ವಿಜಯಪುರ: ಹಿಂದುತ್ವದ ಜೊತೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಇಡೀ ರಾಜ್ಯ ವಿಜಯಪುರದತ್ತ ನೋಡುತ್ತಿದ್ದು, ನಾನು ಇತರೆಡೆ ಪ್ರಚಾರಕ್ಕೆ ಹೋಗಬೇಕಿದೆ. ಹೀಗಾಗಿ ನೀವೇ ಯತ್ನಾಳ ಎಂದು ತಿಳಿದು ಪ್ರಚಾರ ಮಾಡಿ ಎಂದು ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದ ಗುರುಕುಲ ರಸ್ತೆಯಲ್ಲಿ ಪ್ರಚಾರ ಕಾರ್ಯಾಲಯ ಉದ್ಘಾಟನೆ ಅಂಗವಾಗಿ ನಡೆದ ಗೋ ಮಾತೆ ಪೂಜೆ ನೆರವೇರಿಸಿ, ಹೋಮ ಹವನ ನಡೆಸಿ, ವಿಘ್ನೇಶ್ವರ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಗೂಂಡಾಗಿರಿ ನಗರವಾಗಿದ್ದ ವಿಜಯಪುರದಲ್ಲಿ ಜನಸಾಮಾನ್ಯರು ಜೀವನ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಈಗ ಗೂಂಡಾಗಿರಿ ಬಂದ್ ಆಗಿದೆ. ಹೆಣ್ಮು ಮಕ್ಕಳು ಗೌರವಯುತವಾಗಿ ತಿರುಗಾಡುವ ವಾತಾವರಣ ಇದೆ. ಇಷ್ಚೋಂದು ಹಣ ತಂದು ಅಭಿವೃದ್ಧಿ ಮಾಡಿದ್ದು ವಿಜಯಪುರದ ಇತಿಹಾಸದಲ್ಲಿಯೇ ಇರಲಿಲ್ಲ. ಸಿಸಿ ರಸ್ತೆ, ಸ್ವಚ್ಛ ನಗರ, ಅಭಿವೃದ್ಧಿ ಮಾಡಿದ್ದೇನೆ. ನಾವು ಹಿಂದುತ್ವವನ್ನು ಬಿಡಲಿಲ್ಲ. ಕೇವಲ ಭಾಷಣದಲ್ಲಿ ಹಿಂದುತ್ವ ಮಾತನಾಡಲಿಲ್ಲ. ಇಲ್ಲಿ ವಿಜಯಪುರದಲ್ಲಿ ಒಂದು ಇತಿಹಾಸವನ್ನು ನಾವು ನಿರ್ಮಾಣ ಮಾಡಿದ್ದೇವೆ ಎಂದು ಅವರು ಹೇಳಿದರು.
ಒಂದು ಲಕ್ಷಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಮತದಾರರು ಇರುವ ಕಡೆ ನೀವು ಹೇಗೆ ಎಂಎಲ್‌ಎ ಆಗಿದ್ದೀರಿ ಎಂದು ಎಲ್ಲರೂ ನನ್ನನ್ನು ಕೇಳುತ್ತಾರೆ. ಅದಕ್ಕೆ ನಾನು ವಿಜಯಪುರದ ಜನ ಸ್ವಾಭಿಮಾನಿಗಳು, ಮಾರಿಕೊಂಡು ಹೋಗುವ ದುರುಳರು ನಮ್ಮಲ್ಲಿ ಇಲ್ಲ ಎಂದು ಅವರಿಗೆ ಹೇಳಿದ್ದೇನೆ. ಮೇ 13ರ ವರೆಗೆ ಯಾರೂ ಹಾರ ಹಾಕುವುದು, ಸನ್ಮಾನ ಮಾಡುವುದು ಮಾಡಬೇಡಿ. ಸೇಬು ಹಾರ ಬೇಡ. ಮೋಸಂಬಿ ಹಾರವೂ ಬೇಡ. ಯಾವ ಕ್ರೇನ್ ತರಬೇಡಿ. ಮೇ 13 ರಂದು ದಾಖಲೆ ಮತಗಳಿಂದ ಗೆದ್ದು ಮತ್ತೋಮ್ಮ ವಿಜಯಪುರದಲ್ಲಿ ಕೇಸರಿ ಧ್ವಜ ಹಾರಿಸೋಣ. ಅಭಿವೃದ್ಧಿ ಮುಂದುವರೆಸೋಣ ಎಂದು ಅವರು ಹೇಳಿದರು.
ಪಕ್ಷದ ಹಿರಿಯರು ನನಗೆ ನಗರ ಕ್ಷೇತ್ರದಿಂದ ಸ್ಪರ್ದೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಮುಖಂಡರು ಕಾರಣರಾಗಿದ್ದಾರೆ. ಇದು ವಿಜಯಪುರ ನಗರದ ಪ್ರತಿಷ್ಠೆಯ ಚುನಾವಣೆ ಅಗಿದೆ. ಮೋದಿ ಇಲ್ಲದಿದ್ದರೆ ದೇಶ ಇರಲ್ಲ ಎಂದು ಹೇಳಿದ ಅವರು, ಮತದಾರರು ಜಾಗೃತರಾಗಿರಬೇಕು. ಕೆಲವೊಂದು ಕುತಂತ್ರಿಗಳು ಆಟವಾಡುತ್ತಿರುತ್ತಾರೆ. ಈಗಾಗಲೇ ಯಾರ ವಾನಹದಲ್ಲಿ ತಿರುಗಾಡುತ್ತಿದ್ದಾರೆ ಎಂಬುದು ತಮಗೆ ಗೊತ್ತಿದೆ. ರಾತ್ರಿ ಯಾರ ಮನೆಗೆ ಹೋಗುತ್ತಾರೆ? ಯಾರಾರ ಮನೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಯ ಮನೆಗಳಿಗೆ ಜನರನ್ನು ಕಳುಹಿಸುತ್ತಿದ್ದಾರೆ ಎಲ್ಲಾ ಮಾಹಿತಿ ನನ್ನ ಬಳಿ ಇವೆ. ಈಗ ವಿಜಯಪುರ ನಗರದ ಎಲ್ಲ ಸಮುದಾಯದ ಜನ ಇಲ್ಲಿ ಸೇರಿದ್ದೀರಿ. ಇದು ನಿಶ್ಚಿತವಾಗಿಯೂ ಮೇ 13 ರಂದು ಬಿಜೆಪಿ ಧ್ವಜ ಹಾರಲಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ಸರಳವಾಗಿ ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆಯನ್ನು ಅದ್ಧೂರಿಯಾಗಿ ನಡೆಸುವ ಅವಶ್ಯಕತೆ ಇಲ್ಲ. ಬಹಳ ಸರಳವಾಗಿ ನಾಮಪತ್ರ ಸಲ್ಲಿಸಲಾಗುವುದು. ಹೆಚ್ಚು ಮತದಾನ ಮಾಡಿಸುವ ಕಡೆಗೆ ನಾವು ಒತ್ತು ನೀಡಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ಶೇ. 100ರಷ್ಟು ಮತದಾನ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಅದೇ ರೀತಿ ನಾವೂ ಕೂಡ ಶೇ. 100ರಷ್ಟು ಮತದಾನ ಮಾಡಿಸಿದರೆ 50 ಸಾವಿರ ಮತಗಳ ಅಂತರದಿಂದ ವಿಜಯಪುರ ನಗರ ಮತಕ್ಷೇತ್ರದಿಂದ ಗೆಲುವು ಸಾಧಿಸಲಿದ್ದೇವೆ. ಇದಕ್ಕಾಗಿ ಎಲ್ಲ ಕಾರ್ಯಕರ್ತರು ಮನೆ ಮನೆಗಳಿಗೆ ತಿರುಗಾಡಿ ಮತದಾನ ಮಾಡಿಸಬೇಕು. ಬೆಂಗಳೂರು, ಮುಂಬೈ ಸೇರಿದಂತೆ ಬೇರೆ ಕಡೆ ಕೆಲಸ ಮಾಡುತ್ತಿರುವ ನಮ್ಮ ಜನರು, ಸಂಬಂಧಿಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇದ್ದರೆ ಅವರೆಲ್ಲರನ್ನು ಕರೆಯಿಸಿ ಶೇ. 90 ರಷ್ಟು ಮತದಾನ ಮಾಡಬೇಕು. ಇನ್ನು ಶೇ. 10 ರಷ್ಟು ಮತಗಳು ಬೇರೆ ಬೇರೆ ಕಾರಣಗಳಿಂದ ಮತದಾನವಾಗಿರುವುದಿಲ್ಲ ಎಂದು ಅವರು ಹೇಳಿದರು.
ಇಡೀ ಕರ್ನಾಟಕದಲ್ಲಿ 106% ಲಸೀಕಿಕರಣವಾಗುವ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಸಾಧನೆ ಮಾಡಿದ ಜಿಲ್ಲೆಯಾಗಿದೆ. ಮೂರು ವರ್ಷಗಳಲ್ಲಿ ವಿಜಯಪುರ ನಗರದ ಅಭಿವೃದ್ಧಿ, ಸುರಕ್ಷತೆ ವಾತಾರವಣ, ಗೂಂಡಾಗಿರಿಗೆ ತಡೆ, ಕುಡಿಯುವ ನೀರು ಪೂರೈಕೆ. ರಸ್ತೆ, ಒಳಚರಂಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.