ಮತಗಟ್ಟೆಗಳಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳ ಕುರಿತು ಮನವರಿಕೆ ಮಾಡಿ- ಮತದಾನಕ್ಕೆ ಪ್ರೇರೆಪಿಸಿ- ಪಿ. ಎಸ್. ವಸ್ತ್ರದ

ವಿಜಯಪುರ: ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ  ಮತದಾನದಲ್ಲಿ ಭಾಗವಹಿಸಿ ಮತಚಲಾಯಿಸುವಂತೆ ಪ್ರೇರೆಪಿಸಲು ಮತಗಟ್ಟೆಗಳಲ್ಲಿ ಮತದಾರರಿಗೆ ಕಲ್ಪಿಸಲಾದ ಮೂಲಭೂತ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿ ಮತದಾನಕ್ಕೆ ಪ್ರೇರೆಪಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ. ಎಸ್. ವಸ್ತ್ರದ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರೊಂದಿಗೆ ಸ್ವೀಪ್ ಕಾರ್ಯಚಟುವಟಿಕೆಗಳ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಮುಂದಾಗುವಂತೆ ಪ್ರೇರೆಪಿಸಬೇಕು. ಜಿಲ್ಲೆಯ ಎಂಟು ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಕಲ್ಪಿಸಿರುವ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ನೆರಳು, ಸರತಿ ಸಾಲು ಇಲ್ಲದೇ ಇರುವುದು, ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮತದಾನದ ದಿನವಾದ ಮೇ-10ರಂದು ಮತ ಚಲಾಯಿಸಲು ಮತದಾರರು ಸಾಲುಗಟ್ಟಿ ನಿಲ್ಲುವದನ್ನು ತಪ್ಪಿಸಲು ಮತದಾರರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ನೆರಳಿಗಾಗಿ ಶಾಮಿಯಾನ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮತದಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ಸೌಲಭ್ಯಗಳ ಕುರಿತು ಮತದಾರರಲ್ಲಿ ಅರಿವು ಮೂಡಿಸಬೇಕು. ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.  ಇದೇ 25 ಹಾಗೂ 26ರಂದು ಮನೆ ಮನೆಗೆ ತೆರಳಿ ಮತಗಟ್ಟೆಗಳಿಗೆ ಭೇಟಿ ನೀಡುವಂತೆ ಮತದಾರರಿಗೆ ತಿಳಿಸಬೇಕು. ಮತದಾನಕ್ಕಿಂತ ಮುಂಚಿತವಾಗಿ ಮತಗಟ್ಟೆ ಭೇಟಿಗೆ ಅವಕಾಶ ಒದಗಿಸಬೇಕು.  ಮತದಾರರು ಮತದಾನ ಪೂರ್ವ ತಾವು ಮತದಾನ ಮಾಡುವ ಮತಗಟ್ಟೆಗಳನ್ನು ಖಚಿತಪಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಇದರಿಂದ ಮತದಾನ ದಿನ ಮತಗಟ್ಟೆ ಹುಡುಕಾಟದಲ್ಲಿ ಸಮಯ ವ್ಯರ್ಥವಾಗುವುದಿಲ್ಲ ಮತದಾನ ಪ್ರಮಾಣ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ವಿಜಯಪುರ ಜಿ. ಪಂ. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಿ. ಎಸ್. ವಸ್ತ್ರದ ಮಾತನಾಡಿದರು

 

ವಿದ್ಯುನ್ಮಾನ ಮತಯಂತ್ರದ ಬಗ್ಗೆ ಸೂಕ್ತ ತಿಳುವಳಿಕೆ ಮೂಡಿಸಬೇಕು ಮತದಾನ ದಿನಾಂಕ ಹಾಗೂ ಸಮಯ ಕುರಿತು  ಗ್ರಾಮೀಣ ಮಟ್ಟದಲ್ಲಿ ಡಂಗುರ ಸಾರುವ ಮೂಲಕ  ಜಾಗೃತಿ ಮೂಡಿಸಬೇಕು. ಸಖಿ ಮತಗಟ್ಟೆಗಳು ಆಕರ್ಷಣೀಯವಾಗುವಂತೆ ನೋಡಿಕೊಳ್ಳಬೇಕು. ವ್ಯಾಟ್ಸಾಪ್ ಗ್ರೂಪ್‍ಗಳ ಮೂಲಕ ಮತದಾನ ಜಾಗೃತಿ ವೇಗ ನೀಡಬೇಕು.  ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು,  ಇನ್ನಷ್ಟು  ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ,   ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸುವಂತೆ ಅವರು ಸೂಚಿಸಿದ ಅವರು, ಮತದಾರರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 1950ಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ ಎಂಬುದರ ಕುರಿತು ಮತದಾರರಲ್ಲಿ ತಿಳುವಳಿಕೆ ಮೂಡಿಸುವಂತೆ ಅವರು ಸೂಚಿಸಿದರು.

ಮತದಾನ ದಿನ ಹಾಗೂ ಸಮಯ ಕುರಿತು ಮಾಹಿತಿಯನ್ನು ಸಾಮಾಜಿಕ ಜಾಲ ತಾಣ, ಮಹಾನಗರ ಪಾಲಿಕೆ ನೀರಿನ ಬಿಲ್, ಗ್ರಾಮ ಪಂಚಾಯತಿ ಬಿಲ್, ಬಸ್ಸಿನ ಟಿಕೇಟ್ ಮೇಲೆ ನಮೂದಿಸಿ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು. ಮತದಾನಕ್ಕಾಗಿ ಅವಶ್ಯವಿರುವ ದಾಖಲೆ, ಗುರುತಿನ ಚೀಟಿ ಮಾಹಿತಿ, ಮತದಾನ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಾದ ಹಾಗೂ ಹೋಗಬಾರದ ವಸ್ತುಗಳ ಪಟ್ಟಿ ಮಾಡಿ ಜನರಿಗೆ ಮಾಹಿತಿ ಒದಗಿಸಬೇಕು. ಈಗಾಗಲೇ ಚುನಾವಣೆಗೆ ನಿಯೋಜಿತ ಅಧಿಕಾರಿಗಳಿಗೆ ನುರಿತ ಅನುಭವಿಗಳಿಂದ ತರಬೇತಿ ಸಹ ಒದಗಿಸಲಾಗಿದ್ದು, ಯಾವುದೇ ಲೋಪವಾಗದಂತೆ ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ಶಿಂಧೆ ಅವರು ಮಾತನಾಡಿ ಕಡಿಮೆ ಮತದಾನವಾಗಿರುವ ಜಿಲ್ಲೆಯ 298 ಮತಗಟ್ಟೆಗಳ ಸಮೀಕ್ಷೆ ಕೈಗೊಂಡು ಕಾರಣ ಗುರುತಿಸಿಕೊಂಡು, ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಮತದಾನ ಪ್ರಮಾಣ ಹೆಚ್ಚಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಮತಗಟ್ಟೆಗಳಲ್ಲಿ ವರ್ಣರಂಜಿತವಾಗಿ ವರ್ಲಿ ಚಿತ್ರಕಲೆ ಬಿಡಿಸಿ ಮತಗಟ್ಟೆ ಆಕರ್ಷಕವಾಗಿಸಿದೆ. ಈಗಾಗಲೇ ಜಿಲ್ಲೆಯಲ್ಲಿ, ಕ್ಯಾಂಡಲ್ ಮಾರ್ಚ್, ಸ್ವ-ಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ, ಮೆಹಂದಿ ಮೂಲಕ ಚುನಾವಣಾ ಸಂದೇಶ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಅನಕು ಸಂಸತ್ತು ಕಾರ್ಯಕ್ರಮ ಆಯೋಜಿಸಿ ಯುವ ಮನತದಾರರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗಿದೆ. ರಂಗೋಲಿ, ವಿಶೇಷ ಚೇತನರ ಬೈಕ್ರ್ಯಾಲಿ, ಕ್ಯಾಂಡಲ್ ಬೆಳೆಗಿಸುವುದು, ಸೈಕಲ್ ಜಾಥಾ ಹಾಗೂ ಮನೆ ಮನೆ ತೆರಳಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಬಾರಿ ಹೆಚ್ಚಿನ ಮತದಾನಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಸ್ವೀಪ್ ಸಮಿತಿ ಹೊರ ತಂದಿರುವ ಮತದಾನ ಮಾಹಿಯುಳ್ಳ ‘ಕರಪತ್ರ’ ಪಿ.ಎಸ್.ವಸ್ತ್ರದ ಬಿಡುಗಡೆ ಮಾಡಿದರು. ‘ಪ್ರಜಾಪ್ರಭುತ್ವ ನಮ್ಮಿಂದ, ಮತ ಚಲಾಯಿಸೋಣ ಹೆಮ್ಮೆಯಿಂದ’ ಎಂಬ ಮತದಾನದ ಮಹತ್ವದ ಕುರಿತ ಮತದಾನ ಜಾಗೃತಿ ಗೀತೆ ಪ್ರಸ್ತುತಪಡಿಸಲಾಯಿತು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸೇರಿದಂತೆ ಸ್ವೀಪ್ ಸಮಿತಿಯ ಸದಸ್ಯರಾದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಶಿರಹಟ್ಟಿಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕ ಬಿ.ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರಣ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ್ ದೈವಾಡಿ, ಜಿಪಂ ಯೋಜನಾ ಉಪ ನಿರ್ದೇಶಕ ಎ.ಬಿ ಅಲ್ಲಾಪೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯಲ್ಲಮ್ಮ ಪಡೇಸೂರ ಜಿಲ್ಲಾ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌