ಏ. 23 ಬಸವ ಜಯಂತಿಯಂದು ಬಸವ ನಾಡಿಗೆ ರಾಹುಲ ಗಾಂಧಿ ಭೇಟಿ- ರೋಡ್ ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ- ಎಂ. ಬಿ. ಪಾಟೀಲ

ವಿಜಯಪುರ: ಎಐಸಿಸಿ ಮುಖಂಡ ರಾಹುಲ ಗಾಂಧಿ ಏ. 23 ರಂದು ರವಿವಾರ ಬಸವ ನಾಡು ವಿಜಯಪುರ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ. 

ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 23 ರಂದು ಬೆ. 10.30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ಅವರು, 11.40ಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮಕ್ಕೆ ಆಗಮಿಸಲಿದ್ದಾರೆ.  ಬೆ. 11.50ಕ್ಕೆ ಬಸವಣ್ಣನವರ ಐಕ್ಯಸ್ಥಳ ಮತ್ತು ಸಂಗಮನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.  ಅಲ್ಲದೇ, ಉತ್ಸವ ಸಮಿತಿ ಆಯೋಜಿಸಿರುವ ಬಸವ ಮಂಟಪದಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳಲಿದ್ದಾರೆ.  ಮ. 1.40 ರಿಂದ ಮ. 2.10ರ ವರೆಗೆ ದಾಸೋಹ ಭವನದಲ್ಲಿ ಭಕ್ತರಿಗಾಗಿ ಆಯೋಜಿಸಲಾಗಿರುವ ದಾಸೋಹದಲ್ಲಿ ಪ್ರಸಾದ ಸೇವನೆ ಮಾಡಲಿದ್ದಾರೆ.  ಮ. 2.14 ರಿಂದ ಮ. 4.15ರ ವರೆಗೆ ಯಾತ್ರಿ ನಿವಾಸದಲ್ಲಿ ಇರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಂ. 4.25ಕ್ಕೆ ಕೂಡಲ ಸಂಗಮದಿಂದ ಹೊರಡಲಿರುವ ಅವರು, ಸಂ. 4.50ಕ್ಕೆ ವಿಜಯಪುರ ನಗರಕ್ಕೆ ಆಗಮಿಸಲಿದ್ದಾರೆ.  ಸಂ. 5 ರಿಂದ ಸಂ. 6.30ರ ವರೆಗೆ ವಿಜಯಪುರ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.  ಅಲ್ಲದೇ, ಈ ರೋಡ್ ಶೋ ಮಧ್ಯೆ ಶಿವಾಜಿ ಸರ್ಕಲ್ ಮತ್ತು ಕನಕದಾಸ ಸರ್ಕಲ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  ಈ ರೋಡ್ ಶೋ ನಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.  ಅಲ್ಲದೇ, ರಾಹುಲ ಗಾಂಧಿ ಅವರು ರಾತ್ರಿ ವಿಜಯಪುರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಕೂಡಲ ಸಂಗಮ ಕಾರ್ಯಕ್ರಮ

ಕೂಡಲ ಸಂಗಮದಲ್ಲಿ ನಡೆಯಲಿರುವ ಕಾರ್ಯಕ್ರಮ ಧಾರ್ಮಿಕ ಸಮಾರಂಭವಾಗಿದೆ.  ಬಸವ ಉತ್ಸವ ಸಮಿತಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬಸವ ಜಯಂತಿ ಉತ್ಸವದಲ್ಲಿ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ಧರಾಮ ಮಹಾಸ್ವಾಮೀಜಿ ಅವರು ಬಸವಾದಿ ಶರಣರು, ಬಸವ ತತ್ವದ ಬಗ್ಗೆ ಮಾತನಾಡಲಿದ್ದಾರೆ.  ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳು, ಭಾಲ್ಕಿ ಜಗದ್ಗುರುಗಳು ಸೇರಿದಂತೆ ಹಲವಾರು ಮಠಾಧೀಶರಿಗೆ ಆಹ್ವಾನ ನೀಡಲಾಗಿದೆ.  ಇದು ಸಂಪೂರ್ಣ ರಾಜಕೀಯ ಹೊರತಾದ ಕಾರ್ಯಕ್ರಮವಾಗಿದ್ದು, ಯಾವ ಪಕ್ಷದ ಬ್ಯಾನರ್ ಅಲ್ಲಿರುವುದಿಲ್ಲ ಎಂದು ಎಂದು ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.

ಏ. 23 ಮಹಾತ್ಮಾ ಬಸವೇಶ್ವರರು ಜನ್ಮತಾಳಿದ ಪವಿತ್ರ ದಿನ.  ಬಸವೇಶ್ವರರು 12 ನೇ ಶತಮಾನದಲ್ಲಿ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಚೇತನರಾಗಿದ್ದಾರೆ.  ಜಗತ್ತಿನ ಪ್ರಥಮ ಪಾರ್ಲಿಮೆಂಟ್ ಸ್ಥಾಪಿಸಿದ ರೂವಾರಿಯಾಗಿದ್ದಾರೆ.  ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.  ಮೌಢ್ಯಗಳನ್ನು ಬದಿಗೊತ್ತಿ ಕಾರ್ಲಮಾರ್ಕ್ಸ್ ಗಿಂತಲೂ ಎಷ್ಟೋ ಶತಮಾನಗಳ ಮುಂಚೆ ಕಾಯಕದ ಸ್ವಾಭಿಮಾನ ಹಾಗೂ ದಾಸೋಹದ ತತ್ವ ಸಾರಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ವಿಜಯಪುರ ನಗರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್, ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌