ವಿಜಯಪುರ: ಬುದ್ಧನ ತತ್ವಾದರ್ಶಗಳು ಜಗತ್ತನ್ನೇ ಸೆಳೆದಿವೆ. ಬುದ್ಧ ಹೇಳಿಕೊಟ್ಟ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ಡಾ. ನಾರಾಯಣ ಬಿ. ಪವಾರ ಹೇಳಿದ್ದಾರೆ.
ತೊರವಿಯಲ್ಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಬುದ್ಧ ಪೂರ್ಣಿಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ನಾರಾಯಣ ಬಿ. ಪವಾರ, ಬುದ್ಧ ಜಗತ್ತಿಗೆ ಬೆಳಕು ನೀಡಿದ್ದಾರೆ. ಕರ್ನಾಟಕದ ಸಾಕಷ್ಟು ಪ್ರದೇಶಗಳಲ್ಲಿ ಹಾಗೂ ಪ್ರಪಂಚದ ನಾನಾ ದೇಶಗಳಲ್ಲಿ ಬೌದ್ಧ ಧರ್ಮ ಪ್ರಚಲಿತದಲ್ಲಿದೆ. ಬುದ್ಧನು ಬೋಧಿಸಿದ ಆರ್ಯ ತತ್ವಗಳು, ಪಂಚಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದು, ಅಳವಡಿಸಿಕೊಳ್ಳಲು ಅತ್ಯಂತ ಸೂಕ್ತವಾಗಿವೆ ಎಂದು ಹೇಳಿದರು.
ಜಗತ್ತಿಗೆ ಅಂತಃಕರಣ, ಪ್ರೀತಿ, ಮಾನವತೆಯನ್ನು ತೋರಿಸಿಕೊಟ್ಟಿದ್ದು ಬೌದ್ಧ ಧರ್ಮ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ, ಜೀವಂತವಾಗಿರುವಾಗಲೇ ಜಯಿಸುವಂತೆ ಮಾಡುವ, ಕಲುಷಿತವಾದ ಮನಸ್ಸುಗಳನ್ನು ಪವಿತ್ರವಾಗುವಂತೆ ಮಾಡುವ ಧರ್ಮ. ಈ ಧರ್ಮದ ತತ್ವಗಳು ಅತ್ಯಂತ ಪ್ರಾಯೋಗಿಕವಾಗಿವೆ. ಪರಿಶೀಲಿಸಿ, ಪರೀಕ್ಷಿಸಿ, ವಿವೇಚಿಸಿ ಮನಃ ಪರಿವರ್ತನೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು.
ವಿವಿಯ ಕುಲಸಚಿವ ಪ್ರೊ. ಬಿ. ಎಸ್. ನಾವಿ ಮಾತನಾಡಿ, ಮುಖದಲ್ಲಿಯೇ ಜ್ಞಾನವನ್ನು ಪ್ರತಿಫಲಿಸುವ ಮಹಾನ್ ತೇಜಸ್ವಿ ಗೌತಮ ಬುದ್ಧ ಹಾಕಿಕೊಟ್ಟ ಜೀವನ ಮಾರ್ಗಗಳನ್ನು ಅಳವಡಿಸಿಕೊಂಡು ವೈಯಕ್ತಿಕ ಜೀವನ ಶ್ರೇಷ್ಠಗೊಳಿಸುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಸಹಾಯಕಾರಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವೈ, ವಿವಿಯ ನಾನಾ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನೆ ವಿದ್ಯಾರ್ಥಿಗಳು, ಸ್ನಾತ್ತಕೊತ್ತರ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಶಾಂತಾದೇವಿ ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಪಿತಾ ಅತಿಥಿಗಳನ್ನು ಪರಿಚಯಿಸಿದರು. ತೇಜಸ್ವೀನಿ ಲಂಬು ನಿರೂಪಿಸಿದರು ಮತ್ತು ಕಾರ್ಯಕ್ರಮವನ್ನು ಅನುಷಾ ವಂದಿಸಿದರು.