ವಿಜಯಪುರ: ಕೃಷ್ಣಾ ತೀರದ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇನೆ. ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಕಣಬೂರ, ಶಿರಬೂರ ಮತ್ತು ಸುತಗುಂಡಿ ಗ್ರಾಮಗಳಲ್ಲಿ ಅವರ ಪ್ರಚಾರ ಕೈಗೊಂಡ ಅವರು ಕಣಬೂರ ಗ್ರಾಮದಲ್ಲಿ ಮಾತನಾಡಿದರು.
ಕಣಬೂರ ಸೇರಿದಂತೆ ಕೃಷ್ಣಾ ತೀರದ ಗ್ರಾಮಗಳಲ್ಲಿ ರಸ್ತೆ, ಶಾಲೆಗಳ ಅಭಿವೃದ್ಧಿ ಸೇರಿದಂತೆ ನಾನಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರೂ.136 ಕೋಟಿ ಖರ್ಚು ಮಾಡಿದ್ದೇನೆ. ಅಲ್ಲದೇ, ಈ ಗ್ರಾಮಗಳ ಬಾಕಿ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು. ನಮ್ಮ ಸರಕಾರದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿದ್ದರೆ ಡಬಲ್ ಎಂಜಿನ್ ಸರಕಾರದಲ್ಲಿ ಒಂದೂ ಮನೆ ಕಟ್ಟಿಲ್ಲ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಯಾವುದೇ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಈ ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ? ಎಂಬ ಪರಿಸ್ಥಿತಿ ಇದೆ ಎಂದು ಅವರ ವಿಷಾಧ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡರಾದ ಚಂದ್ರಶೇಖರ ಇಮ್ಮಣ್ಣವರ, ಸಿದ್ದು ಮಠದ, ಸಂಜಯಗೌಡ ಪಾಟೀಲ ಮಾತನಾಡಿ ಕಣಬೂರ ಗ್ರಾಮ ದೂಳಮುಕ್ತವಾಗಿದ್ದು, ಸಿ.ಸಿ. ರಸ್ತೆಗಳ ಕೆಲಸವಾಗಿವೆ. ಮಾರ್ಚನಲ್ಲಿ ಬತ್ತುತ್ತಿದ್ದ ಕೃಷ್ಣಾ ನದಿಯಲ್ಲಿ ಈಗಲೂ ನೀರಿದೆ. ಇದಕ್ಕೆಲ್ಲ ಎಂ. ಬಿ. ಪಾಟೀಲರು ಕೈಗೊಂಡಿರುವ ಜನಪರ ಯೋಜನೆಗಳೇ ಕಾರಣ. ಇಂಥ ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ನಮ್ಮ ಭಾಗದಲ್ಲಿ ಮತ್ತಷ್ಟು ಒಳ್ಳೆಯ ಕೆಲಸಗಳಾಗುತ್ತವೆ. ಅಭಿವೃದ್ಧಿಯ ಹರಿಕಾರ ಎಂ. ಬಿ. ಪಾಟೀಲರನ್ನು ರಾಜ್ಯದಲ್ಲಿಯೇ ಅತ್ಯದಿಕ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಸ್.ಕೋರಡ್ಡಿ, ಬಸವರಾಜ ದೇಸಾಯಿ, ಪ್ರಕಾಶ ಸೊನ್ನದ, ಬಿ.ಎಚ್.ಮುಂಬಾರೆಡ್ಡಿ, ಪಾಂಡಪ್ಪ ಬಿರಾದಾರ, ರಾಚಯ್ಯ ಮಠ, ಶಂಕರಗೌಡ ಭೀಮನಗೌಡ ಪಾಟೀಲ, ಭೀಮಶಿ ಮಾಸರೆಡ್ಡಿ, ರಾಜೇಸಾಬ ಮುಲ್ಲಾ, ಸುನೀಲಗೌಡ ಪಾಟೀಲ, ರಮೇಶ ಯರಗಟ್ಟಿ, ರಾಚಪ್ಪ ಸೋಲಾಪುರ ಮುಂತಾದವರು ಉಪಸ್ಥಿತರಿದ್ದರು.