ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎರಡು ದಿನಗಳಲ್ಲಿ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳು, ನಾನಾ ಸಮಾಜದ ಮುಖಂಡರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದಿಂದ ನನಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಈಗ ಟಿಕೆಟ್ ಕೈತಪ್ಪಿಸುವುದರಿಂದ ನೋವು ಆಗಿದೆ. ಅಸಮಾಧಾನ ಕೂಡ ಆಗಿದೆ. ಕಾರ್ಯಕರ್ತರಿಗೂ ಇದರಿಂದ ನೋವು ಮತ್ತು ಅಸಮಾಧಾನವಾಗಿದೆ. ಮತದಾನದ ಮೂಲಕ ಕಾರ್ಯಕರ್ತರ ಅಭಿಪ್ರಾಯ, ಗ್ರೌಂಡ ರಿಪೋರ್ಟ್, ಪಕ್ಷದ ನಿಷ್ಠೆ ಮಾನದಂಡಗಳನ್ನು ಪರಿಗಣಿಸಿ ಟಿಕೆಟ್ ಕೊಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅದು ಹಾಗೆ ಆಗಿಲ್ಲ ಎಂದು ನನಗೆ ಅನಿಸುತ್ತಿದೆ. ಏಕೆಂದರೆ ಅದನ್ನು ಪರಿಗಣಿಸಿದ್ದರೆ ನನಗೆ ಟಿಕೆಟ್ ಸಿಗಬೇಕಿತ್ತು ಎಂದು ಅವರು ತಿಳಿಸಿದರು.
ಬ್ಲ್ಯಾಕ್ ಮೇಲ್ ಮಾಡಿರುವ ಸಾಧ್ಯತೆ ಇದೆ.
ಜಿಲ್ಲಾ ನಾಯಕರ ಶಿಫಾರಸು ಪರಿಗಣಿಸದೇ ರಾಜ್ಯ ನಾಯಕರು ಅವರ ಮುಲಾಜು ಹಿಡಿದ್ದಾರೆ. ಯತ್ನಾಳ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಸಂಶಯವಿದೆ. ಬ್ಲ್ಯಾಕ್ ಮೇಲ್ ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ನಡೆಸಿದ್ದರು. ಆ ಬ್ಲ್ಯಾಕ್ ಮೇಲ್ ಮಾಡಿದ್ದಾರೋ ಅಥವಾ ಇವರ ಚೀರಾಟ, ಒದರಾಟಕ್ಕೆ ಪಕ್ಷದವರು ಅಂಜಿದ್ದಾರೋ ಗೊತ್ತಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದರು.
ಪಕ್ಷ ನಿರ್ಧಾರ ಮರುಪರಿಶೀಲಿಸಲಿ
ಇನ್ನೂ ಸಮಯವಿದೆ. ನಾಳೆ ನಾಮಪತ್ರ ಸಲ್ಲಿಕೆ ಅರಂಭವಾಗಲಿದೆ. ಟಿಕೆಟ್ ಘೋಷಿಸಿರುವ ಯತ್ನಾಳ ಕೂಡ ಇನ್ನೂ ನಾಮಪತ್ರ ಸಲ್ಲಿಸಿಲ್ಲ. ಜಿಲ್ಲೆಯಲ್ಲಿ ಒಂದು ಮೀಸಲು ಕ್ಷೇತ್ರ ಹೊರತು ಬಡಿಸಿ ಇನ್ನೂ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹಾಕಿಲ್ಲ. ರಾಜ್ಯದಲ್ಲಿ ಇನ್ನೂ ಟಿಕೆಟ್ ಘೋಷಣೆ ಮಾಡದ 34 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರಗಳಿಂದಾದರೂ ಯತ್ನಾಳ ಅವರನ್ನು ಪಕ್ಷ ಕಣಕ್ಕಿಳಿಸಲು ಕೂಡಲೇ ನಿರ್ಧಾರ ಕೈಗೊಳ್ಳಲಿ. ಅಲ್ಲಿ ನಿಂತು ಅವರು ಆರಿಸಿ ಬರಲಿ ಎಂದು ಮಾಜಿ ಸಚಿವರು ಹೇಳಿದರು.
ಪ್ರತಿಪಕ್ಷದ ಪ್ರಬಲ ನಾಯಕರ ವಿರುದ್ಧ ಯತ್ನಾಳರನ್ನು ಕಣಕ್ಕಿಳಿಸಲಿ
ಗುಜರಾತ ಗುಜರಾತನೇ. ಕರ್ನಾಟಕ ಕರ್ನಾಟಕವೇ. ನಾವು ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ನಾವೇನೂ ಪಕ್ಷದ ನಿರ್ಣಯಗಳ ವಿರುದ್ಧ ಮಾತನಾಡುತ್ತಿಲ್ಲ. ಯತ್ನಾಳ ಈ ಹಿಂದೆ ದೇವರ ಹಿಪ್ಪರಗಿಯಲ್ಲಿ ಕಣಕ್ಕಿಳಿದಿದ್ದರು. ಒಂದು ಸಲ ಎರಡೂ ಜಿಲ್ಲೆಗಳಿಂದ ಎಂ ಎಲ್ ಸಿ ಗೆ ಸ್ಪರ್ಧಿಸಿದ್ದರು. ಅವರು ನನಗಿಂತಲೂ ಹಿರಿಯರಿದ್ದಾರೆ. ಅವರು ಬೇರೆ ಕ್ಷೇತ್ರಗಳಿಗೆ ಹೋಗಲಿ. ನಮ್ಮ ರಾಜ್ಯ ನಾಯಕರು .ಯತ್ನಾಳರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ನಮ್ಮ ಕೇಂದ್ರ ನಾಯಕರಿಗೆ ಮನವರಿಕೆ ಮಾಡಬೇಕಿತ್ತು. ಇವರಿಗೆ ಬೇರೆ ಕಡೆ ಹಾಕಬೇತ್ತು. ಬೆಂಗಳೂರಿನಲ್ಲಿ ಆರ್. ಅಶೋಕ ಮತ್ತು ವರುಣಾದಲ್ಲಿ ವಿ. ಸೋಮಣ್ಣ ಅವರನ್ನು ಡಿ. ಕೆ. ಶಿವಕುಮಾರ, ಎಸ್. ಸಿದ್ಧರಾಮಯ್ಯ ವಿರುದ್ಧ ಟಿಕೆಟ್ ನೀಡಿದ್ದಾರೆ. ಅದೇ ರೀತಿ ಅವರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸಲಿ. ಡಿ. ಕೆ. ಶಿವಕುಮಾರ ಅವರನ್ನು ಕಟ್ಟಿ ಹಾಕಲು ನೋಡಿದ್ದೀರಿ. ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲ ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕಟ್ಟಿ ಹಾಕಲು ಯಾಕೆ ಹಾಕಲಿಲ್ಲ? ಪಕ್ಕದ ಜಿಲ್ಲೆಯಲ್ಲಿ ಪ್ರಭಾವಿಯಾಗಿರುವ ಕಾಶಪ್ಪನವರ ವಿರುದ್ಧ ಬಸನಗೌಡರನ್ನು ಕಣಕ್ಕಿಳಿಸಬೇಕಿತ್ತು. ಅವರನ್ನು ಯಾಕೆ ಕಟ್ಟಿ ಹಾಕಲಿಲ್ಲ? ಪ್ರಬಲ ನಾಯಕರನ್ನು ಕಟ್ಟಿ ಹಾಕಲುವುದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತನಾ? ಇಲ್ಲಿಯೂ ಕಟ್ಟಿ ಹಾಕಬೇಕಿತ್ತು. ಗೆಲುವು ಅಥವಾ ಸೋನು ಮುಂದಿನ ಮಾತು. ಪಕ್ಷ ಸೂಚನೆ ಕೊಡಬೇಕಿತ್ತು. ಇದನ್ನು ನಮ್ಮ ರಾಜ್ಯ ನಾಯಕರು ಮನವರಿಕೆ ಮಾಡಿಲ್ಲ ಎನಿಸುತ್ತೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಆಂತರಿಕ ಸಮೀಕ್ಷೆ ವಿಚಾರ
ಅಭ್ಯರ್ಥಿಗೆ ಟಿಕೆಟ್ ನೀಡುವ ಕುರಿತು ಈ ಮೊದಲು ಪದಾಧಿಕಾರಿಗಳಿಂದ ಮತದಾನ ಮಾಡಿಸಲಾಗಿತ್ತು. ಅದರ ಆಧಾರದ ಮೇಲೆ ಶೇ. 70ರಷ್ಟು ಮತಗಳು ನನ್ನ ಪರವಾಗಿದ್ದವು. ಅಲ್ಲದೇ, ಗ್ರೌಂಡ್ ರಿಪೋರ್ಟ್ ನಾನು ಗೆಲ್ಲುತ್ತೇನೆ ಎಂದು ಹೇಳಿತ್ತು. ಐಬಿ ರಿಪೋರ್ಟ್ ಮಾಹಿತಿಯಂತೆ ಇವರು ಸೋಲುತ್ತಾರೆ ಎಂದು ಹೇಳಲಾಗಿತ್ತು. ಸೋಲುವವರಿಗೆ ಟಿಕೆಟ್ ನೀಡುತ್ತಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯ ನಾಯಕರು ಇನ್ನೊಮ್ಮೆ ಗಂಭೀರವಾಗಿ ಚಿಂತನೆ ಮಾಡಿ ಬದಲಾವಣೆ ಮಾಡಿ ನನಗೆ ಟಿಕೆಟ್ ನೀಡಬೇಕು. ಕಾರ್ಯಕರ್ತರ ಪಕ್ಷ ಎಂಬುದನ್ನು ಉಳಿಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.
ಎರಡು ದಿನಗಳಲ್ಲಿ ನಿರ್ಧಾರ
30 ವರ್ಷ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಾಲ್ಕು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇದು ಐದನೆ ಚುನಾವಣೆ. ಬಹಳಷ್ಟು ಸಣ್ಣ ವಯಸ್ಸಿನಲ್ಲಿ 30 ವರ್ಷದವನಾಗಿದ್ದಾಗ ಟಿಕೆಟ್ ಪಡೆದಿದ್ದೆ. ಇತ್ತೀಚೆಗೆ ಅಷ್ಟು ವಯಸ್ಸಿನವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಅಲ್ಲಿಂದ ಇಲ್ಲಿಯವರೆಗೆ ಈ ಪಯಣ ನಡೆದಿದೆ. ತುರ್ತು ನಿರ್ಧಾರ ಆಗಬಾರದು. ನಗದಲ್ಲಿರುವ ಎಲ್ಲರ ಅಭಿಪ್ರಾಯ, ಎಲ್ಲ ವರ್ಗದ, ಎಲ್ಲ ಸಮಾಜದ, ಎಲ್ಲ ಕಾರ್ಯಕರ್ತರ, ಹಿತೈಷಿಗಳ ಸಭೆ ತೆಗೆದುಕೊಂಡು ಎರಡು ದಿನಗಳಲ್ಲಿ ನಿರ್ಧಾರ ಪ್ಕಕಟ ಮಾಡುತ್ತೇನೆ.
ಬಣಜಿಗರ ಆಕ್ರೋಶ
ನಮ್ಮ ಸಮಾಜ ಎಂಬುದೂ ಇದೆ. ಇತ್ತೀಚೆಗೆ ಸಬ್ ಕಮ್ಯೂನಿಟಿಯನ್ನೂ ಇತ್ತೀಚೆಗೆ ಅಳೆಯುತ್ತಿದ್ದಾರೆ. ಆ ಲೆಕ್ಕಾಚಾರ ನೋಡಿದರೆ ನಮ್ಮ ಶೆಟ್ಟರ ಸಮುದಾಯವರು ನಡೆಸಿರುವ ಸಮೀಕ್ಷೆಯಂತೆ ವಿಜಯಪುರ ನಗರ ಮತಕ್ಷೇತ್ರದಲ್ಲಿ ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೇರೆ ಕಡೆಗಳಲ್ಲಿ 10 ರಿಂದ 12 ಸಾವಿರ ಇರಬಹುದು. ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಣಜಿಗ ಸಮುದಾಯದವರು 30 ಸಾವಿರಕ್ಕಿಂತಲೂ ಹೆಚ್ಚಾಗಿದ್ದಾರೆ. ಇದನ್ನು ನಮ್ಮ ಸಮಾಜ ಬಂಧುಗಳು ನನಗೆ ಹೇಳಿದ್ದಾರೆ. ಈ ಹಿಂದೆ ಇಬ್ಬರಿಂದ ಮೂರು ಜನ ಬಣಜಿಗ ಸಮುದಾಯದವರಿಗೆ ಟಿಕೆಟ್ ನೀಡುತ್ತಿದ್ದರು. ಈ ಬಾರಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಯಾರಿಗೂ ನೀಡಿಲ್ಲ ಎಂದು ಸಮಾಜದ ಮುಖಂಡರು ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯೇ ಸ್ಪರ್ಧೆ ಮಾಡಿ ಎಂದು ನಮ್ಮವರು ಹೇಳಿದ್ದಾರೆ. ನಾನು ಯಾವಾಗಲೂ ಆರ್ ಎಸ್ ಎಸ್ ಮತ್ತು ಹಿಂದುತ್ವದ ಆಧಾರದ ಮೇಲೆಯೇ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಬೇರೆ ಕ್ಷೇತ್ರಕ್ಕೆ ಹೋಗಲ್ಲ
ಯತ್ನಾಳ ಈ ಹಿಂದೆ ಯಡಿಯೂರಪ್ಪ ವಿರುದ್ಧ ಬೈದಿದ್ದಾರೆ. ಸಂಘದ ವಿರುದ್ಧ ಬೈದಿದ್ದಾರೆ. ಕಾರ್ಯಕರ್ತರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇಷ್ಟೋಂದು ಸೊಕ್ಕಿನಿಂದ ಮಾತನಾಡುತ್ತಾರೆ. ಆದ್ದರಿಂದ ಯತ್ನಾಳ ಅವರನ್ನು ಬಿಜೆಪಿಯಿಂದ ಹೊರಗೆ ಹಾಕಿ ಎಂದು ರಾಜ್ಯದ ಬಹಳಷ್ಟು ನಾಯಕರು ಟೀಮ್ ಮಾಡಿಕೊಂಡು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಹೇಳಿದ್ದೇವೆ. ಟಿಕೆಟ್ ಆದರೂ ಕೊಡಲಿಕ್ಕಿಲ್ಲ ಎಂದುಕೊಂಡಿದ್ದೇವು. ಕೊನೆ ಘಳಿಗೆಯಲ್ಲಿ ಬೇರೆ ಕ್ಷೇತ್ರಗಳಿಗಾದರೂ ಅವರಿಗೆ ಟಿಕೆಟ್ ನೀಡಿ ಎಂದು ಹೇಳಿದ್ದೇವು. ಆದರೆ, ಕೇಳಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಪಕ್ಷಗಳಿಂದ ಆಹ್ವಾನ ವಿಚಾರ
ನಾನು ಬೇರೆ ಕ್ಷೇತ್ರಕ್ಕೆ ಹೋಗಲು ಮನಸ್ಸಿಲ್ಲ. ವಿಜಯಪುರ ನನ್ನ ಗ್ರೌಂಡ. ಇಲ್ಲಿಯೇ ತಯಾರಿ ಮಾಡಿಕೊಂಡಿದ್ದೇನೆ. ಕಾರ್ಯಕರ್ತರೂ ಇಲ್ಲಿಯೇ ಇದ್ದೇನೆ. ಮೂರ್ನಾಲ್ಕು ಸಲ ಸ್ಪರ್ಧೆ ಮಾಡಿದ್ದೇನೆ. ಎರಡು ಬಾರಿ ಎಂಎಲ್‌ಎ ಆಗಿದ್ದೇನೆ. ಮಂತ್ರಿಯಾಗಿದ್ದೇನೆ. ಇಲ್ಲಿಯೇ ಸ್ಪರ್ಧಿಸುವ ಇಚ್ಛೆಯಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಧ್ಯಕ್ಕೆ ಬೇರೆ ಪಕ್ಷದವರಾರೂ ನನಗೆ ಆಹ್ವಾನ ನೀಡಿಲ್ಲ. ಆದರೆ, ಈ ಮುಂಚೆ ನನ್ನನ್ನು ತಮ್ಮ ಪಕ್ಷ ಸೇರುವಂತೆ ಆಹ್ವಾನಿಸಿದ್ದರು. ಆಗ ನಾನು ಬಿಜೆಪಿ ಬಿಟ್ಟು ಹೊರಗೆ ಬರಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ ಎಂದು ಹೇಳಿದ್ದೆ. ಕಾರ್ಯಕರ್ತರ ಪಕ್ಷ ಎಂದು
ಲಕ್ಷ್ಮಣ ಸವದಿಗೆ ಅವಕಾಶ ನೀಡಬೇಕಿತ್ತು
ಸವದಿ ಅವರಿಗೂ ಅವಕಾಶ ಮಾಡಿ ಕೊಡಬೇಕಿತ್ತು. ಅವರಿಗೆ ಸಿಗುತ್ತೆ ಎಂದುಕೊಂಡಿದ್ದೆ. ನಾನು ಎಂಎಲ್‌ಎ ಇದ್ದಾಗ ಅವರೂ ಎಂಎಲ್‌ಎ ಆಗಿದ್ದರು. ಎಲ್ಲರೂ ಒಟ್ಟಿಗೆ ಆರಿಸಿ ಬಂದು ಒಗ್ಗಟ್ಟಾಗಿದ್ದೇವು. ಮಹಾದೇವಪ್ಪ ಯಾದವಾಡ, ಎಂ. ಕೆ. ಪಟ್ಟಣಶೆಟ್ಟಿ ಎಲ್ಲರೂ 2004ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿದ್ದೇವು. ಮುಂದೆ ಎರಡು ಬಾರಿ ಎಂಎಲ್‌ಎ ಆಗಿದ್ದೇವು. ಮುಂದೆ ನನಗೆ ಅವಕಾಶ ಸಿಗಲಿಲ್ಲ. ಅವರಿಗೆ ಅವಕಾಶ ಸಿಕ್ಕಿತ್ತು. ಲಕ್ಷ್ಮಣ ಸವದಿ ಅವರಿಗೆ ಒಳ್ಳೆಯ ಛಾತಿ ಇದೆ. ಏಕೆದಂರೆ ಅವರು ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿ ಗೆಲ್ಲಿಸುವ ಶಕ್ತಿಯಿದೆ. ಅವರು ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ನನ್ನ ವಾರಿಗೆ ಇರಬಹುದು. ನಾನು ಜಿಲ್ಲೆ ಬಿಟ್ಟು ಹೊರಗಡೆ ಬಿದ್ದಿಲ್ಲ. ಅವರು ಜಿಲ್ಲೆ ಬಿಟ್ಟು ಹೊರಗಡೆ ಸಲಗರ, ಸಿಂದಗಿ ಬೈ ಎಲೆಕ್ಷನ್ ನಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಅಂಥವರಿಗೂ ಅವಕಾಶ ಕೊಡಲ್ಲ. ನಮ್ಮಂಥವರಿಗೆ ಕಾರ್ಯಕರ್ತರ ಬೆಂಬಲ ಇದ್ದವರಿಗೂ ಟಿಕೆಟ್ ಕೊಡಲ್ಲ ಎಂದರೆ ಹೇಗೆ? ಎಂದು ಅಪ್ಪು ಪಟ್ಟಣಶೆಟ್ಟಿ ಪ್ರಶ್ನಿಸಿದರು.