ಜಾತಿ ನೋಡಿ ಮತ ಹಾಕಬಾರದು- ಅಭಿವೃದ್ಧಿ ನೋಡಿ ವೋಟ್ ಹಾಕಬೇಕು- ಕಾಂತಾ ನಾಯಕ

ವಿಜಯಪುರ: ಮತ ಹಾಕುವಾಗ ಜಾತಿ ನೋಡಬಾರದು. ಅಭಿವೃದ್ಧಿ ಮಾಡುವ ಅಭ್ಯರ್ಥಿಯನ್ನು ನೋಡಿ ವೋಟ್ ಹಾಕಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದರು.

ನಾಗಠಾಣ ಮತಕ್ಷೇತ್ರದ ಕನ್ನೂರ ಗ್ರಾಮದಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಧೋಂಡಿಬಾ ಕಟಕದೊಂಡ ಪರ ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಭ್ರಷ್ಟಾಚಾರದಲ್ಲಿ ಮತ್ತು ಜೆಡಿಎಸ್ ಜಾತಿ ರಾಜಕಾರಣದಲ್ಲಿ ನಿರತವಾಗಿವೆ. ಜನಪ್ರತಿನಿಧಿಗಳು ಕೇವಲ ಶುಭ ಮತ್ತು ಅಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಸಾಲದು. ಅಭಿವೃದ್ಧಿ ಕೆಲಸಗಳನ್ನೂ ಮಾಡಬೇಕು. ಆದರೆ, ನಾಗಠಾಣ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದರು.

ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ಅಚ್ಛೇ ದಿನ್ ಹೆಸರಲ್ಲಿ ದೇಶ ಮತ್ತು ರಾಜ್ಯದ ಪರಿಸ್ಥಿತಿ ಹಾಳಾಗಿದೆ. ನೀವು ಬಿಜೆಪಿಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಕನ್ನೂರು ಗ್ರಾಮ ನನಗೆ ಚಿರಪರಿಚಿತ. ಕ್ಷೇತ್ರಗಳ ಪುನರ್ವಿಂಗಡಣೆಗೂ ಮುಂಚೆ ನಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತು. ಇಲ್ಲಿನ ಗ್ರಾಮಸ್ಥರು ಮತ್ತು ತಾಂಡಾಗಳ ಜನತೆ ಪ್ರೀತಿ ತೋರಿದ್ದಾರೆ. ಈ ಚುನಾವಣೆಯಲ್ಲಿ ತಾವೆಲ್ಲರೂ ಯೋಚಿಸಿ ಮತ ಹಾಕಬೇಕು. ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿರುವ ನೀರಾವರಿ ಯೋಜನೆಗಳನ್ನು ನೆನಪಿಸಿಕೊಂಡು ಬೆಂಬಲ ನೀಡಬೇಕು ಎಂದು ಹೇಳಿದರು.

ಕನ್ನೂರಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಅವರು ವಿಠ್ಠಲ ಕಟಕದೊಂಡ ಪರ ಮತಯಾಚಿಸಿದರು

ನಾವು ನುಡಿದಂತೆ ನಡೆದಿದ್ದೇವೆ. ನಾವು ನೂರೈವತ್ತು ಭರವಸೆ ನೀಡಿ, ನೂರಾ ಅರವತ್ತು ಈಡೇರಿಸಿದ್ದೇವೆ. ಬಿಜೆಪಿ ಆರು ನೂರು ಭರವಸೆ ಕೊಟ್ಟು ಕೇವಲ ನಲ್ವತ್ತೆಂಟು ಮಾತ್ರ ಈಡೇರಿಸಿದ್ದಾರೆ. ಕೇವಲ ಒಂದೇ ಒಂದು ಮನೆ ಕಟ್ಟಿಲ್ಲ. ನಾವು ಹದಿನೆಂಟು ಲಕ್ಷ ಮನೆ ಕಟ್ಟಿದ್ದೇವೆ. ಅವರು ಲಕ್ಷ ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಇನ್ನು ಮೋದಿಯವರು ಇವರಿಗಿಂತ ಸುಳ್ಳುಗಾರ. ಕಪ್ಪು ಹಣ ವಾಪಸ್ ತರಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸಲಿಲ್ಲ. ಬದಲಾಗಿ ನೋಟ್ ಬ್ಯಾನ್ ಮಾಡಿ ಈ ಮುಂಚೆ ಇದ್ದ ಉದ್ಯೋಗಗಳನ್ನು ಖಡಿತಗೊಳಿಸಿದರು. ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ, ದಿನಬಳಿಕೆ ವಸ್ತುಗಳು ಕೃಷಿ ಸಲಕರಣೆಗಳು ಬೆಲೆ ತುಟ್ಟಿಯಾಗುವಂತೆ ಮಾಡಿದರು. ಡಬಲ್ ಎಂಜಿನ್ ಸರಕಾರದಲ್ಲಿ ನೀರಾವರಿಗೆ ಏನೂ ಮಾಡಲಿಲ್ಲ. ನಾವು ಜಿಲ್ಲೆಗೆ ಹದಿನಾಲ್ಕು ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಹಗಲು ರಾತ್ರಿ ದುಡಿದು ಮುಳವಾಡ, ತಿಡಗುಂದಿ ಅಕ್ವಾಡೆಕ್ಟ್ ಸೇರಿ ಆಗದ ಕೆಲಸ ಆಗಿವೆ. ಎರಡೇ ವರ್ಷದಲ್ಲಿ 14 ಕಿಮಿ ಉದ್ದದ ಅಕ್ವಾಡೆಕ್ಟ್ ಪೂರ್ಣ ಮಾಡಿ ಏಶಿಯಾದಲ್ಲೇ ದೊಡ್ಡದು ಎಂಬ ಕೀರ್ತಿ ಪಡೆದವು. ಮುಂದೆಯೂ ಪ್ರತಿ ಊರಿಗೂ ನೀರು ಕೊಡುತ್ತೇವೆ. ಜಿಲ್ಲೆ ಸಂಪೂರ್ಣ ನೀರಾವರಿ ಮಾಡುತ್ತೇವೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದಂತೆ ಬೊಗಸೆ ನೀರು ಕೊಟ್ಟಿದ್ದೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡರ ಗೆಲುವು ನಿಶ್ಚಿತ. ಅವರಿಗೆ 25 ಸಾವಿರ ಲೀಡ್ ಕೊಡಿ, ಆತ ಒಳ್ಳೆಯ ಮನುಷ್ಯ ಎಂದು ಹೇಳಿದರು.

ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಜನಮಾನಸದಿಂದ ದೂರವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರಿಗೂ ಪರಿಚಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಈ ಭಾಗದಲ್ಲಿ ಅತೀ ಹೆಚ್ಚು ಜನಪ್ರೀಯರಾಗಿದ್ದು, ಶೇ.100 ರಷ್ಟು ಗೆಲ್ಲಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ವೇ ಜನೋ ಸುಖಿನೋ ಭವಂತಿ ಎಂಬ ತತ್ವದಡಿ ಸರ್ವಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ಈಗಿನ ಸರಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಕೇವಲ ಗುಡಿ, ಗುಂಡಾರಗಳಿಗೆ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ದುಡ್ಡು ಹಂಚುವವರಿಗೆ ಮರುಳಾಗದೇ ಕಾಂಗ್ರೆಸ್‍ಗೆ ಮತ ಹಾಕಬೇಕು. ವಿಠ್ಠಲ ಕಟಕದೊಂಡ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿ.ಎಲ್.ನಾಯಕ, ತುಕಾರಾಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಜಾನ್ ಮುಲ್ಲಾ, ಆರ್.ಡಿ.ಹಕ್ಕೆ, ಕಾಳಪ್ಪ ಬೆಳ್ಳುಂಡಗಿ, ಶಿವಾನಂದ ಡೊಳ್ಳಿ, ಇಸಾಕ್ ಜಮಾದಾರ್, ಹಣಮಂತ ಪಾಟೀಲ, ರಮೇಶ ಪಾಟೀಲ, ಶಬ್ಬೀರ್ ನಾದಾಫ್, ದಯಾನಂದ್ ಪಾಟೀಲ, ಸೋಮನಗೌಡ ಪಾಟೀಲ, ಅಬ್ದುಲ್ ನದಾಫ್ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌