ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿ ಎಂದು ಪ್ರಾರ್ಥಿಸಿ ಯುವಕನೋರ್ವ ವಿಜಯಪುರದಿಂದ ತಿಕೋಟಾ ಹಾಜಿಮಸ್ತಾನ ದರ್ಗಾವರೆಗೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾನೆ.
ವಿಜಯಪುರ ನಗರದ ಸಕಾಫ್ ರೋಜಾ ನಿವಾಸಿ ಸಮೀರ ಜಾಗೀರದಾರ(36) ಗ್ಯಾರೇಜ್ ನಡೆಸುತ್ತಿದ್ದಾರೆ. ಎಂ. ಬಿ. ಪಾಟೀಲ ಅವರ ಕಟ್ಟಾ ಅಭಿಮಾನಿಯಾಗಿರುವ ಅವರು ವಿಜಯಪುರ ನಗರದ ಜೋಡ ಗುಮ್ಮಟದಿಂದ ತಿಕೋಟಾ ಹಾಜಿಮಸ್ತಾನ ದರ್ಗಾವರೆಗೆ ಪಾದಯಾತ್ರೆ ನಡೆಸಿದ್ದಾರೆ. ಈ ವಿಷಯ ತಿಳಿದು ದರ್ಗಾಕ್ಕೆ ಆಗಮಿಸಿದ ಎಂ. ಬಿ. ಪಾಟೀಲರು ಅಭಿಮಾನಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಜಯಪುರ ಮಾಜಿ ಮೇಹರ ಸಜ್ಜಾದೆ ಪೀರಾ ಮುಶ್ರೀಫ್, ಶಕೀಲ ಸುತಾರ ಮುಂತಾದವರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಮೀರ ಜಾಗೀರದಾರ, ಜೀವನದಲ್ಲಿ ನೀರು ಮತ್ತು ಅನ್ನ ಸಕಲ ಜೀವಿಗಳಿಗೂ ಅಗತ್ಯವಾಗಿದೆ. ಎಂ. ಬಿ. ಪಾಟೀಲರು ನಮಗೆಲ್ಲರಿಗೂ ನೀರು ಕೊಡುವ ಕೆಲಸ ಮಾಡಿದ್ದಾರೆ. ದೂರದಿಂದ ನೀರು ತಂದು ಎಲ್ಲ ವರ್ಗದ ಜನರ ಬಾಳನ್ನು ಹಸನಾಗಿಸಿದ್ದಾರೆ. ಹೀಗಾಗಿ ಅವರು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲವು ಸಾಧಿಸಬೇಕು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು. ವಿಜಯಪುರ ನಗರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಮೀದ ಮುಶ್ರಿಫ್ ಕೂಡಾ ಗೆಲವು ಸಾಧಿಸಬೇಕು ಎಂದು ಪ್ರಾರ್ಥಿಸಿ ಮಧ್ಯಾಹ್ನ 12ಕ್ಕೆ ವಿಜಯಪುರ ನಗರದ ಜೋಡ ಗುಮ್ಮಟದಿಂದ ಹೊರಟು ಸಂಜೆ 5ಕ್ಕೆ ಹಾಜಿಮಸ್ತಾನ ದರ್ಗಾ ತಲುಪಿದ್ದೇನೆ ಎಂದು ತಿಳಿಸಿದರು.
ಎದೆ ಮತ್ತು ಹೊಟ್ಟೆ ಮೇಲೆ ತ್ರಿವರ್ಣ ಧ್ವಜದ ಬಣ್ಣ ಹಚ್ಚಿ ಅದರ ಮೇಲೆ ಎಂ. ಬಿ. ಪಾಟೀಲರ ಭಾವಚಿತ್ರ ಮತ್ತು ಬೆನ್ನ ಮೇಲೆ ಹಮೀದ ಮುಶ್ರಿಫ್ ಅವರ ಭಾವಚಿತ್ರ ಹಾಕಿಸಿಕೊಂಡಿದ್ದ ಯುವಕ ಈ ಚಿತ್ರಗಳನ್ನು ಬಿಡಿಸಲು 25 ಗಂಟೆ ಸಮಯ ತಗುಲಿದೆ. ಡಾಂಗೆ ಎಂಬ ಕಲಾವಿಧರು ಈ ಚಿತ್ರಗಳನ್ನು ಬಿಡಿಸಿದ್ದಾರೆ. ನಾನು ಬಯಸಿದಂತೆ ಎಂ. ಬಿ. ಪಾಟೀಲರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿ. ಜೊತೆಗೆ ಹಮೀದ ಮುಶ್ರಿಫ್ ಕೂಡ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಪಾದಯಾತ್ರೆ ಪೂರ್ಣಗೊಳಿಸಿದಾಗ ಎಂ. ಬಿ. ಪಾಟೀಲರು ಖುದ್ದಾಗಿ ಬಂದು ನನ್ನನ್ನು ಭೇಟಿ ಮಾಡಿದ ಶುಭ ಕೋರಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಅವರ ಭೇಟಿಯ ನಂತರ ನನಗೆ ಅತೀವ ಸಂತಸವಾಗಿದ್ದು, ರಾತ್ರಿ ಇಡೀ ನಿದ್ರೆ ಮಾಡಲು ಸಾಧ್ಯವಾಗಿಲ್ಲ ಎಂದು ಸಮೀರ ಜಾಗೀರದಾರ ಭಾವುಕರಾಗಿ ನುಡಿದರು.
ಎಂ. ಬಿ. ಪಾಟೀಲರ ಶ್ರೇಯಸ್ಸು ಕೋರಿ ಈಗಾಗಲೇ ಕಣಬೂರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಯುವಕರು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಇದರ ನಡುವೆ ಸಮೀರ ಜಾಗೀರದಾರ ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.