ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ದಿನಕ್ಕೆ ನಾಲ್ಕು ಬಾರಿ ವಿಷ ಕಾರುತ್ತಾರೆ ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಯತ್ನಾಳ ಜಾತಿ, ಧರ್ಮಗಳ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿ ವಿಷ ಕಾರುತ್ತಿದ್ದಾರೆ. ನಿರಂತರವಾಗಿ ದ್ವೇಷವನ್ನು ಬಿತ್ತುವ, ಅವಮಾನಕರ ಮತ್ತು ಅಶ್ಲೀಲ ಹೇಳಿಕೆ ನೀಡುತ್ತ ಬಂದಿದ್ದಾರೆ. ಬಾಯಿ ತೆರೆದರೆ ಬೆಂಕಿ ಉಗುಳುವಂತೆ ವಿಷ ಕಾರುತ್ತಿದ್ದಾರೆ ಎಂದು ಆರೋಪಿಸಿದರು.
ಯತ್ನಾಳ ಅವರು ರಾಹುಲ ಗಾಂಧಿ ವಿರುದ್ಧ ಹುಚ್ಚ ಎನ್ನತಾರೆ. ಕಳೆದ ಐದು ವರ್ಷ ಇವರ ನಡವಳಿಕೆ ಯಾವ ರೀತಿ ಇದೆ ಎಲ್ಲರಿಗೂ ಗೊತ್ತಿದೆ. ಇವರ ನಡವಳಿಕೆ ಬಗ್ಗೆ ರಾಜ್ಯದ ಜನತೆ ಇವರನ್ನು ಏನು ಅಂತ ಕರಿತಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ ಎಂ. ಬಿ. ಪಾಟೀಲ, ಸೋನಿಯಾ ಗಾಂಧಿ ವಿರುದ್ಧ ವಿಷಕನ್ಯೆ, ಪಾಕಿಸ್ತಾನದ ಏಜೆಂಟ್ ಯತ್ನಾಳ ಹೇಳಿದ್ದಾರೆ. ಆದರೆ, ರಾಜೀವ ಗಾಂಧಿಯವರನ್ನು ಮದುವೆಯಾಗಿ ಬಂದು ದೇಶದ ಸೊಸೆಯಾಗಿ ಎರಡು ಬಾರಿ ಪ್ರಧಾನಿಯಾಗುವ ಅವಕಾಶವನ್ನು ಅವರು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಸೋನಿಯಾ ಗಾಂಧಿಯವರ ಚಾರಿತ್ರ್ಯದ ಬಗ್ಗೆ ಮಾತನಾಡುವುದು ಸಲ್ಲದು. ಅವರು 50 ವರ್ಷಗಳಿಂದ ದೇಶದಲ್ಲಿ ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಬದುಕಿ ಯಾವುದೇ ಆಸೆಯಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಆದರೆ, ಯತ್ನಾಳ ಅವರು ಕಳೆದ ಐದು ವರ್ಷಗಳಿಂದ ನೀಡಿರುವ ಎಲ್ಲ ಹೇಳಿಕೆ ಪರಿಶೀಲಿಸಬೇಕು. ಅದನ್ನು ನೋಡಿದರೆ ಒಂದು ಗ್ರಂಥವಾಗುತ್ತದೆ ಎಂದು ಎಂ. ಬಿ. ಪಾಟೀಲ ವ್ಯಂಗ್ಯವಾಡಿದರು.
ಇದೇ ಯತ್ನಾಳ ಒಂದು ಕಡೆ ಕಾಂಗ್ರೆಸ್ ನಾಯಕರನ್ನು ಅವಾಚ್ಯವಾಗಿ ಬಯ್ಯುತ್ತಾರೆ. ಮತ್ತೋಂದೆಡೆ ತಮ್ಮ ಪಕ್ಷದ ನಾಯಕರ ವಿರುದ್ಧವೂ ಹರಿಹಾಯುತ್ತಾರೆ. ಈ ಹಿಂದೆ ಸೋಮಣ್ಣನವರನ್ನು ಬೈದು ನಂತರ ಗೆಳೆಯರಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ಬೈದಿದ್ದಾರೆ. ಆ ಬೈಗುಳಗಳನ್ನು ಸಂಗ್ರಹಿಸಿದರೆ 1000 ವಿಡಿಯೋ ಆಗಬಹುದು. ಐದು ವರ್ಷಗಳ ಕಾಲ ನಿರಂತರವಾಗಿ ಬೇರೆಯವರ ವಿರುದ್ಧ ಅಸಹ್ಯವಾಗಿ ಟೀಕೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನಾದ ಮೇಲೆ ಎಲ್ಲರ ಪ್ರತಿನಿಧಿಯಾಗಿರುತ್ತಾರೆ. ಇಂಥ ಕನಿಷ್ಠ ತಿಳುವಳಿಕೆ ಇರಲಾರದ ವ್ಯಕ್ತಿ ಈ ಹಿಂದೆ ಟೋಪಿ, ಬುರಖಾ ಹಾಕುವವರು, ಗಡ್ಡ ಬಿಟ್ಟವರು ತಮ್ಮ ಕಚೇರಿಗೆ ಬರಬೇಡಿ ಎಂದು ಹೇಳಿದಾಗ ನಾನು ಆ ಜನರನ್ನು ನನ್ನ ಆಫೀಸಿಗೆ ಬರಲು ಹೇಳಿದ್ದೆ ಎಂದು ಅವರು ಹೇಳಿದರು.
ಯತ್ನಾಳ ಅವರ ತಂದೆ ಬಸನಗೌಡ ಎಂದು ಇವರಿಗೆ ಬಸವಣ್ಣನವರ ಹೆಸರನ್ನು ಇಟ್ಟಿದ್ದಾರೆ. ಇವತ್ತು ಬಸವಣ್ಣನವರ ಹೆಸರು ಇಟ್ಟುಕೊಂಡು ಹೀಗೆ ಮಾತನಾಡುತ್ತಿರುವುದು ಸರಿಯಲ್ಲ. ಇವ ನಮ್ಮವ, ಇವ ನಮ್ಮವ, ಕಳಬೇಡ, ಕೊಲಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂದು ಹೇಳಿರುವ ಬಸವಣ್ಣನವರ ವಚನಗಳು, ತತ್ವ, ಸಿದ್ಧಾಂತ ಲೆಕ್ಕಿಸದೇ ಬೇರೆಯವರ ಅವಹೇಳನ ಮಾಡಿದ್ದಾರೆ. ಈಗ ವಿಜಯಪುರ ನಗರದ ಜನ ಯತ್ನಾಳ ಅವರಿಗೆ ತಕ್ಕಪಾಠ ಕಲಿಸುವ ಕಾಲ ಬಂದಿದೆ. ಇವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಸವನಾಡಿನ ಜನ ಇದನ್ನು ಒಪ್ಪುವುದಿಲ್ಲ. ಇವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದರು.
ಪರಮೇಶ್ವರ ಮೇಲೆ ಹಲ್ಲೆ ಪ್ರಕರಣ
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ಮೇಲೆ ಕಲ್ಲು ಎಸೆತ ಘಟನೆ ಖಂಡನೀಯವಾಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಅವರ ಜೀವಕ್ಕೆ ಅಪಾಯವಿತ್ತು. ಚುನಾವಣೆಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಹೇಳಬೇಕೇ ಹೊರತು ಹಲ್ಲೆ ಮಾಡುವುದು ಖಂಡನೀಯ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹೇಳಿದರು.
ದೇವಾಪುರ, ಹುಬನೂರ ಎಲ್. ಟಿ. 1ರ ಘಟನೆ
ಮೊನ್ನೆ ಹುಬನೂರ ಎಲ್. ಟಿ. 1ರಲ್ಲಿ ನನ್ನ ಪತ್ನಿ ಪ್ರಚಾರಕ್ಕೆ ಅಡ್ಡಿಪಡಿಸಲಾಗಿತ್ತು. ಇದಕ್ಕೂ ಮುಂಚೆ ದೇವಾಪುರದಲ್ಲಿ ನನ್ನ ಕಾರ್ಯಕ್ರಮಕ್ಕೂ ಅಡ್ಡಿಪಡಿಸಲಾಗಿತ್ತು. ಅಂದು ಯುವಕನೋರ್ವ ಹಿರಿಯ ವ್ಯಕ್ತಿಗೆ ಅಶ್ಲೀಲ ಪದ ಬಳಸಿ ಮಾತನಾಡಿದ್ದ. ಆಗ ನಾನು ಆ ಯುವಕನ ತಲೆಯ ಮೇಲೆ ಮುಟ್ಟಿ ಬುದ್ದಿವಾದ ಹೇಳಿದ್ಜೆ. ಅದನ್ನು ಎಂ. ಬಿ. ಪಾಟೀಲರು ಹಲ್ಲೆ ಮಾಡಿದರು, ಗೂಂಡಾಗಿರಿ ಮಾಡಿದರು ಎಂದು ವಿರೋಧಿಗಳು ತಿರುಚಿದ್ದಾರೆ. ವಿರೋಧಿಗಳು ಮೂರು ಚುನಾವಣೆಯಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಈಗ ಆಪ್ತರ ಸಲಹೆಯ ಮೇರೆಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಸ್ರಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ. ಈ ಹಿಂದೆ ಎಷ್ಟು ಮನೆಗಳನ್ನು ಮುರಿದಿದ್ದೀರಿ? ಎಷ್ಟು ಕುಟುಂಬಗಳನ್ನು ಹಾಳು ಮಾಡಿದ್ದೀರಿ? ನಾಟಕ ಮಾಡುವ ಬದಲು ಅಭಿವೃದ್ಧಿ ಮಾಡಿ ಮತ ಕೇಳಿ. ಸೊಂಗು ಹಾಕಿದ್ದು ಸರಿಯಲ್ಲ ಎಂದು ಅವರು ಹೇಳಿದರು.
ಜಗದೀಶ ಶೆಟ್ಟರ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ವಿಚಾರ
ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದಾಗ ಬಿಜೆಪಿಗೆ ಚೂರಿ ಹಾಕಿರಲಿಲ್ಲವೇ? ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ. ಆಗ, ಬಿಜೆಪಿ ಎದೆಗೆ, ಬೆನ್ನಿಗೆ ಚೂರಿಗೆ ಹಾಕಿರಲಿಲ್ಲವೇ? ಎೞದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ದ್ವೇಷ ಭಾಷಣ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಾಗಬೇಕು ಎಂದು ಹೇಳಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆ ವಿಚಾರ
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಕುರಿತು ಮಾಡಿರುವ ಟೀಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಂಥ ಆಧಾರ ರಹಿತ ಆರೋಪ ಸರಿಯಲ್ಲ. ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಗಳಿಗೆ ಈಗ ಪ್ರತಿಕ್ರಿಯೆ ನೀಡಲ್ಲ. ನನಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಜಲನಾಯಕ ಎಂದು ಆಶೀರ್ವದಿಸಿದ್ದಾರೆ. ಫಡ್ನವೀಸ್ ಹೇಳಿಕೆ ನಗಣ್ಯವಾಗಿದೆ. ಯಾರೋ ಬರೆದು ಕೊಟ್ಟಿದ್ದನ್ನು ಓದಿದ್ದಾರೆ. ನೆರೆಯ ಮಹಾರಾಷ್ಟ್ರದ ಜತ್ ತಾಲೂಕಿಗೆ ಕಳೆದ 45 ವರ್ಷಗಳಿಂದ ಮಹಿಶ್ಯಾಳ ಯೋಜನೆ ಜಾರಿ ಮಾಡದೆ ನೀರು ಕೊಟ್ಟಿಲ್ಲ. ನಾನು ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಿಗೆ ನೀರು ಕೊಟ್ಟಿದ್ದೇನೆ. ನಿಮ್ಮ ಕಡೆ ನೋಡಿಕೊಳ್ಳಿ ಎಂದು ಅವರು ಹೇಳಿದರು.
ಮೋದಿ ವಿರುದ್ಧ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯ ನೀಡಿದ ಅವರು, ಈ ಬಗ್ಗೆ ಖರ್ಗೆ ಅವರು ಸ್ಪಷ್ಠೀಕರಣ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಖತಂ ಆಗಿರುವುದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಹೀಗಾಗಿ ಮೋದಿ ಅವರನ್ನು ರಾಜ್ಯಕ್ಕೆ ಪ್ರಚಾರಕ್ಕೆ ಕರೆಯಿಸುತ್ತಿದ್ದಾರೆ. ಆದರೆ, 2014ರಲ್ಲಿ ಮೋದಿ ಹೊಂದಿದ್ದ ಪ್ರಭಾವ ಈಗ ದುರಾಡಳಿತ, ಬೆಲೆಯೇರಿಕೆಯಿಂದಾಗಿ ಕಡಿಮೆಯಾಗಿದೆ. ಡಬಲ್ ಎಂಜಿನ್ ಸರಕಾರದ ಎರಡೂ ಎಂಜಿನ್ ಸ್ಕ್ರ್ಯಾಪ್ ಆಗಿವೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಎಐಸಿಸಿ ವಿಜಯಪುರ ಲೋಕಸಭೆ ಕ್ಷೇತ್ರದ ವೀಕ್ಷಕಿ ಪ್ರೀತಿ ಜೈಸ್ವಾಲ, ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.