ವಿಜಯಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಸ್ಕೌಟ್ಸ್ ಹಾಗೂ ಗೈಡ್ಸ್ ಸಹಯೋಗದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಈ ಸೈಕಲ್ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಈಗಾಗಲೇ ಹಲವಾರು ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಈಗ ಆಯೋಜಿಸಲಾದ ಸೈಕಲ್ ಜಾಥಾ ಜಿಲ್ಲೆಯ ನಾನಾ ತಾಲೂಕುಗಳಿಗೆ ಮತ್ತು ಗ್ರಾಮಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಸಿಲು ತಾಪಮಾನ ಹೆಚ್ಚಿಗಿದ್ದು, ಸೈಕಲ್ ಸವಾರರು ಮತದಾನ ಜಾಗೃತಿಯ ಜೊತೆಗೆ ತಮ್ಮ ಆರೋಗ್ಯದ ಕಡೆ ಗಮನವಿರಲಿ, ನೆರಳಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗಬೇಕು. ಜೊತೆಯಲ್ಲಿ ತಂಪು ಪಾನೀಯ, ನೀರು, ಹಣ್ಣು-ಹಂಪಲುಗಳಿರಲಿ ಏನಾದರೂ ಸಮಸ್ಯೆ ಉದ್ಭವಿಸಿದರೆ ತಕ್ಷಣವೇ ಗಮನಕ್ಕೆ ತರಬೇಕು ಎಂದು ಅವರು ಸೈಕಲ್ ಸವಾರರಿಗೆ ಹೇಳಿದರು.
ಈ ಸೈಕಲ್ ಜಾಥಾ ಬಸವನ ಬಾಗೇವಾಡಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಸಂಚರಿಸಿ, ಜಿಲ್ಲೆಯ 30ಕ್ಕೂ ಹೆಚ್ಚಿನ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿ, ಮೇ 5ಕ್ಕೆ ನಗರಕ್ಕೆ ಆಗಮಿಸಿ ಜಾಥಾ ಮುಕ್ತಾಯವಾಗಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತರಾದ ಶ್ರೀಮತಿ ವಿದ್ಯಾವತಿ ಅಂಕಲಗಿ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರಾದ ಎ.ಬಿ.ಅಲ್ಲಾಪುರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಸಂಘಟಕರಾದ ರಾಜಶೇಖರ ಖೇಡಗಿ ಸೇರಿದಂತೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಉಪಸ್ಥಿತರಿದ್ದರು.