ವಿಜಯಪುರ: ಸಮುದಾಯಗಳ ಜನಸಂಖ್ಯೆಗಳಿಗೆ ಅನುಗುಣವಾಗಿ ಮೀಸಲಾತಿ ಮತ್ತು ಅಧಿಕಾರ ಹಂಚಿಕೆಯಾಗಬೇಕು. ಯುಪಿಎ ಸರಕಾರ ಕೈಗೊಂಡಿದ್ದ ಜಾತಿ ಸಮೀಕ್ಷೆಯನ್ನು ಬಹಿರಂಗ ಪಡಿಸಬೇಕು ಎಂದು ಎಐಸಿಸಿ ಮುಖಂಡ ರಾಹುಲ ಗಾಂಧಿ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದರು. ನಗರದ ಶಿವಾಜಿ ಚೌಕಿನಲ್ಲಿ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದ ಅವರು, ಗಾಂಧಿಚೌಕ್, ಬಸವೇಶ್ವರ ಚೌಕ್, ಅಂಬೇಡ್ಕರ್ ಚೌಕ್ ಮೂಲಕ ಸಂಚರಿಸಿ ಕನಕದಾಸ ಚೌಕ್ ನಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಸವಣ್ಣನವರ ವಿಚಾರಧಾರೆಗಳು ಸಮಾನತೆಯನ್ನು ಸಾರುತ್ತಿವೆ
ಇಂದು ಬಸವ ಜಯಂತಿ ಇದೆ. ಇಂದು ನಾವು ಅವರ ಜನ್ಮಭೂಮಿಯಲ್ಲಿದ್ದೇವೆ. ಇಂದು ಬೆಳಿಗ್ಗೆ ನಾನು ಬಸವಣ್ಣನವರ ಐಕ್ಯಸ್ಥಳಕ್ಕೆ ತೆರಳಿದ್ದೆ. ಅವರ ಜೀವನದ ಬಗ್ಗೆ ತಿಳಿದುಕೊಂಡೆ. ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಪ್ರಜಾಪ್ರಭುತ್ವದ ಕಲ್ಪನೆಯನ್ನು ಜಗತ್ತಿಗೆ ಮೊದಲು ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಲೋಕಸಭೆ ಇರಲಿ, ರಾಜ್ಯಸಭೆಯಿರಲಿ, ಸಂವಿಧಾನ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆ ಮೊದಲಿಗೆ ಜಾರಿಗೆ ತಂದಿದ್ದು ಬಸವಣ್ಣನವರು. ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಬಡವರಿರಲಿ, ಶ್ರೀಮಂತರಿರಲಿ. ಯಾವುದೇ ಧರ್ಮ, ಜಾತಿಯವರಾಗಿರಲಿ ಎಲ್ಲರಿಗೂ ಎಲ್ಲರೂ ಸಮಾನರು ಎಂದು ಬಸವಣ್ಣನವರು ಪ್ರತಿಪಾದಿಸಿದ್ದರು. ಬಸವಣ್ಣನವರು ಸತ್ಯವನ್ನು ಹೇಳಿ. ಯಾವುದಕ್ಕೂ ಹೆದರಬೇಡಿ ಏನೇ ಆದರೂ ಹೆದರುವುದು ಬೇಡ ಎಂದು ಅವರು ಹೇಳಿದ್ದರು ಎಂದು ತಿಳಿಸಿದರು.
ಬಿಜೆಪಿ, ಆರ್ ಎಸ್ ಎಸ್ ದ್ವೇಷ, ಹಿಂಸೆಯ ವಾತಾವರಣ ಸೃಷ್ಠಿಸುತ್ತಿವೆ
ಇಂದು ಬಿಜೆಪಿ ಮತ್ತು ಆರ್.ಎಸ್.ಎಸ್. ವಿಚಾರಗಳು ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಸೃಷ್ಠಿಸುತ್ತಿವೆ. ಪ್ರಧಾನಿ ಮತ್ತು ಬಿಜೆಪಿಯ ಮುಖಂಡರು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಆಶಯಗಳನ್ನು ಪಾಲಿಸುವುದಿಲ್ಲ. ಸಮಾಜದಲ್ಲಿ ಅಶಕ್ತರಾಗಿರುವವರ ಸಹಾಯ ಮಾಡಿ ಎಂದು ಎಂದು ಬಸವಣ್ಣನವರು ಹೇಳಿದ್ದರು. ಆದರೆ, ಕೋಟ್ಯಾಧೀಶರಿಗೆ ಸಹಾಯ ಮಾಡಿ ಎಂದು ಅವರು ಹೇಳಿರಲಿಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ನಾನು ಓದಿದ್ದೇನೆ. ಅವರು ಎಲ್ಲಿಯೂ ದೇಶದ ಸಂಪತ್ತನ್ನು ಅದಾನಿ ಅವರಿಗೆ ನೀಡಿ ಎಂದು ಹೇಳಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಸತ್ಯವನ್ನು ಎಲ್ಲಿ ಬೇಕಾದರೂ ಹೇಳಬಹುದು
ಸಂಸತ್ತಿನಲ್ಲಿ ನಾನು ಅದಾನಿ ಜೊತೆ ನಿಮ್ಮ ಸಂಬಂಧ ಏನು ಎಂದು ಪ್ರಧಾನಿಗಳಿಗೆ ಪ್ರಶ್ನಿಸಿದ್ದೆ. ದೇಶದ ಎಲ್ಲ ಸಂಪತನ್ನು ಅದಾನಿಗೆ ನೀಡಲಾಗುತ್ತಿದೆ. ಬಂದರುಗಳು, ವಿಮಾನ ನಿಲ್ದಾಣಗಳನ್ನು ಅವರಿಗೆ ನೀಡಲಾಗುತ್ತಿದೆ. ತಮ್ಮ ಸಂಬಂಧ ಏನು ಎಂದು ನಾನು ಪ್ರಶ್ನಿಸಿದ್ದೇನೆ. ಎಲ್ ಐ ಸಿಯ ಹಣ ಅದಾನಿಗೆ ಯಾಗೆ ನೀಡಲಾಗುತ್ತಿದೆ ಎಂದು ಕೇಳಿದ್ದೆ. ಆಗ ನಾನು ಮಾತನಾಡುತ್ತಿದ್ದ ಮೈಕ್ ಬಂದ್ ಮಾಡಿದರು. ಅಷ್ಟಕ್ಕೆ ನಿಲ್ಲದೇ, ಸಂಸತ್ತಿನ ಕಡತಗಳಿಂದ ನನ್ನ ಭಾಷಣವನ್ನು ಅಳಿಸಿ ಹಾಕಿದರು. ಕೊನೆಗೆ ನನ್ನನ್ನು ಸಂಸತ್ತಿನಿಂದ ಹೊರ ಹಾಕಿದರು. ಸತ್ಯವನ್ನು ಕೇವಲ ಲೋಕಸಭೆಯಲ್ಲಿ ಹೇಳಬಹುದು ಎಂದು ಅವರು ಅಂದುಕೊಂಡಿದ್ದಾರೆ. ಸತ್ಯವನ್ನು ಎಲ್ಲಿ ಬೇಕಾದರೂ ಹೇಳಬಹುದು. ಇಲ್ಲಿಯೂ ಹೇಳಬಹುದು ಎಂದು ರಾಹುಲ ಗಾಂಧಿ ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಸ್ಕೀಂ
ಸರಕಾರಗಳು ಬಸವಣ್ಣನವರು ಅಶಕ್ತರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಪ್ರತಿಯೊಬ್ಬ ವ್ಯಕ್ತಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಹಕ್ಕಿದೆ ಎಂದು ಹೇಳಿದ್ದರು. ರೈತನ ಮಕ್ಕಳು ವಿಮಾನ ಓಡಿಸಬೇಕು, ಉದ್ಯಮಿಯಾಗಬೇಕು, ಕಾರ್ಮಿಕನ ಮಗ ಎಂಜಿನಿಯರಾಗಬೇಕು ಎಂದು ಬಯಸಿದರೆ ಅವರಿಗೆ ಅವಕಾಶ ಸಿಗಬೇಕು ಎಂದು ಬಸವಣ್ಣ ಹೇಳಿದ್ದರು. ಮಹಿಳೆಯರಿಗೆ ರಕ್ಷಣೆ ನೀಡಬೇಕು. ಅದಕ್ಕಾಗಿ ಕಾಂಗ್ರೆಸ್ ಬಸವಣ್ಣನವರ ಯೋಚನೆಯಂತೆ ಭರವಸೆ ನೀಡಿದ್ದೇವೆ. ಬಸವಣ್ಣನವರ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಗೃಹ ಲಕ್ಷ್ಮಿ ಯೋಜನೆ ಘೋಷಿಸಿದ್ದೇವೆ. ಪ್ರತಿಯೊಂದು ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ತಿಂಗಳು ರೂ. 2000 ಮಾಶಾಸನ ನೀಡುತ್ತೇವೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ನೀಡುತ್ತೇವೆ. ಅನ್ಯಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುತ್ತೇವೆ. ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ. 3000 ಮಾಶಾಸನ ನೀಡುತ್ತೇವೆ. ಡಿಪ್ಲೋಮಾ ಪದವಿಧರರಿಗೆ ರೂ. 1500 ಮಾಸಿಕವಾಗಿ ನೀಡುತ್ತೇವೆ ಎಂದು ಅವರು ತಿಳಿಸಿದರು.
ಬಸವಣ್ಣನವರ ಆಶಯಗಳಿಗೆ ತಕ್ಕಂತೆ ಭರಸವೆ ನೀಡಿದ್ದೇವೆ. ನಾನು ಬಸವಣ್ಣನವರ ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯುವ ಬಗ್ಗೆ ಅದರಲ್ಲಿ ಪ್ರಸ್ತಾಪ ಇರುವ ಬಗ್ಗೆ ನಾನು ಅದರಲ್ಲಿ ಸಾಕಷ್ಟು ಬಾರಿ ಹುಡುಕಲು ಪ್ರಯತ್ನಿಸಿದೆ. ಜನರನ್ನು ದೋಚಿ ಎಂದು ಹೇಳಿದ್ದಾರಾ ಎಂದು ಹುಡುಕಿದರೂ ಎಲ್ಲಿಯೂ ಆ ಬಗ್ಗೆ ಮಾಹಿತಿ ಸಿಗಲಿಲ್ಲ. ಬಿಜೆಪಿ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರಕಾರ ಇದಾಗಿದೆ. ಕಡಿಮೆ ಎಂದರೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಏನೇ ಕೆಲಸ ಮಾಡಿದರೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಪಿ.ಎಸ್.ಐ ನೇಮಕಾತಿಯಲ್ಲಿ ರೂ. 80 ಲಕ್ಷ ಹಣ ಪಡೆದರು. ಎಂಜಿನಿಯರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿದರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದರು. 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರು ನೀಡಿದರು. ಪ್ರಧಾನಿಗಳು ಪತ್ರಕ್ಕೆ ಉತ್ತರ ನೀಡಲಿಲ್ಲ. ನೀಡುವುದೂ ಇಲ್ಲ ಎಂದು ಅವರು ಟೀಕಿಸಿದರು.
ಕರ್ನಾಟಕದಲ್ಲಿ ಕಳ್ಳರ ಸರಕಾರವಿದೆ
ನಾನು ಭ್ರಷ್ಟಾಚಾರದ ವಿರುದ್ಧ ಇದ್ದೇನೆ ಎಂದು ಪ್ರಧಾನಿ ಹೇಳುತ್ತಾರೆ. ಎಲ್ಲಿಯೇ ಹೋಗಲಿ ತಮ್ಮ ಅಕ್ಕಪಕ್ಕದಲ್ಲಿರುವವ ಬಗ್ಗೆ ನೋಡುವುದೇ ಇಲ್ಲ. ತಮ್ಮ ಎಡ, ಬಲದಲ್ಲಿ ಯಾರು ನಿಂತಿದ್ದಾರೆ ಎಂಬುದನ್ನು ನೋಡಿ. ಇದೇ ಹಣದಿಂದ ಆಪರೇಶನ್ ಕಮಲ ಮೂಲಕ ಶಾಸಕರನ್ನು ಖರೀದಿ ಮಾಡಿದ್ದೀರಿ. ತಾವು ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದಿರಲಿಲ್ಲ. ಆದರೆ, ಅವರು ಆಪರೇಶನ್ ಕಮಲ ಮಾಡಿ ಸರಕಾರ ರಚಿಸಿದ್ದಾರೆ. ಇದು ಕಳ್ಳರ ಸರಕಾರ. 40 ಪರ್ಸೆಂಟ್ ಕಮಿಷನ್ ಸರಕಾರ. ಶಾಸಕರನ್ನು ಕಳ್ಳತನ ಮಾಡಿ ಸರಕಾರ ರಚಿಸಿದ್ದಾರೆ. ಈ ಶಾಸಕರನ್ನು ಖರೀದಿಸಲು ಹಣ ಎಲ್ಲಿಂದ ಬಂತು ಎಂದು ಪ್ರಧಾನ ಮಂತ್ರಿಗಳೇ ಕರ್ನಾಟಕದ ಜನತೆಗೆ ಉತ್ತರಿಸಿ. ಗೋವಾದಲ್ಲಿ, ಮಧ್ಯ ಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಲು ಹಣ ಎಲ್ಲಿಂದ ಬಂದಿದೆ? ಇದೇ ಹಣದಿಂದ ಅವರು ಶಾಸಕರನ್ನು ಖರೀದಿ ಮಾಡುತ್ತಾರೆ. ಇನ್ನು ಮುಂದೆ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರಕಾರದ ಶಾಸಕರನ್ನು ಖರೀದಿಸಲು ಸಾಧ್ಯವಲಿಲ್. ಏಕೆಂದರೆ 150 ಜನ ಶಾಸಕರು ಆಯ್ಕೆಯಾಗಲಿದ್ದಾರೆ. 40 ಪರ್ಸೆಂಟ್ ಕಮಿಷನ್ ಪಡೆಯುವ ಬಿಜೆಯಿಂದ ಕೇವಲ 40 ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಅವರು ತಿಳಿಸಿದರು.
ಸಂಸತ್ತಿನಿಂದ ಹೊರ ಹಾಕಿದ್ದರೂ ಜನರ ಹೃದಯದಲ್ಲಿದ್ದೇನೆ
ನನ್ನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ನನ್ನನ್ನು ಸಂಸತ್ತಿನಿಂದ ಹೊರ ಹಾಕಿದರು. ಮನೆಯನ್ನು ಕಿತ್ತುಕೊಂಡರು. ಆದರೆ, ಸಾವಿರಾರು ಜನರು ನನಗೆ ಪತ್ರ ಬರೆದು ತಮ್ಮ ಮನೆಗೆ ಆಹ್ವಾನ ನೀಡಿದರು. ನನ್ನ ಮನೆ ತಮ್ಮೆಲ್ಲರ ಹೃದಯದಲ್ಲಿದೆ. ನನಗೆ ಮನೆಯ ಅವಶ್ಯಕತೆ ಇಲ್ಲ. ಇವರು ಕಿತ್ತಕೊಂಡಿದ್ದು ಒಳ್ಳೆಯದಾಯಿತು. ಎಂದು ಅವರು ಹೇಳಿದರು.
ಜಾತಿ ಸಮೀಕ್ಷೆ ಬಹಿರಂಗ ಪಡಿಸಲು ಆಗ್ರಹ
ನಾನು ಓಬಿಸಿ ಬಗ್ಗೆ ಮಾತನಾಡಿದ್ದೇನೆ. ನಾನು ಯಾರ ಬಗ್ಗೆಯೂ ಕೆಟ್ಟ ಶಬ್ದ ಬಳಸಿಲ್ಲ. ನಾನು ಯಾರ ಬಗ್ಗೆಯೂ ಕೆಟ್ಟ ಶಬ್ದ ಬಳಸುವುದಿಲ್ಲ. ಪ್ರತಿಯೊಬ್ಬರನ್ನು ಗೌರವಿಸುತ್ತೇನೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಅಂಗಡಿಯನ್ನು ತೆರೆಯುತ್ತೇನೆ. ನರೇಂದ್ರ ಮೋದಿ ಹಿಂದುಳಿದವರ ಬಗ್ಗೆ ಪ್ರಸ್ತಾಪಿಸಿದರು. ದೇಶದ ಎಲ್ಲ ಜನರನ್ನು ಅಭಿವೃದ್ಧಿಯಲ್ಲಿ ತೊಡಗಿಸಲು ಮತ್ತು ದೇಶದ ಸಂಪತನ್ನು ಹಂಚಲು ಬಯಸುತ್ತೇವೆ ಎಂದರೆ, ಯಾವ ಸಮುದಾಯದ ಜನ ಎಷ್ಟು ಇದ್ದಾರೆ ಎಂಬುದು ಲೆಕ್ಕ ಹಾಕಬೇಕು. ಯಾರ ಜನಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಆದಿವಾಸಿಗಳು ಎಷ್ಟಿದ್ದಾರೆ? ದಲಿತರು ಎಷ್ಟಿದ್ದಾರೆ? ಓಬಿಸಿ ಎಷ್ಟಿದ್ದಾರೆ? ಅಲ್ಪಸಂಖ್ಯಾತರು ಎಷ್ಟಿದ್ದಾರೆ? ಎಂಬುದನ್ನು ತಿಳಿಯಬೇಕಾಗುತ್ತದೆ. ಇಲ್ಲಿದಿದ್ದರೆ ಸಂಪತ್ತು ಹಂಚಲು ಹೇಗೆ ಸಾಧ್ಯ? ರಾಜ್ಯದಲ್ಲಿ ಯುಪಿಎ ಸರಕಾರವಿದ್ದಾಗ ಜಾತಿ ಸಮೀಕ್ಷೆ ಮಾಡಿದ್ದೇವು. ತಾವೆಲ್ಲರೂ ಯಾವ ಜಾತಿಯವರಿದ್ದೀರಿ? ಎಂದು ಕೇಳಿದ್ದೇವು. ನರೇಂದ್ರ ಮೋದಿಯವರೆ ಒಂದು ಕೆಲಸ ಮಾಡಿ. ಆ ಸಮೀಕ್ಷೆಯ ಅಂಶಗಳನ್ನು ಬಹಿರಂಗ ಪಡಿಸಿ. ಹಾಲಿಗೆ ಹಾಲು, ನೀರಿಗೆ ನೀರು ಗೊತ್ತಾಗುತ್ತದೆ. ಓಬಿಸಿ, ದಲಿತರು, ಆದಿವಾಸಿಗಳು ಮತ್ತು ಸಾಮಾನ್ಯರು ಎಷ್ಟು ಜನರಿದ್ದಾರೆ ಎಂಬುದು ಗೊತ್ತಾಗುತ್ತದೆ. ಓಬಿಸಿ ಸಮೀಕ್ಷೆ ದತ್ತಾಂಶಗಳನ್ನು ಯಾಕೆ ಬಿಡುಗಡೆ ಮಾಡುತ್ತಿಲ್ಲ? ಏಕೆಂದರೆ ತಾವು ಓಬಿಸಿ ಗೆ ದೇಶದ ಸಂಪತನ್ನು ಹಂಚಲು ಬಯಸುವುದಿಲ್ಲ ಎನಿಸುತ್ತೆ. ನೀವು ಪ್ರಾಮಾಣಿಕರಾಗಿದ್ದರೆ ಅದನ್ನು ಸಮೀಕ್ಷೆ ವರದಿಯನ್ನು ಬಹಿರಂಗ ಪಡಿಸುತ್ತಿದ್ದೀರಿ. ತಾವು ಇದನ್ನು ಮಾಡದಿದ್ದರೆ ನಾವು ನಿಮ್ಮ ಮೇಲೆ ಒತ್ತಡ ಹಾಕುತ್ತೇವೆ. ನಂತರ ನಾವೇ ಇದನ್ನು ಮಾಡಿ ತೋರಿಸುತ್ತೇವೆ ಎಂದು ಅವರು ಸವಾಲು ಹಾಕಿದರು.
ಮೀಸಲಾತಿ ಶೇ. 50 ಮೀರಬಾರದು ಎಂಬುದನ್ನು ರದ್ದು ಪಡಿಸಬೇಕು
ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂಬ ನಿಗದಿ ಪಡಿಸಿರುವ ಮಾನದಂಡವನ್ನು ತೆಗೆದು ಹಾಕಿ. ಈ ಶೇ. 50 ಅಂತರವನ್ನು ಮೊದಲು ತೆಗೆದು ಹಾಕಿ. ಯಾರ ಜನಸಂಖ್ಯೆ ಎಷ್ಟಿದೆಯೋ ಅವರ ಜನಸಂಖ್ಯೆಗೆ ಅನುಗುಣವಾಗಿ ಸಹಭಾಗಿತ್ವ ಆಗಬೇಕು. ಅದಕ್ಕೆ ತಕ್ಕಂತೆ ದೇಶದ ಸಂಪತ್ತು, ಅಧಿಕಾರದ ಹಂಚಿಕೆಯಾಗಬೇಕು. ಅದು ಯಾರೇ ಆಗಿರಲಿ, ನರೇಂದ್ರ ಮೋದಿಯವರೇ ನೀವು ಹಿಂದುಳಿದವರ ಬಗ್ಗೆ ಮಾತನಾಡುತ್ತೀರಿ ಎಂದಾದರೆ ಈ ಕೆಲಸವನ್ನು ಮಾಡಿ ತೋರಿಸಿ ಎಂದು ಅವರು ಇದೇ ವೇಳೆ ಆಗ್ರಹಿಸಿದರು.
ಕಾಂಗ್ರೆಸ್ 150 ಸೀಟು ಗೆಲ್ಲಲಿದೆ 40 ಪರ್ಸೆಂಟ್ ಬಿಜೆಪಿ ಸರಕಾರ ಕೇವಲ 40 ಸೀಟು ಗಳಿಸಲಿದೆ
ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ನಾನು ಪಾದಾಯಾತ್ರೆ ಮಾಡಿದೆ. ಹಿಂದೂಸ್ತಾನವನ್ನು ಜೋಡಿಸಲು ಮತ್ತು ದ್ವೇಷವನ್ನು ತೊಲಗಿಸಲು ನಾನು ಈ ಯಾತ್ರೆ ಕೈಗೊಂಡಿದ್ದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ವಿಚಾರಧಾರೆಗಳನ್ನು ನಾವು ಒಪ್ಪುವುದಿಲ್ಲ. ಅವರಿಗೆ ಹೆದರುವುದಿಲ್ಲ. ಏನೇ ಆಗಲಿ, ನಾವು ಸೈದ್ದಾಂತಿ ಹೋರಾಟ ನಡೆಸಿ ಬಿಜೆಪಿ ಮತ್ತು ಆರ್.ಎಸ್.ಎಸ್. ನ್ನು ಸೋಲಿಸುತ್ತೇವೆ. ಮೀಸಲಾತಿಯಲ್ಲಿ ಬಂಜಾರಾ ಸೇರಿದಂತೆ ಅನ್ಯಾಯವಾಗಿರುವ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ. ಕಾಂಗ್ರೆಸ್ ಪಕ್ಷವನ್ನು 150 ಸ್ಥಾನಗಳಲ್ಲಿ ಗೆಲ್ಲಿಸಿ, 40 ಪರ್ಸೆಂಟ್ ಕಮಿಷನ್ ಪಡೆಯುವ ಬಿಜೆಪಿಯನ್ನು 40 ಸೀಟುಗಳಿಗೆ ಸೀಮಿತ ಮಾಡಬೇಕು ಎಂದು ರಾಹುಲ ಗಾಂಧಿ ಹೇಳಿದರು.
ರಾಹುಲ ಗಾಂಧಿ ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಕನ್ನಡಕ್ಕೆ ಭಾಷಾಂತರ ಮಾಡಿದರು.
ಇದಕ್ಕೂ ಮುಂಚೆ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ. ಬಿ. ಪಾಟೀಲ(ಬಬಲೇಶ್ವರ), ಶಿವಾನಂದ ಪಾಟೀಲ(ಬಸವನ ಬಾಗೇವಾಡಿ), ಯಶವಂತರಾಯಗೌಡ ವಿ. ಪಾಟೀಲ(ಇಂಡಿ), ಸಿ. ಎಸ್. ನಾಡಗೌಡ(ಮುದ್ದೇಬಿಹಾಳ), ಅಬ್ದುಲ್ ಹಮೀದ್ ಮುಶ್ರಿಫ್(ವಿಜಯಪುರ ನಗರ) ಶರಣಪ್ಪ ಸುಣಗಾರ(ದೇವರ ಹಿಪ್ಪರಗಿಃ, ವಿಠ್ಠಲ ಕಟಕದೊಂಡ(ನಾಗಠಾಣ ಮೀಸಲು), ಅಶೋಕ ಮನಗೂಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ವಿಧಾನ ಪರಿಷತ ಸದಸ್ಯ ಪ್ರಕಾಶ ರಾಠೋಡ. ಮುಖಂಡರಾದ ಡಾ. ಗಂಗಾಧರ ಸಂಬಣ್ಣಿ ಮೆರವಣಿಗೆ ವಾಹನದಲ್ಲಿದ್ದರು.
ಯುವ ಮುಖಂಡ ಸಂಗಮೇಶ ಬಬಲೇಶ್ವರ ಕಾರ್ಯಕ್ರಮ ನಿರೂಪಿಸಿದರು.