ವಿಜಯಪುರ: ಏಪ್ರಿಲ್ 30 ರಂದು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜರುಗುವ “ನಮ್ಮ ನಡೆ, ಮತಗಟ್ಟೆಯ ಕಡೆ” ಕಾರ್ಯಕ್ರಮದಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವುದರ ಜೊತೆಗೆ ಮತದಾರರಲ್ಲಿ ಮತದಾನ ಅರಿವು ಮೂಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಕರೆ ನೀಡಿದರು.
ಶುಕ್ರವಾರ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳು ಈ ಕಾರ್ಯಕ್ರಮ ರೂಪರೇಷಗಳ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಎಲ್ಲರೂ ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಈ ಕಾರ್ಯಕ್ರಮವನ್ನು ಏಕಕಾಲಕ್ಕೆ ಹಮ್ಮಿಕೊಂಡಿದ್ದು, ಏಪ್ರಿಲ್ 30ರ ಬೆಳಿಗ್ಗೆ 8 ಗಂಟೆಯೊಳಗಾಗಿ ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಪೂರ್ವ ಸಿದ್ಧತೆ ಕೈಗೊಂಡು ನಿಯಮಾನುಸಾರ ಕಾರ್ಯಕ್ರಮ ಆಯೋಜಿಸಲು ಕ್ರಮವಹಿಸಬೇಕು. ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತದಾರರನ್ನು ಆಕರ್ಷಿಸಲು ಸ್ಥಳೀಯ ಜಾನಪದ- ಸಾಂಸ್ಕøತಿಕ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ, ಸೈಕಲ್ ಜಾಥಾ, ಪ್ರಭಾತ ಪೇರಿಯಂಥ ಜನಾಕರ್ಷಣೀಯ ವಿವಿಧ ಹಾಗೂ ವಿನೂತನ ಕಾರ್ಯಕ್ರಮಗಳು ಸೇರಿದಂತೆ ಚುನಾವಣಾ ವಿಷಯಯುಳ್ಳ ಕಾರ್ಯಕ್ರಮ ಆಯೋಜಿಸಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಸಿ-ವಿಜಿಲ್, ವೋಟರ್ ಹೆಲ್ಪ್ ಲೈನ್, ಕೆ-ವೈಸಿ, ಚುನಾವಣಾ ‘ಸಕ್ಷಮಆಪ್’ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕು ಮತ್ತು ಮತಗಟ್ಟೆಯ ಎಲ್ಲ ಸಿದ್ಧತೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಜಿಲ್ಲೆಯ ಪ್ರತಿ ಮತಗಟ್ಟೆಯನ್ನು ಪರಿಚಯಿಸುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ಧೇಶ. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾರತ ಚುನಾವಣಾ ಆಯೋಗ ಈ ಸಾಲಿನಲ್ಲಿ ಬಿಡುಗಡೆ ಮಾಡಿರುವ ಚುನಾವಣಾ ಗೀತೆಯನ್ನು ಹಾಗೂ 2018ರಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಬಿಡುಗಡೆಗೊಳಿಸಲಾದ ಚುನಾವಣಾ ಗೀತೆಗಳನ್ನು ಬಳಸುವಂತೆ ಅವರು ಸಲಹೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಏಪ್ರಿಲ್-30 ರಂದು ನಡೆಯುವ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವು ಅತೀ ಮಹತ್ವದ ಕಾರ್ಯಕ್ರಮವಾಗಿದೆ. ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.ಯಾವುದೇ ಅಡಚಣೆಯಾಗದಂತೆ, ಮುನ್ನೆಚ್ಚರಿಕೆಯಿಂದ ಬಹು ಯಶಸ್ವಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಹಬ್ಬದ ವಾತಾವರಣ ಕಳೆಗಟ್ಟಬೇಕು. ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ “ಪ್ರಜಾಪ್ರಭುತ್ವ ಹಬ್ಬ, ಮೇ 10 ಮತದಾನ” ಎಂಬ ಧ್ಯೇಯವುಳ್ಳ ಬಾವುಟವನ್ನು ಎಲ್ಲ ಮತಗಟ್ಟೆಗಳಿಗೂ ಒದಗಿಸಲಾಗುವುದು. ನಿಯಮಾನುಸಾರ ಅದನ್ನು ಮತಗಟ್ಟೆಯಲ್ಲಿ ಧ್ವಜಾರೋಹಣ ಮಾಡಬೇಕು ಎಂದು ಹೇಳಿದರು.
ಯುವ ಮತದಾರರು, ವಿಶೇಷ ಚೇತನರು ಹಾಗೂ ಮಹಿಳಾ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಸ್ಥಳೀಯವಾಗಿ ಕಲಾವಿದರನ್ನು ಬಳಸಿಕೊಂಡು ಬೀದಿನಾಟಕ, ಜನಪದ ಅಥವಾ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆ ಮಾಡಬೇಕು. ಪ್ರತಿ ಮತಗಟ್ಟೆ ಹಂತದಲ್ಲಿ ಬೆಳಿಗ್ಗೆÉ 7.30 ರಿಂದ 9.00 ಗಂಟೆಯವರೆಗೆ ನಿಗದಿಪಡಿಸಿದಂತೆ ವಿಶೇಷವಾಗಿ ಹಾಗೂ ವಿಭಿನ್ನ ರೀತಿಯಿಂದ ಆಯೋಜಿಸಿ ಮತದಾರರ ಮನ ಮುಟ್ಟುವಂತೆ ಮಾಹಿತಿ ಒದಗಿಸುವಂತೆ ಅವರು ಕರೆ ನೀಡಿದರು.
ಈ ಸಭೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು, ಕ್ಷೇತ್ರ ಶೀಕ್ಷಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.