೌಡ ಬಿರಾದಾರ, ಮಲ್ಲಯ್ಯ ಷಡಕ್ಷರಿ ವಿಭೂತಿ, ಶಂಕರಗೌಡ ಗೌಡಪ್ಪಗೌಡ ಬಿರಾದಾರ, ಸುರೇಶ ಎಸ್. ಬಿರಾದಾರ, ಸಪ್ನಾ ಎಸ್. ಬಿರಾದಾರ, ಅನು ಹೂಗಾರ, ಪ್ರಕಾಶ ಎಂ. ಆಲಗೂರ, ಎಂ. ಎಸ್. ವಿಬೂತಿ, ನೀಲಮ್ಮ ಸಿಣಗನಳ್ಳಿ, ಸೌಜನ್ಯ ಬ. ವಾಲಿಕಾರ, ಎಸ್. ಎಂ. ಬಿರಾದಾರ, ಗುರು ಹೊಸಟ್ಟಿ, ಸಂತೋಷ ಉಮರಗಿ, ಸುನಂದಾ ಜವಲಗೇರಿ, ಲಕ್ಷ್ಮಿ ಶಿರಮನಿ, ರವಿ ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ವಿಜಕುಮಾರ ಮೆಕ್ಕಳಕಿ
ಈ ಮಧ್ಯೆ ಚುನಾವಣೆ ಬಹಿಷ್ಕಾರ ಸುದ್ದಿ ತಿಳಿದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮಕ್ಕಳಕಿ ಸೌಭಾಗ್ಯ ನಗರಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ ಆಯುಕ್ತರು, ಕೆಲವೇ ದಿನಗಳಲ್ಲಿ 24×7 ನಿರಂತರ ಕುಡಿಯುವ ನೀರಿನ ಸೌಲಭ್ಯ ಆರಂಭವಾಗಲಿದೆ. ಬೀದಿ ದೀಪಗಳನ್ನ ಅಳವಡಿಸಿ ಕೊಡುವುದಾಗಿ ಅವರು ಭರಸವೆ ನೀಡಿದರು. ಅಲ್ಲದೇ, ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿದರು.