ಎಂ. ಬಿ. ಪಾಟೀಲ ಪರ ಎಂಎಲ್ಸಿ ಸುನೀಲಗೌಡ ಪಾಟೀಲ ನಾನಾ ಕಡೆ ಬಿರುಸಿನ ಪ್ರಚಾರ

ವಿಜಯಪುರ: ಅಭಿವೃದ್ಧಿ ಕೆಲಸಗಳ ಮೂಲಕ ಎಂ. ಬಿ. ಪಾಟೀಲರು ಟೀಕಾಕಾರರಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ಇಂದು ಬಬಲೇಶ್ವರ ತಾಲೂಕಿನ ಹೊಕ್ಕುಂಡಿಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.

ಈ ಚುನಾವಣೆಯಲ್ಲಿ ಯುವಕರು ಮತ್ತು ಹಿರಿಯರ ಪಾತ್ರ ದೊಡ್ಡದಿದೆ. ತಾವೆಲ್ಲರೂ ಮನೆ ಮನೆಗೆ ತೆರಳಿ ಎಂ. ಬಿ. ಪಾಟೀಲರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಅರಿವು ಮೂಡಿಸಿ, ಮತದಾನ ಮುಗಿಯುವವರೆಗೂ ಕೆಲಸ ಮಾಡಬೇಕು ಎಂದು ಹೇಳಿದರು.

ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಜಲಕ್ರಾಂತಿ ಮಾಡಲು ಬಬಲೇಶ್ವರ ಮತಕ್ಷೇತ್ರದ ಮತದಾರ ಆಶೀರ್ವಾದ ಕಾರಣ. 1983ರಲ್ಲಿ ಶಂಕು ಸ್ಥಾಪನೆಯಾಗಿದ್ದ ಮುಳವಾಡ ಏತನೀರಾವರಿ ಯೋಜನೆಯನ್ನು ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿತ್ತು. ಏಳೆಂಟು ಸರಕಾರಗಳು ಮತ್ತು ಮುಖ್ಯಮಂತ್ರಿಗಳು ಬದಲಾದರೂ ಯೋಜನೆ ಟೇಕಾಫ್ ಆಗಿರಲಿಲ್ಲ. ಈ ಯೋಜನೆಯನ್ನು ನಾಲ್ಕೇ ವರ್ಷಗಳಲ್ಲಿ ಪೂರ್ಣಗೊಳಿಸಿ ಈ ಭಾಗಕ್ಕೆ ನೀರಾವರಿ ಮಾಡಿದ್ದಾರೆ. 40 ವರ್ಷಗಳಲ್ಲಿ ಆಗದ ಕೆಲಸಗಳನ್ನು ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅನೇಕ ಮಹನೀಯರು ಈ ಕಾರ್ಯ ಅಸಾಧ್ಯ ಎಂದು ವ್ಯಂಗ್ಯವಾಡಿದ್ದರು. ಅವರಿಗೆ ಕೆಲಸಗಳನ್ನು ಮಾಡಿ ತೋರಿಸುವ ಮೂಲಕ ಎಂ. ಬಿ. ಪಾಟೀಲರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಈಗ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹೊಲಗಾಲುವೆಗಳ ಮೂಲಕ ಪ್ರತಿಯೊಬ್ಬರ ಜಮೀನಿಗೆ ನೀರು ಹರಿಸಲು ಎಂ. ಬಿ. ಪಾಟೀಲರನ್ನು ಪುನರಾಯ್ಕೆ ಮಾಡಬೇಕಿದೆ ಎಂದು ಅವರು ಹೇಳಿದರು.

ಡಬಲ್ ಎಂಜಿನ್ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಜಾರಿ ಮಾಡಿದ್ದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯೋಜನೆಗಳನ್ನು ಬಂದ ಮಾಡಿವೆ. 40 ಪರ್ಸೆಂಟ್ ಭ್ರಷ್ಟಾಚಾರ ರಾಜ್ಯ ಸರಕಾರದ ದೊಡ್ಡ ಸಾಧನೆಯಾಗಿದೆ. ತಮ್ಮದೇ ಸರಕಾರದ ಶಾಸಕರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಿ ಜೈಲಿಗೆ ಕಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ ಎಂದು ಸುನೀಲಗೌಡ ಪಾಟೀಲ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಾಗರಾಜ ಕುಲಕರ್ಣಿ, ಪದಮೋಗಿ ಒಡೆಯರ, ಶಿರಸಪ್ಪ ಟಕ್ಕಳಕಿ, ವೈ.ಎನ್.ಪಾಟೀಲ, ಆರ್.ಬಿ.ಸೋನಾರ, ಮಲ್ಲಪ್ಪ ತಳವಾರ, ಪಿ.ಎಸ್.ಬಸರಗಿ, ಅಪ್ಪಣ್ಣ ಕುಲಕರ್ಣಿ, ಚನ್ನಪ್ಪ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌