ವಿಜಯಪುರ: ಬಣಜಿಗ ಸಮುದಾಯ ವಿಜಯಪುರ ನಗರದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಂಬಲಿಸಲು ಸಭೆಯಲ್ಲಿ ನಿರ್ಧರಿಸಿದೆ.
ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಾನಾ ಮುಖಂಡರು, ಯತ್ನಾಳ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಒಮ್ಮತದ ನಿರ್ಣಯ ಕೈಗೊಂಡಿದೆ. ಗೊಂದಲ ಸೃಷ್ಟಿಸಲು ಕೆಲವರು ತಪ್ಪು ಸಂದೇಶ ನೀಡಿ, ಪಂಚಮಸಾಲಿ ಹಾಗೂ ಬಣಜಿಗ ಸಮುದಾಯಗಳ ಮಧ್ಯೆ ಇದ್ದ ಅನ್ಯೋನ್ಯತೆ ಕೆಡಿಸಲು ಯತ್ನಿಸಿದ್ದರು. ಇದರಿಂದ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಸಭೆ ನಡೆಸುವ ಮೂಲಕ ಸಮಾಜಕ್ಕೆ ಸಂದೇಶ ನೀಡಲಾಗುತ್ತಿದೆ ಎಂದು ಹೇಳಿದರು.
ಯತ್ನಾಳರು ಎಂದೂ ನಮ್ಮ ಸಮಾಜಕ್ಕೆ ಬೈದಿರುವುದಿಲ್ಲ. ಸಣ್ಣಸಣ್ಣ ಸಮಾಜದಿಂದ ದೊಡ್ಡ ಸಮಾಜಗಳ ಪರವಾಗಿ ವಿಧಾನಸಭೆ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿ ನ್ಯಾಯ ಕೊಡಿಸಲು ಶ್ರಮಿಸುತ್ತಿದ್ದಾರೆ. ಅವರು, ಸದಾ ನಮ್ಮ ಸಮದಾಯದ ಜೊತೆಗಿದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ. ನಾವು ಕೂಡ ಹಿಂದೆಯೂ ಅವರ ಬೆಂಬಲವಾಗಿದ್ದೇವು. ಮುಂದೆಯೂ ಇರುತ್ತೇವೆ ಎಂದು ಹೇಳಿದರು.
ಆದರೆ, ಕೆಲವೇ ಕೆಲವರು ಕಾಂಗ್ರೆಸ್ ಜೊತೆ ಸೇರಿ ಒಪ್ಪಂದ ಮಾಡಿಕೊಂಡು, ಸಮಾಜದ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ. ಇಂಥವರ ಮಾತಿಗೆ ಸಮಾಜದ ಯಾರೊಬ್ಬರೂ ಕಿವಿಗೊಡಬಾರದು. ಸದಾ ಕುಟುಂಬದ ಸಂಬಂಧ, ವ್ಯಾಪಾರ ಸಂಬಂಧವಾಗಿ ನಾವೆಲ್ಲರೂ ಒಂದಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ದಾರಿ ತಪ್ಪಿಸುವ ಕೆಲವರು ನಡೆಸುತ್ತಿರುವ ಕುತಂತ್ರಕ್ಕೆ ಸ್ಪಂದಿಸಬಾರದು. ನಗರದ ಅಭಿವೃದ್ದಿ, ಸುರಕ್ಷತೆ, ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ನಡೆಸಲು ಯತ್ನಾಳರ ಅಗತ್ಯವಿದೆ. ಯಾರದೋ ಮಾತು ಕೇಳಿ ತಪ್ಪು ಮಾಡಿದರೆ, ಬೇರೆಯವರ ಮನೆಯ ಎದುರು ಕೈ ಕಟ್ಟಿ ನಿಲ್ಲುವ ದುಸ್ಥಿತಿ ಬರುತ್ತದೆ ಎಂದು ಅವರು ಹೇಳಿದರು.
ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾವೇಲ್ಲ ಈಗಾಗಲೇ ಯತ್ನಾಳರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಸಮಾಜದ ಪ್ರತಿಯೊಬ್ಬರ ಮನೆಗೆ ತೆರಳಿ ಯತ್ನಾಳರ ಪರ ಮತಯಾಚನೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಮುಖಂಡರಾದ ಸಿದ್ರಾಮಪ್ಪ ಉಪ್ಪಿನ, ಅನೀಲ ಆಣೆಪ್ಪನವರ, ರಾಜಶೇಖರ ತಾಳಿಕೋಟಿ, ಕಾಂತು ಬೋಗಶೆಟ್ಟಿ, ಸದಾನಂದ ಗುಡ್ಡೋಡಗಿ, ಜಯ ತಾಳಿಕೋಟಿ, ಅಪ್ಪು ವಾರದ, ಚಂದು ಇಂಡಿ, ಆನಂದಅಕ್ಕಿ, ಅನೀಲ ಧಾರವಾಡಕರ, ಡಾ. ಬಾಗಲಕೋಟ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿ ಮಾತನಾಡಿದರು.