ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಕೆಲಸಗಳಿಂದ ಸಂತಸನಾದ ರೈತರೊಬ್ಬರು ಎಂ. ಬಿ. ಪಾಟೀಲರ ಚುನಾವಣೆ ಖರ್ಚಿಗೆ ಕಾಣಿಕೆಯಾಗಿ ರೂ.50 ಸಾವಿರ ಚೆಕ್‍ನ್ನು ನೀಡಿ ಅಭಿಮಾನ ತೋರಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಬೆಳಿಗ್ಗೆ ಎಂ. ಬಿ. ಪಾಟೀಲರ ನಿವಾಸಕ್ಕೆ ರೈತ ಸ್ನೇಹಿತರೊಂದಿಗೆ ಆಗಮಿಸಿದ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ರೈತ ಶೇಖಪ್ಪ ಚಿಕ್ಕಗಲಗಲಿ ಚೆಕ್ ನೀಡಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಶೇಖಪ್ಪ ಚಿಕ್ಕಗಲಗಲಿ, ನಮ್ಮ ಭಾಗದಲ್ಲಿ ಈ ಮುಂಚೆ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಕೆರೆಗಳಿಗೂ ನೀರು ಸಿಗುತ್ತಿರಲಿಲ್ಲ. ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾದ ನಂತರ ನಮ್ಮ ಭಾಗದಲ್ಲಿ ಸಂಪೂರ್ಣ ನೀರಾವರಿ ಮಾಡಿ ಎಲ್ಲವನ್ನು ಸಮೃದ್ಧಿ ಮಾಡಿದ್ದಾರೆ. ಈ ಮುಂಚೆ ಪ್ರತಿ ಎಕರೆ ಭೂಮಿಯ ಬೆಲೆ ರೂ.10 ಸಾವಿರ ಮಾತ್ರ ಇತ್ತು. ಈಗ ಪ್ರತಿ ಎಕರೆಗೆ ಕನಿಷ್ಠ ರೂ.50 ಸಾವಿರರಂತೆ ಬೆಳೆ ಬೆಳೆಯುತ್ತಿದ್ದೇವೆ. ಎಲ್ಲ ಗ್ರಾಮಗಳು ಶ್ರೀಮಂತವಾಗಿವೆ. ಆರ್ಥಿಕವಾಗಿ ಅಭಿವೃದ್ಧಿಯಾಗಿವೆ. ಪ್ರತಿಯೊಂದು ಊರುಗಳ ಚಿತ್ರಣ ಬದಲಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹಲವರು ಕಾರುಗಳನ್ನು ಖರೀದಿಸಿದ್ದಾರೆ. ನಾವು ಕಳೆದ 30 ರಿಂದ 40 ವರ್ಷಗಳ ಕಾಲ ರಾಜಕಾರಣಿಗಳ ಜೊತೆ ಸಂಪರ್ಕ ಹೊಂದಿದ್ದರೂ ಅವರು ಅಭಿವೃದ್ಧಿ ಮಾಡಿರಲಿಲ್ಲ. ಎಂ. ಬಿ. ಪಾಟೀಲರು ಕ್ರಾಂತಿಕಾರಿ ಬದಲಾವಣೆ ಮಾಡಿದಾರೆ. ಇಂಥ ವ್ಯಕ್ತಿಗಳನ್ನು ತಾವೆಲ್ಲರೂ ಬೆಂಬಲಿಸಬೇಕು. ಅವರೊಂದಿಗೆ ಕೈಜೋಡಿಸಬೇಕು. ಎಂ. ಬಿ. ಪಾಟೀಲರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು. ಇದಕ್ಕಿಂತಲೂ ಉನ್ನತ ಅಧಿಕಾರ ಪಡೆಯಬೇಕು. ಈ ಮೂಲಕ ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಬೇಕು ಎಂಬ ಸದುದ್ದೇಶದಿಂದ ವಿಜಯಪುರಕ್ಕೆ ಬಂದು ಚುನಾವಣೆ ಖರ್ಚಿಗೆ ರೂ.50 ಸಾವಿರ ಹಣದ ಚೆಕ್ ನೀಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದುಂಡಪ್ಪ ಬಡ್ರಿ, ರಮೇಶ ಬಡ್ರಿ, ರಾಜು ಬಡ್ರಿ, ರಮೇಶ ಬರಗಿ ಮತ್ತು ನಂದೆಪ್ಪ ಬಡ್ರಿ ಉಪಸ್ಥಿತರಿದ್ದರು.
ಈ ಮುಂಚೆ ಸಂಗಾಪುರ ಎಸ್.ಎಚ್ ಗ್ರಾಮಸ್ಥರು ತಮ್ಮೂರಿನಲ್ಲಿ ಎಂ. ಬಿ. ಪಾಟೀಲರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿದಾಗ ಇದೇ ರೈತ ಶೇಖಪ್ಪ ಚಿಕ್ಕಗಲಗಲಿ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಒಂದೂವರೆ ಗುಂಟೆ ಜಮೀನನ್ನು ದಾನವಾಗಿ ನೀಡುವ ಮೂಲಕ ಗಮನ ಸೆಳೆದಿದ್ದರು. ಈಗ ಎಂ. ಬಿ. ಪಾಟೀಲರಿಗೆ ಚುನಾವಣೆ ಖರ್ಚಿಗೆ ರೂ. 50 ಸಾವಿರ ಕಾಣಿಕೆ ನೀಡುವ ಮೂಲಕ ಮತ್ತೊಮ್ಮೆ ಅಭಿಮಾನ ಮೆರೆದಿದ್ದಾರೆ.