ವಿಜಯಪುರ: ಬಾರತೀಯ ಜನತಾ ಪಕ್ಷದಲ್ಲಿಯೇ ಉಳಿದುಕೊಂಡು ಕೆಲಸ ಮಾಡುತ್ತೇನೆ. ಆದರೆ, ವಿಜಯಪುರ ನಗರ ಮತಕ್ಷೇತ್ರದಲ್ಲಿ ಮಾತ್ರ ಯಾರು ಹೇಳಿದರೂ ಪ್ರಚಾರ ಮಾಡುವುದಿಲ್ಲ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಟಿಕೆಟ್ ವಂಚಿತ ಅಪ್ಪು ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದಿದ್ದರೆ ಪಕ್ಷ ಬಿಟ್ಟು ಹೋಗುತ್ತೀರಾ? ಬೇರೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಎಲ್ಲರೂ ಕೇಳುತ್ತಿದ್ದರು. ಆಗ ನಾನು ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಮಾತನಾಡಿ ತಿಳಿಸುವುದಾಗಿ ಹೇಳಿದ್ದೆ. ಈಗ ಕಳೆದ ಎರಡು ದಿನಗಳಿಂದ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಿಯೇ ಮುಂದುವರೆಯುತ್ತೇನೆ
ಭಾರತೀಯ ಜನತಾ ಪಕ್ಷದಲ್ಲಿಯೇ ಉಳಿದಕೊಂಡು ಕೆಲಸ ಮಾಡಲು ನಿರ್ಧರಿಸಿದ್ದೇನೆ. ಬೇರೆ ಬೇರೆ ಮತಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಂಡಿದ್ದೇನೆ. ಬೇರಾವ ಪಕ್ಷವನ್ನೂ ಸೇರುವುದಿಲ್ಲ ಎಂದು ಅವರು ಹೇಳಿದರು.
ಮಾನಸಿಕ ಹಿಂಸೆಯಾಗಿದೆ
ಕಳೆದ ಬಾರಿ ಟಿಕೆಟ್ ನೀಡದಿದ್ದಾಗ ಮಾನಸಿಕವಾಗಿ ಸಾಕಷ್ಟು ತೊಂದರೆಯಾದರೂ ಕೂಡ ಈ ಬಾರಿಯೂ ಈ ಬಾರಿ ಒಳ್ಳೆಯದಾಗಬಹುದು. ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಕಾರ್ಯಕರ್ತರು ಕೂಡ ಇದೇ ನೀರಿಕ್ಷೆಯಲ್ಲಿದ್ದರು. ಆದರೆ, ಈಗ ಕಾರ್ಯಕರ್ತರ ನಿರೀಕ್ಷೆಯೂ ಹುಸಿಯಾಗಿದೆ. ಆದರೂ, ನಾನು ಎಲ್ಲವನ್ನೂ ಸಹನೆ ಮಾಡಿಕೊಂಡಿದ್ದೇನೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.
ಬಹಳಷ್ಟು ಜನ ಬಿಜೆಪಿಯಲ್ಲಿ ಇರುವುದು ಸಾಕು ಎಂದು ಸಲಹೆ ನೀಡಿದರು. ಕೆಲವರು ಇಲ್ಲಿಯೇ ಇರಬೇಕು ಎಂದು ಸಲಹೆ ನೀಡಿದರೆ ಮತ್ತೆ ಹಲವರು ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಸಲಹೆ ಕೊಟ್ಟಿದ್ದರು. ಕಳೆದ ಐದು ವರ್ಷಗಳಿಂದ ಬಹಳಷ್ಟು ನೋವು ಇದ್ದರೂ, ಈ ಸಲ ಅವಕಾಶ ಸಿಗುವ ನಿರೀಕ್ಷೆಯಿತ್ತು. ಆದರೆ, ಈ ಆಸೆ ನೆರವೇರಿಲ್ಲ. ಈ ಬಾರಿಯೂ ಸ್ಪರ್ಧೆ ಮಾಡಲು ಅವಕಾಶ ಸಿಗಲಿಲ್ಲ ಎಂದು ಅವರು ತಿಳಿಸಿದರು.
ಹೈಕಮಾಂಡ್ ಆಫರ್ ನೀಡಿದರೂ ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದೆ
ನನಗೆ ವಿಜಯಪುರ ನಗರ ಮತಕ್ಷೇತ್ರದ ಬದಲು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಕೇಳಿತ್ತು. ಆದರೆ, ನಾನು ಆ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿರಲಿಲ್ಲ. ನನಗೆ ಹೈಕಮಾಂಡ್ ಈ ಕುರಿತು ಕೇಳಿದಾಗ ನನ್ನ ಬಳಿ ಉತ್ತರ ಇರಲಿಲ್ಲ. ಎಲ್ಲಿಯೂ ನಾನು ಅಪೇಕ್ಷೆ ಪಟ್ಟಿರಲಿಲ್ಲ. ಆಯಾ ಮಚಕ್ಷೇತ್ರಗಳಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿರುವ ಹಿನ್ನೆಲೆಯಲ್ಲಿ ಮತ್ತು ಅವರ ನಡುವೆ ಕೈಯಾಡಿಸಲು ಸರಿ ಅನಿಸಲಿಲ್ಲ. ನಮ್ಮದೇ ಕಾರ್ಯಕರ್ತರು ಅಲ್ಲಿರುವುದರಿಂದ ನಾನು ಆ ಪ್ರಯತ್ನ ಮಾಡಲಿಲ್ಲ. ಬೇರೆ ಪಕ್ಷ ಸೇರ್ಪಡೆ, ಪಕ್ಷೇತರ ಸ್ಪರ್ಧೆ ಕುರಿತು ಒಮ್ಮತದ ಸಲಹೆಗಳು ಬರಲಿಲ್ಲ. ಹೀಗಾಗಿ ಬಿಜೆಪಿಯಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಚಿವರು ತಿಳಿಸಿದರು.
30 ವರ್ಷದಿಂದ ಇರುವ ಪಕ್ಷವನ್ನು ಒಬ್ಬ ವ್ಯಕ್ತಿಯಿಂದ ತೊಂದರೆಯಾದಾಗ ಪಕ್ಷ ಬಿಡುವುದು ಸೂಕ್ತವಲ್ಲ
ಯಾವುದೋ ಒಬ್ಬ ವ್ಯಕ್ತಿಯಿಂದ ತೊಂದರೆಯಾದಾಗ, ಕೆಲವೊಂದು ಜನರಿಂದ ನನಗೆ ತೊಂದರೆಯಾದಾಗ ಪಕ್ಷ ಬಿಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಪಕ್ಷದಲ್ಲಿಯೇ ಮುಂದುವರೆಯೋಣ ಎಂದು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು.
30 ವರ್ಷ ಇದೇ ಪಕ್ಷದಿಂದ ರಾಜಕೀಯ ಆರಂಭಿಸಿದ್ದೇನೆ. ಕಳೆದ ಬಾರಿ ಟಿಕೆಟ್ ತಪ್ಪಿದರೂ ನಾನು ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ. ಈ ಬಾರಿ ಬಹಳ ಜನರ ನಿರೀಕ್ಷೆ ಹುಸಿಯಾಗಿದೆ. ನಾನು ಅಲ್ಲಲ್ಲಿ ಹೋದಾಗ ಬೆಂಬಲಿಗರು ಇಷ್ಟೋಂದು ಅನ್ಯಾಯ ಆದಾಗ ನೀವ್ಯಾಕೆ ನಿಲ್ಲಲಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ. ಆಗ, ನಾನು ನನಗೆ ಸರಿ ಎನಿಸಿಲ್ಲ. ಬೇಡ ಎಂದು ಬಿಟ್ಟಿದ್ದೇನೆ. ಬಣಜಿಗ ಸಮುದಾಯ ಮುಖಂಡರು ನನಗೆ ಚುನಾವಣೆಗೆ ನಿಲ್ಲಲು ಸಲಹೆ ನೀಡಿದರು. ಆದರೆ, ಅವರೆಲ್ಲರ ಸಲಹೆಗಳನ್ನು ಒಪ್ಪಲಿಲ್ಲ ಎಂದು ಅವರು ಹೇಳಿದರು.
ವಿಜಯಪುರ ನಗರ ಮತಕ್ಷೇತ್ರ ಹೊರತು ಪಡಿಸಿ ಬೇರೆ ಕಡೆ ಪ್ರಚಾರ ಮಾಡುತ್ತೇನೆ
ಇದೇ ವೇಳೆ, ಹಿರಿಯರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗಬೇಕು ಎಂದು ಹೇಳುತ್ತಾರೋ ಅಲ್ಲಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಬರುತ್ತೇನೆ. ಒಟ್ಟಾರೆ ಬಿಜೆಪಿಯಲ್ಲಿ ಮುಂದುವರೆಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಯತ್ನಾಳ ಅವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ. ಅವರು ಕರೆದರೂ ನಾನು ಹೋಗುವುದಿಲ್ಲ. ವಿಜಯಪುರ ನಗರ ಬಿಟ್ಟು ಉಳಿದ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಹೈಕಮಾಂಡ್ ಯತ್ನಾಳ ಜೊತೆ ಪ್ರಚಾರಕ್ಕೆ ಹೋಗು ಎೞದು ಹೇಳಿದರೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಇದೇ ವೇಳೆ ಸ್ಪಷ್ಟಪಡಿಸಿದರು.