ಮೀಸಲಾತಿ ವಿಚಾರದಲ್ಲಿ ಬಿಜೆಪಿ ಬಂಜಾರಾ ಸಮುದಾಯದ ಬೆನ್ನಿಗೆ ಚೂರಿ ಹಾಕಿದೆ- ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು- ಪ್ರಕಾಶ ರಾಠೋಡ

ವಿಜಯಪುರ: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಬಂಜಾರ ಸಮುದಾಯದ ಬೆನ್ನಿಗೆ ಚೂರಿ ಹಾಕಿದ್ದು, ಈ ಚುನಾವಣೆಯಲ್ಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಹೇಳಿದ್ದಾರೆ.

ತಿಕೋಟಾ ತಾಲೂಕಿನ ಟಕ್ಕಳಕಿ ಎಲ್.ಟಿ.1 ರಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.

1978ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ದೇವರಾಜ ಅರಸ ಅವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ತಂದೆ ಕೆ.ಟಿ.ರಾಠೋಡ ಸಚಿವರು ಹಾಗೂ ಮತ್ತು ಎಲ್.ಆರ್.ನಾಯಕ ರಾಜ್ಯಸಭೆ ಸದಸ್ಯರಾಗಿ ಮಾಡಿದ ಮನವಿಗೆ ಸ್ಪಂದಿಸಿ ಕಾಂಗ್ರೆಸ್ ಬಂಜಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿತ್ತು. ಈಗ 40 ವರ್ಷಗಳ ನಂತರವೂ ನಮ್ಮ ಸಮಾಜ ಇನ್ನೂ ಬಡತನ ರೇಖೆಗಿಂತಲೂ ಕೆಳಗಿದೆ. ಸಮುದಾಯದ ಶೇ.90 ರಷ್ಟು ಜನ ಈಗಲೂ ಗುಳೆ ಹೋಗುತ್ತಾರೆ. ಅವರ ರಕ್ಷಣೆ ಮಾಡುವ ಬದಲು ಶ್ರೀಮಂತರ ಪಕ್ಷ ಬಿಜೆಪಿ ಒಳಮಿಸಲಾತಿ ನೆಪದಲ್ಲಿ ನಮಗೆ ಅನ್ಯಾಯ ಮಾಡಿದೆ. 341ರ ಅನುಚ್ಛೇದ ಅಡಿ ನಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಹುನ್ನಾರ ನಡೆಸಿದೆ ಎಂದು ಅವರು ಹೇಳಿದರು.

 

ಒಳಮೀಸಲಾತಿ ಘೋಷಣೆಗೂ ಮುಂಚೆ ಸರ್ವ ಪಕ್ಷದ ಸಭೆ ಕರೆಯಲಾಗುವುದು. ಸದನದಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಮತ್ತು ಸಚಿವರು ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಸಿ.ಬಂಜಾರಾ ಮತ್ತು ಬಿಜೆಪಿ ನಾಯಕರು ವಚನ ಭ್ರಷ್ಠರಾಗಿದ್ದಾರೆ. ಆದರೂ ಬಿಜೆಪಿಯಲ್ಲಿರುವ ಯಾವೊಬ್ಬ ಸಚಿವ, ಸಂಸದ ಮತ್ತು ಶಾಸಕರು ಒಳಮೀಸಲಾತಿಯನ್ನು ವಿರೋಧಿಸಿ ಒಂದು ಹೇಳಿಕೆಯನ್ನು ನೀಡಿಲ್ಲ. ಸ್ವಾಭಿಮಾನಕ್ಕೆ ಹೆಸರಾದ ಬಂಜಾರ ಸಮಾಜ ರಾಜ್ಯಾದ್ಯಂತ ಬಿಜೆಪಿಯನ್ನು ತಿರಸ್ಕರಿಸಲಿದೆ. ಶ್ರಮಜೀವಿಗಳಾದ ನಮಗೆ ಅನ್ಯಾಯ ಮಾಡಿರುವ ಬಿಜೆಪಿಗೆ ನಾವೆಲ್ಲರೂ ಮತದಾನದ ಮೂಲಕ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಅವರು ಹೇಳಿದರು.

ಟಕ್ಕಳಕಿ ಎಲ್. ಟಿ.-1 ಕ್ಕೆ ಆಗಮಿಸಿದ ಎಂ. ಬಿ. ಪಾಟೀಲ, ಪ್ರಕಾಶ ರಾಠೋಡ ಅವರನ್ನು ಲಂಬಾಣಿ ಮಹಿಳೆಯರು ಸ್ವಾಗತಿಸಿ ಆಶೀರ್ವದಿಸಿದರು

ಈ ಚುನಾವಣೆಯಲ್ಲಿ ಬಂಜಾರ ಸಮುದಾಯದ ಎಲ್ಲರೂ ಶೇ.100 ರಷ್ಟು ಮತದಾನ ಮಾಡಬೇಕು. ಇಡೀ ದೇಶದಲ್ಲಿಯೇ ಯಾವೊಬ್ಬ ಸಚಿವರೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಎಂ. ಬಿ. ಪಾಟೀಲರನ್ನು ಎಲ್ಲರೂ ಬೆಂಬಲಿಸಬೇಕು. ಕಾಂಗ್ರೆಸ್ 150 ಸೀಟುಗಳಲ್ಲಿ ಜಯಗಳಿಸಿ ಅಧಿಕಾರಿಕ್ಕೆ ಬರಲಿದೆ. ನಂತರ ಈಗ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣವನ್ನು 50 ರಿಂದ 75ಕ್ಕೆ ಹೆಚ್ಚಿಸಿ ಅನ್ಯಾಯ ಸರಿಪಡಿಸಲಿದೆ ಎಂದು ಪ್ರಕಾಶ ರಾಠೊಡ ಹೇಳಿದರು.

ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ಮತಕ್ಷೇತ್ರದ ಎಲ್ಲ ತಾಂಡಾಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ವಿಜಯಪುರದಲ್ಲಿ ಹಾಮುಲಾಲ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ಮತ್ತು ಮಂದಿರ ನಿರ್ಮಿಸಲು ಅನುದಾನ ನೀಡಿದ್ದೇನೆ. ಸಮುದಾಯ ಭವನಕ್ಕೆ ನನ್ನ ಬದಲು ರಾಮರಾವ ಮಹಾರಾಜರ ಹೆಸರು ಇಟ್ಟಿದ್ದೇವೆ. ಅಥಣಿಯಲ್ಲಿರುವ ಹಾಮುಲಾಲರ ಗದ್ದುಗೆ ಸ್ಥಳದ ಅಭಿವೃದ್ಧಿಗೆ ರೂ. 2.50 ಕೋ. ಅನುದಾನ ನೀಡಿದ್ದೇನೆ. ರಾಜ್ಯ ಮತ್ತು ಕೇಂದ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಿಜವಾದ ಅಚ್ಛೆದಿನ ಆರಂಭವಾಗಲಿವೆ ಎಂದು ಹೇಳಿದರು.

ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ನಮ್ಮ ಸಮಾಜದವರೇ ಶಾಸಕರಾಗಿದ್ದರೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಎಂ. ಬಿ. ಪಾಟೀಲರು ಲಂಬಾಣಿ ತಾಂಡಾಗಳಲ್ಲಿ ಮಾಡಿದ್ದಾರೆ. ನೀರಾವರಿ ಮಾತ್ರವಲ್ಲ, ರಸ್ತೆ, ಶಾಲೆ, ದೇವಸ್ಥಾನ ಹಾಗೂ ಸಮುದಾಯ ಭವನಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ವಿಜಯಪುರದಲ್ಲಿ ಹಾಮುಲಾಲ ದೇವಸ್ಥಾನ ನಿರ್ಮಾಣಕ್ಕೆ ರೂ.10 ಕೋ. ನಿವೇಶನ ನೀಡಿ ಮಂದಿರ ನಿರ್ಮಿಸಲು ರೂ. 3.50 ಕೋ. ಅನುದಾನ ನೀಡಿದ್ದಾರೆ. ಮೀಸಲಾತಿಯಲ್ಲಿ ಅನ್ಯಾಯ ಮಾಡಿರುವ ಬಿಜೆಪಿಗೆ ಯಾರೋಬ್ಬರೂ ಮತ ಹಾಕಬಾರದು. ಅವರು ಮಾಡಿರುವ ಅನ್ಯಾಯ ಕುರಿತು ಪ್ರತಿಯೊಬ್ಬರು ತಾಂಡಾ, ವಸ್ತಿ ಮತ್ತು ದೊಡ್ಡಿಗಳಿಗೆ ತೆರಳಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಎಂ. ಬಿ. ಪಾಟೀಲರು ಉನ್ನತ ಸ್ಥಾನಕ್ಕೆ ಏರಲಿದ್ದಾರೆ. ಎಲ್ಲರೂ ಶೇ. 100 ರಷ್ಟು ಮತದಾನ ಮಾಡುವ ಮೂಲಕ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ವಕ್ತಾರ ಸಂಗಮೇಶ ಬಬಲೇಶ್ವರ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಸದಾಶಿವ ಬುಟಾಳೆ, ಮಧುಕರ ಜಾಧವ, ಪ್ರಶಾಂತ ಝಂಡೆ, ಟಾಂಕು ಪೂಜಾರಿ, ಸಂಜು ಪವಾರ, ಮೇಘು ರಾಠೋಡ, ಸುರೇಶ ಪವಾರ, ಬಾಳು ರಾಠೋಡ, ರಘುನಾಥ ಚೌದರಿ, ಎಂ. ಎಸ್. ನಾಯಕ, ಅಶೋಕ ರಾಠೋಡ, ಕೃμÁ್ಣ ಜಾಧವ, ಶಿವಪ್ಪ ಚಲವಾದಿ, ವಿಠ್ಠಲ ಪೂಜಾರಿ, ಶಿವಾಜಿ ಲಮಾಣಿ, ಅಪ್ಪು ಸೂರ್ಯವಂಶಿ, ಉತ್ತಮ ಝಂಡೆ, ಲಕ್ಷ್ಮಣ ಚಾಪಲೂ ಪವಾರ, ಶಿವಾಜಿ ಧೊಂಡಿರಾಮ ಕಾರಬಾರಿ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ತಾಂಡಕ್ಕೆ ಆಗಮಿಸಿದ ಎಂ. ಬಿ. ಪಾಟೀಲ, ಪ್ರಕಾಶ ರಾಠೋಡ ಮುಂತಾದ ಮುಖಂಡರನ್ನು ತಾಂಡಾದ ಮಹಿಳೆಯರು ಹೃತ್ಪೂರ್ವಕವಾಗಿ ಸ್ವಾಗತಿಸಿ ಆಶೀರ್ವದಿಸಿದರು.

Leave a Reply

ಹೊಸ ಪೋಸ್ಟ್‌