ಲಿಂಗಾಯಿತರು ಬಿಜೆಪಿಯಿಂದ ಬಹಿರ್ಮುಖಿಯಾಗಿದ್ದಾರೆ- ಶಾಸಕರು, ಪಕ್ಷ, ಹೈಕಮಾಂಡ್ ಅಸ್ತು ಎಂದರೆ ನಾನೂ ಸಿಎಂ ಆಗಬಹುದು- ಎಂ ಬಿ ಪಾಟೀಲ

ವಿಜಯಪುರ: ಲಿಂಗಾಯಿತ ನಾಯಕರು ಬಿಜೆಪಿಯಿಂದ ಬಹಿರ್ಮುಖಿಯಾಗಿದ್ದಾರೆ.  ಮರಳಿ ಕಾಂಗ್ರೆಸ್ ಮನೆಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಲಿಂಗಾಯಿತ ನಾಯಕರನ್ನು ದಮನ ಮಾಡುತ್ತಿದೆ.  ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ವಾತಾವರಣದಿಂದ ಗಾಬರಿಯಾಗಿದ್ದಾರೆ.  ಬಿಜೆಪಿ ಈಗ ವಿರೇಂದ್ರ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸುತ್ತಿದೆ.  ವಿರೇಂದ್ರ ಪಾಟೀಲ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು.  ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಅವರಿಗೆ ತೊಂದರೆಯಾದ ಕಾರಣ ಅಂದು ರಾಜ್ಯದ ಹಿತದೃಷ್ಟಿಯಿಂದ ಅವರನ್ನು ಬದಲಾಯಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ಆದರೆ, ಯಡಿಯೂರಪ್ಪ ಅವರಿಗೆ ಯಾವ ಸಮಸ್ಯೆಯೂ ಇರಲಿಲ್ಲ.  ಈ ವಯಸ್ಸಿನಲ್ಲಿಯೂ ಅವರು ಸದೃಢರಾಗಿದ್ದಾರೆ.  ಆಪರೇಷನ್ ಕಮಲ ಮಾಡಿಸಲು ಯಡಿಯೂರಪ್ಪ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಕೆಟ್ಟ ಹೆಸರು ತಂದರು.  ನಂತರ ಅವರನ್ನು ಕೈ ಬಿಡಲಾಯಿತು.  ಒಬ್ಬ ಲಿಂಗಾಯತ ಹಿರಿಯ ಮುತ್ಸದ್ಧಿ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ನೀಡಿರುವುದರ ಹಿಂದೆ ಬಿಜೆಪಿ ಹಿಡನ್ ಅಜೆಂಡಾ ಇರಿಸಿಕೊಂಡಿದೆ.  ಅಂದಿನ ಪರಿಸ್ಥಿತಿಗೆ ಹೆದರಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು.  ಅಂದು ಸಮಾಜದವನಾದ ನಾನು, ಶಾಮನೂರ ಶಿವಶಂಕರಪ್ಪನವರು, ನಾನಾ ಮಠಾಧೀಶರು ಈ ಕುರಿತು ಧ್ವನಿ ಎತ್ತಿದಾಗ ಅನಿವಾರ್ಯವಾಗಿ ಅವರನ್ನು ಸಿಎಂ ಮಾಡಲಾಯಿತು.

ವಿಜಯಪುರದಲ್ಲಿ ಸುದ್ದಿಗೋಷ್ಛಿಯಲ್ಲಿ ಎಂ. ಬಿ. ಪಾಟೀಲ ಮಾತನಾಡಿದರು

ಆದರೆ, ಈಗ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಆಗಿರುವ ಪರಿಸ್ಥಿತಿ ಮುಂದೆ ಬಸವರಾಜ ಬೊಮ್ಮಾಯಿ ಅವರಿಗೂ ಬರಲಿದೆ.  ಇದನ್ನು ಬೇಕಿದ್ದರೆ ಬರೆದಿಟ್ಟುಕೊಳ್ಳಿ.  ಬಿಜೆಪಿ ಹಿಡನ್ ಅಜೆಂಡಾ ಈಗ ಸ್ಪಷ್ಟವಾಗುತ್ತಾ ಸಾಗುತ್ತಿದೆ.  ಇದನ್ನು ಎಚ್. ಡಿ. ಕುಮಾರಸ್ವಾಮಿ ಅವರೂ ಈ ಹಿಂದೆ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಶಾಸಕರು, ಪಕ್ಷ ಬಯಸಿದರೆ, ಹೈಕಮಾಂಡ್ ಅಸ್ತು ಎಂದರೆ ನಾನೂ ಸಿಎಂ ಆಗ್ತೇನೆ

ಇದೇ ವೇಳೆ, ಕಾಂಗ್ರೆಸ್ಸಿನಿಂದ ಸಿಎಂ ಆಯ್ಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ.  ಎಐಸಿಸಿಯಿಂದ ವೀಕ್ಷಕರು ಬರುತ್ತಾರೆ.  ಎಲ್ಲ ಶಾಸಕರ ಒಟ್ಟಾಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ.  ಈ ಸಂಪ್ರದಾಯ ಜನರಿಗೂ ಗೊತ್ತಿದೆ.  ಆದರೂ ಸಹ ಬಿಜೆಪಿ ಈ ವಿಷಯದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.  ಬಿಜೆಪಿ ಹಿಡನ್ ಅಜೆಂಡಾ ಬಗ್ಗೆ ಲಿಂಗಾಯತರಿಗೆ ಅರಿವಾಗಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ನಮ್ಮ ಹೈಕಮಾಂಡ್ ಬಯಸಿದರೆ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು.  ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ, ಡಾ. ಜಿ. ಪರಮೇಶ್ವರ, ನಾನು, ಕೃಷ್ಣ ಭೈರೇಗೌಡ ಹೀಗೆ ಅನೇಕ ಸಮರ್ಥ ನಾಯಕರಿದ್ದಾರೆ.  ನಾನೂ ಸಹ ಒಬ್ಬ ಸಮರ್ಥ ನಾಯಕ ಎಂದು ಹೇಳಬಲ್ಲೆ.  ಜಲಸಂಪನ್ಮೂಲ ಸಚಿವಾಗಿ, ಗೃಹ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ.  ಹೈಕಮಾಂಡ್ ಅಸ್ತು ಎಂದರೆ ನಾನೂ ಕೂಡ ಸಿಎಂ ಆಗಬಹುದು ಎಂದು ಅವರು ತಿಳಿಸಿದರು.

ಖರ್ಗೆ ಅವರನ್ನು ಸಿಎಂ ಮಾಡುವ ವಿಚಾರ

ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ರನ್ನಾಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರು ಅಲಂಕರಿಸಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯಲ್ಲಿ ಮಲ್ಲಿಕಾರ್ಜುನ ಖರ್ಗೆಜಿ ಅವರು ಇದ್ದಾರೆ.  ಅವರನ್ನು ಪ್ರಧಾನ ಮಂತ್ರಿ ಮಾಡಬಹುದು.  ಏಕೆಂದರೆ ಅವರು ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಅವರ ವ್ಯಾಪ್ತಿಯಲ್ಲಿ ಇರುತ್ತಾರೆ.  ರಾಹುಲ ಗಾಂಧಿ ಮತ್ತು ಸೋನಿಯಾ ಗಾಂಧಿ ಬಯಸಿದರೆ ಅವರು ಸರಕಾರ ಬಂದ ಮೇಲೆ ಮನಮೋಹನ ಸಿಂಗ್ ಅವರ ರೀತಿ ದೇಶದ ಪ್ರಧಾನಿಯಾಗಬಹುದು.  ಅವರಿಗೆ ಮುಖ್ಯಮಂತ್ರಿ ಸಣ್ಣ ಸ್ಥಾನ ನೀಡಬೇಕಿದ್ದರೂ ಸಹ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ವಿಜಯಪುರ ನಗರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್, ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌