ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರಿಂದ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ

ವಿಜಯಪುರ: ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಹಂತದ ಅಧಿಕಾರಿಗಳು ಕಟಿಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ತಪ್ಪದೇ ಪಾಲಿಸಬೇಕು ಎಂದು ಬಿಜಾಪೂರ ನಗರ ಹಾಗೂ ನಾಗಠಾಣ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕ ಉದೀತ ಪ್ರಕಾಶ ರೈ ಅವರು ಸೂಚಿನೆ ನೀಡದರು.

ಜಿ. ಪಂ. ಸಭಾಂಗಣದಲ್ಲಿ ನಾನಾ ತಂಡಗಳ ನೋಡಲ್ ಅಧಿಕಾರಿಗಳ, ನಿರ್ವಚನಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣೆ ಪೂರ್ವ ಸಿದ್ಧತೆಯನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಲಾಗಿದೆ.  ಚುನಾವಣೆ ಸಂಬಂಧಿತ ವಿಷಯಗಳಲ್ಲಿ ಸಮಸ್ಯೆಗಳು ಉದ್ಭವವಾದರೆ, ವೀಕ್ಷಕರ ಗಮನಕ್ಕೆ ತರುವಂತೆಯೂ, ಗೊಂದಲಗಳಿಲ್ಲದೇ ಚುನಾವಣೆ ನಡೆಸುವ ನಿಟ್ಟಿನಲ್ಲಿ ಯೋಜನಾ ಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ವಿಜಯಪುರ ಜಿ. ಪಂ. ಕಚೇರಿಯಲ್ಲಿ ಚುನಾವಣೆ ವೀಕ್ಷಕರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ಯಾವುದೇ ಸಮಸ್ಯೆಗಳಿದ್ದಲ್ಲಿ ವೀಕ್ಷಕರ ಗಮನಕ್ಕೆ ತಂದು  ತುರ್ತು ಪರಿಹಾರಕ್ಕೆ ಕ್ರಮ ವಹಿಸಬೇಕು. ಚುನಾವಣೆಯನ್ನು ಅತ್ಯಂತ ಪಾರರ್ದಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ದಿಸೆಯಲ್ಲಿ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅರಿತು ಕಾರ್ಯ ನಿರ್ವಹಿಸಬೇಕು.  ಎಲ್ಲರೂ ವೃತ್ತಿಪರ ಅಧಿಕಾರಿಗಳಿದ್ದಿರಿ ಹಲವಾರು ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವದ ನೆಲೆಗಟ್ಟಿನ ಆಧಾರದಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಣೆ ಮಹತ್ವದ್ದಾಗಿರುವುದರಿಂದ ಎಲ್ಲ ಅಧಿಕಾರಿಗಳಿಂದ ಉತ್ತಮ ಕಾರ್ಯ ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.

ಜಿಲ್ಲೆಯ ಎಂಟೂ ವಿಧಾನ ಸಭೆ ಮತಕ್ಷೇತ್ರದ ಪೊಲೀಸ್ ವೀಕ್ಷಕ ಡಾ. ಬಿ. ನವೀನಕುಮಾರ ಮಾತನಾಡಿ, ನಿಯೋಜಿತ ಅಧಿಕಾರಿಯು ಕಾರ್ಯ ಕ್ಷೇತ್ರದ ಕುರಿತಾಗಿ ಅರಿತುಕೊಳ್ಳಬೇಕು.  ಕ್ಲಿಷ್ಟಕರ ಹಾಗೂ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಪೂರ್ವ ಸಿದ್ಧತೆ ಅಗತ್ಯ.  ತಂಡವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪ್ಲೈಯಿಂಗ್ ಸ್ಕ್ವಾಡ್, ವಿಎಸ್‍ಟಿ, ಹಾಗೂ ಎಸ್‍ಎಸ್‍ಟಿ ತಂಡಗಳ ಕಾರ್ಯ ನಿರ್ವಹಣೆ ಬಗ್ಗೆ ಮುದ್ದೇಬಿಹಾಳ ಹಾಗೂ  ದೇವರ ಹಿಪ್ಪರಗಿ ಮತಕ್ಷೇತ್ರÀ್ರದ ಸಾಮಾನ್ಯ ವೀಕ್ಷಕರಾದ ಎಂ ಅರವಿಂದ ಅಗತ್ಯ ಸಲಹೆ ಸೂಚನೆ ನೀಡಿದರು. ಮುಕ್ತ ಹಾಗೂ ಶಾಂತಿಯುತ ಚುನಾವಣೆ ಸುಸೂತ್ರವಾಗಿ ನಡೆಸಲು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಅಬಕಾರಿ ಹಾಗೂ ಇತರ ವರದಿಗಳನ್ನು ನಿಯತವಾಗಿ ತಪ್ಪದೇ ಸಂಬಂಧಿಸಿದವರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಬಸವನ ಬಾಗೇವಾಡಿ ಮತ್ತು ಬಬಲೇಶ್ವರ ವಿಧಾನ ಸಭೆ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಪ್ರಕಾಶ ಬಿಂದು, ಇಂಡಿ ಹಾಗೂ ಸಿಂದಗಿ ವಿಧಾನ ಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ರಿಷಿರೇಂದ್ರ ಕುಮಾರ, ವೆಚ್ಚ ವೀಕ್ಷಕರಾದ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿಯ ಮತಕ್ಷೇತ್ರದ ಶ್ರೀಮತಿ ಘೋಲಪ್ ಪ್ರಜ್ಞಾ ರಾಜೇಂದ್ರ, ಬಸವನ ಬಾಗೇವಾಡಿ ಹಾಗೂ ಬಬಲೇಶ್ವರದ ಮತಕ್ಷೇತ್ರದ ಹೆರ್ಮಾ ಧರ್ಮೇಂದ್ರ ಕುಮಾರ, ಬಿಜಾಪೂರ ನಗರ ಮತಕ್ಷೇತ್ರದ ರವೀಂದ್ರ, ನಾಗಠಾಣ ಮತಕ್ಷೇತ್ರದ ನಂದಿನಿ ಆರ್. ನಯ್ಯರ್ ಹಾಗೂ ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ರೋಷನ್ ಲಾಲ್ ಅವರು ಚುನಾವಣೆಗೆ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ವಯ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು, ಚುನಾವಣೆ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.  ಏಪ್ರಿಲ್ 20ರ ವರೆಗೆ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಹಾಯಕ ಮತಗಟ್ಟೆ ಸೇರಿದಂತೆ 242 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ದೇವರ ಹಿಪ್ಪರಗಿ 252, ಬಸವನ ಬಾಗೇವಾಡಿ-232, ಬಬಲೇಶ್ವರ-243, ಬಿಜಾಪೂರ 5 ಸಹಾಯಕ ಮತಗಟ್ಟೆಗಳೂ ಸೇರಿದಂತೆ 274, ನಾಗಠಾಣ ಮತಕ್ಷೇತ್ರದಲ್ಲಿ 296, ಇಂಡಿ ಮತಕ್ಷೇತ್ರದಲ್ಲಿ 268 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 271 ಸೇರಿದಂತೆ ಒಟ್ಟು 2078 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಜಿಲ್ಲೆಯಲ್ಲಿ 9,66,535 ಪುರುಷ 9,26,096 ಮಹಿಳೆಯರು ಹಾಗೂ ಇತರರು 221 ಸೇರಿದಂತೆ ಜಿಲ್ಲೆಯಲ್ಲಿ 18,92,852 ಮತದಾರರಿದ್ದಾರೆ.  ಜಿಲ್ಲೆಯಲ್ಲಿ ಪ್ರತಿ ವಿಧಾನ ಸಭೆ ಮತಕ್ಷೇತ್ರದಲ್ಲಿ 5 ಸಖಿ, ಪ್ರತಿ ಮತಕ್ಷೇತ್ರಕ್ಕೆ 1 ವಿಕಲ ಚೇತನರ ಹಾಗೂ ಯುವ ಮತಗಟ್ಟೆ, ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 2 ಸೇರಿದಂತೆ ಪ್ರತಿ ಮತಕ್ಷೇತ್ರಕ್ಕೊಂದು ಥೀಮ್ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಂಪ್, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಹೆಲ್ಪ್ ಡೆಸ್ಕ್ ಒಳಗೊಂಡಂತೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಎಸ್ಪಿ ಎಚ್. ಡಿ. ಆನಂದಕುಮಾರ ಅವರು, ಕಾನೂನು ಮತ್ತು ಸುವ್ಯವಸ್ಥೆಗಳ ಕೈಗೊಂಡಿರುವ ಕುರಿತು ವಿವರಿಸಿ, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 8 ಡಿವೈಎಸ್‍ಪಿ, 26 ಇನ್Àಸ್ಪೆಕ್ಟರ್, 53 ಪಿಎಸ್‍ಐ, 124 ಎಎಸ್ ಐ, 629 ಪೊಲೀಸರು ಹಾಗೂ 685 ಹೊಮ್ ಗಾಡ್ಸಗಳನ್ನೊಳಗೊಂಡತೆ, ಕೇಂದ್ರೀಯ ಮೀಸಲು ಪಡೆಗಳ ತುಕಡಿಗಳು ಭದ್ರತೆಗೆ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಕಡಿಮೆ ಮತದಾನವಾಗಿರುವ ಜಿಲ್ಲೆಯ ಮತಗಟ್ಟೆಗಳ ಸಮೀಕ್ಷೆ ಕೈಗೊಂಡು ಕಾರಣ ಗುರುತಿಸಿ ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ.  ಮತದಾನ ಪ್ರಮಾಣ ಹೆಚ್ಚಿಸಲು ಹಲವಾರು ಸ್ವೀಪ್ ಕಾರ್ಯ ಚಟುವಟಿಕೆ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಚುನಾವಣೆ ನೋಡಲ್ ಅಧಿಕಾರಿಗಳು, ನಾನಾ ಮತಕ್ಷೇತ್ರದ ನಿರ್ವಾಚನಾಧಿಕಾರಿಗಳು, ಸಹಾಯಕ ನಿರ್ವಾಚನಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌