ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಂಳವಾರ ದೇವರಹಿಪ್ಪರಗಿ ಹಾಗೂ ಸಿಂದಗಿ ತಾಲೂಕಿನ ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಮತಗಟ್ಟೆಗೆ ಭೇಟಿ ನೀಡಿ, ಮತಗಟ್ಟೆಯಲ್ಲಿ ಕಲ್ಪಿಸಲಾದ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಬೈರವಾಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳ ಹಾಗೂ ಕೊಕಟನೂರ ಸರಕಾರಿ ಹಳ್ಳದಲ್ಲಿ ಹೂಳು ತೆಗೆಯುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿ, ಎಲ್ಲ ಅರ್ಹ ಮತದಾರರು ಮತಚಲಾಯಿಸುವಂತೆ ಕರೆ ನೀಡಿದ ಅವರು, ಯಾವೊಬ್ಬ ಮತದಾರರು ಮತದಾನದಿಂದ ದೂರ ಉಳಿಯದೇ ಪ್ರತಿಯೊಬ್ಬರು ಕಡ್ಡಾಯವಾಗಿ ಮತಚಲಾಯಿಸಬೇಕು ಹಾಗೂ ನಿಮ್ಮ ನೆರೆ-ಹೊರೆಯವರನ್ನು ಮತದಾನಕ್ಕೆ ಪ್ರೆರೆಪಿಸಬೇಕು ಎಂದು ಹೇಳಿದರು.
ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಮತದಾನ ಪ್ರಮಾಣ ಕಡಿಮೆಯಾದ ಮತಗಟ್ಟೆ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು. ಹಿಕ್ಕಣಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಬಲೇಶ್ವರ ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಸಸ್ಯಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಬೇವು, ಹುಣಸೆ, ನೇರಳೆ, ಲಿಂಬೆ, ಶ್ರೀಗಂಧ, ತೇಗ ಮುಂತಾದ ಸಸಿಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ದೇವರಹಿಪ್ಪರಗಿಯಲ್ಲಿರುವ ಹಳೆಯ ಸರಕಾರಿ ಶಾಲೆ ಕಟ್ಟಡ ಹಾಗೂ ಕೊಕಟನೂರ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ದೇವರಹಿಪ್ಪರಗಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಸಿಂದಗಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಅರಣ್ಯ ಅಧಿಕಾರಿಗಳಾದ ರಾಜೀವ ಬಿರಾದಾರ, ಎಂ.ವಾಯ್.ಮಲಕಣ್ಣವರ, ಅಧಿಕಾರಿಗಳಾದ ಶಾಂತಗೌಡ ನ್ಯಾಮಣ್ಣವರ, ನಿತ್ಯಾನಂದ ಯಲಗೋಡ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಿ.ಸಿ.ಕನ್ನೊಳ್ಳಿ, ವಸಂತ ಅಮೀನ ಇತರರು ಉಪಸ್ಥಿತರಿದ್ದರು.