ಜಿಲ್ಲೆಯ ಜನ ನೆಮ್ಮದಿಯಿಂದ ಜೀವನ ಸಾಗಿಸುವ ಕೆಲಸ ಮಾಡಿದ್ದೇನೆ- ಎಂ. ಬಿ. ಪಾಟೀಲ

ವಿಜಯಪುರ: ಜಿಲ್ಲೆಯ ಜನ ನೆಮ್ಮದಿಯ ಬದುಕು ಸಾಗಿಸುವ ಕೆಲಸ ಮಾಡಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಡೆದ ಜಲ ರತ್ನಾಕರ ಪ್ರಶಸ್ತಿ ಪ್ರಧಾನ ಮತ್ತು ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಲಸಂಪನ್ಮೂಲ ಸಚಿವನಾಗಿದ್ದಾಗ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಈ ಬಾಗದಲ್ಲಿ ರೂ. 14000 ಕೋ. ವೆಚ್ಚದಲ್ಲಿ ನಾನಾ ನೀರಾವರಿ ಯೋಜನೆಗಳನ್ನು ಮಾಡಿದ್ದೇನೆ. ಇದರಿಂದಾಗಿ ರೈತರು ತೋಟಗಾರಿಕೆ ಬೆಳೆಗಳ ರಕ್ಷಣೆಗಾಗಿ ಪ್ರತಿವರ್ಷ ಟ್ಯಾಂಕರ್ ಮೂಲಕ ನೀರು ಖರೀದಿಸುವ ಅನಿವಾರ್ಯತೆ ತಪ್ಪಿದೆ. ಶ್ರೀಗಳು ನನಗೆ ಜಲನಾಯಕ ಎಂದು ಬಿರುದು ನೀಡಿರುವುದು ವಿಶ್ವಶ್ರೇಷ್ಠ ಪ್ರಶಸ್ತಿಯಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಜನ ಶ್ರೀಮಂತರಾಗಿ ನೆಮ್ಮದಿಯ ಜೀವನ ಸಾಗಿಸಲು ಕ್ರಮ ಕೈಗೊಂಡಿದ್ದೆ. ಜೀವನಕ್ಕೆ ಅಗತ್ಯವಾಗಿರುವ ಜಲ, ವೃಕ್ಷ, ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಮಮದಾಪುರದ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಎಂ. ಬಿ. ಪಾಟೀಲರ ಅಭಿವೃದ್ಧಿ ಕಾರ್ಯಗಳಿಂದಾಗಿ ಮತಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಅವರು ಯಾರಿಗೂ ಮೋಸ ಮಾಡಿಲ್ಲ. ಅನ್ಯಾಯ ಮಾಡಿಲ್ಲ. ಯಾರಿಂದಲೂ ಏನೂ ಕಿತ್ತುಕೊಂಡಿಲ್ಲ. ಬರದ ನಾಡಾಗಿದ್ದ ವಿಜಯಪುರ ಜಿಲ್ಲೆಯನ್ನು ಮಲೆನಾಡನ್ನಾಗಿ ಮಾಡಿದ್ದಾರೆ. ನಾಡಿನ ಎಲ್ಲ ಸಂತರು, ಯುವಕರು, ಮಹಿಳೆಯರು ಅವರ ಪರ ಇರುವ ಕಾರಣ ಅವರ ಭವಿಷ್ಯ ಉಜ್ವಲವಾಗಿದೆ. ಉತ್ತಮ ಸಂಸ್ಕಾರ ಹೊಂದಿರುವ ನಾಯಕರ ಎಲ್ಲರೂ ಇರಬೇಕು ಎಂದು ಹೇಳಿದರು.

ಯಕ್ಕುಂಡಿ ಗ್ರಾಮಸ್ಥರು ಎಂ. ಬಿ. ಪಾಟೀಲ ಅವರಿಗೆ ಜಲ ರತ್ನಾಕರ ಪ್ರಶಸ್ತಿ ಪ್ರಧಾನ ಮಾಡಿದರು

ಮುಖಂಡರಾದ ಕಂಠೀರವ ಕುಲ್ಲೊಳ್ಳಿ ಮಾತನಾಡಿ, ಮೊದಲು ಜನ ಗುಳೆ ಹೋಗುತ್ತಿದ್ದ ಕಾರಣ ಈ ಭಾಗದ ಗ್ರಾಮಗಳಲ್ಲಿ ಮನೆಗಳಿಗೆ ಜನ ಕೀಲಿ ಹಾಕುತ್ತಿದ್ದರು. ಈಗ ಇದೇ ಜನ ತಂತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರಣ ಮನೆಗಳಿಗೆ ಕೀಲಿ ಹಾಕುತ್ತಿದ್ದಾರೆ. ಇದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಅವರಿಗೆ ಗ್ರಾಮಸ್ಥರು ಜಲ ರತ್ನಾಕರ ಬಿರುದು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕುಬೇರ ಗುರುರಾಜ ಗೋಡೆಕರ ರಚಿಸಿರುವ ಎಂ. ಬಿ. ಪಾಟೀಲರ ಸಾಧನೆಯ ಹೆಜ್ಜೆಗಳು ಪುಸ್ತಕ, ಶಿವರಾಜ ಬಡಿಗೇರ ರಚಿಸಿರುವ ಮನದಂಗಳದ ಹೂ ಕವನ ಸಂಕಲನ ಮತ್ತು ಭಾಗ್ಯಶ್ರೀ ಆರ್. ಪಾಟೀಲ ಬಿರಾದಾರ ರಚಿಸಿರುವ ಜಲೋಪಕಾರಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಅಲ್ಲದೇ, ಪುಸ್ತಕ ರಚನೆಕಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಈರನಗೌಡ ಬಿರಾದಾರ, ಟಿ. ಎಸ್. ಕುಲಕರ್ಣಿ, ಪ್ರಕಾಶ ಸೊನ್ನದ, ಶೇಕಪ್ಪ ಕೊಪ್ಪದ, ವಿ. ಎಸ್. ಪಾಟೀಲ,ಚನ್ನಪ್ಪ ಕೊಪ್ಪದ, ಪ್ರಕಾಶ ಸೊನ್ನದ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌