ಮಾಡಿರುವ ಕೆಲಸಗಳ ಬಗ್ಗೆ ತೃಪ್ತಿಯಿದೆ- ಮತದಾರರ ಮೇಲೆ ನಂಬಿಕೆಯಿದೆ- ಗೆಲ್ಲುವ ವಿಶ್ವಾಸವಿದೆ- ಎಂ. ಬಿ. ಪಾಟೀಲ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಸಂತೃಪ್ತಿ ಇದೆ. ಮತದಾರರ ಮೇಲೆ ಪೂರ್ಣ ನಂಬಿಕೆ ಇದೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ಇಂದು ತಿಕೋಟಾದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು ಮತದಾರರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ನೀಡಿದರೆ ಇನ್ನೂ 10 ಪಟ್ಟು ಹೆಚ್ಚಾಗಿ ಕೆಲಸ ಮಾಡುತ್ತೇನೆ. ಈವರೆಗೆ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಹಕ್ಕಿನಿಂದ ಮತ ಕೇಳುತ್ತಿದ್ದೇನೆ. ನಂದನವನವಾಗಿರುವ ಮತಕ್ಷೇತ್ರವನ್ನು ಬಂಗಾರದ ಬಬಲೇಶ್ವರವನ್ನಾಗಿ ಮಾಡಲು ಹತ್ತಾರು ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಅವರು ಹೇಳಿದರು.

ತಿಕೋಟಾ ಹೋಬಳಿಗೆ ನೀರಾವರಿ ಮಾಡಲು ಅಂದಿನ ಸಿಎಂ ಮೇಲೆ ಒತ್ತಡ ಹಾಕಿದ್ದೆ. ತುಬಚಿ- ಬಬಲೇಶ್ವರ ಏತ ನೀರಾವರಿಗಾಗಿ ಒಂದೇ ಹೋಬಳಿಗೆ ರೂ. 3600 ಕೋ. ಹಣದ ಮಂಜೂರಾತಿ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳ ವಿರೋಧಕ್ಕೆ ಮನಿಯದೆ ಕೆಲಸ ಮಾಡಿದ್ದೇನೆ. ಈ ಯೋಜನೆ ಜಾರಿಗೆ ಅಡ್ಡಿ ಪಡಿಸಿದ್ದ ಅಧಿಕಾರಿಗಳು ಮತ್ತು ಇತರರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಖಡಕಾಗಿ ಎಚ್ಚರಿಕೆ ನೀಡಿ 6.80 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಈಗಿನ ಹಿರಿಯರು ಈ ಹಿಂದೆ ಎದುರಿಸುತ್ತಿದ್ದ ಕಷ್ಟದ ದಿನಗಳು ಈಗ ದೂರವಾಗಿದ್ದು, ಈ ಹಿರಿಯರ ಮಕ್ಕಳು ಮತ್ತು ಮೊಮ್ಮಕ್ಕಳು ಸುಖ ಮತ್ತು ಸಂತೋಷದಿಂದ ಬಾಳಲು ಶಾಸ್ವತ ಯೋಜನೆಗಳನ್ನು ರೂಪಿಸಿದ ಸಂತೃಪ್ತಿ ನನಗಿದೆ. ಇನ್ನುಳಿದಿರುವ ಬಾಕಿ ಕಾಮಗಾರಿಗಳನ್ನು ಅಧಿಕಾರಕ್ಕೆ ಬಂದ ಮೇಲೆ ಪೂರ್ಣಗೊಳಿಸುತ್ತೇವೆ ಎಂದು ಅವರು ಹೇಳಿದರು.

ತಿಕೋಟಾದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪ್ರಚಾರ ನಡೆಸಿದರು

ಬಿಜೆಪಿ ಡಬಲ್ ಎಂಜಿನ್ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಯೋಜನೆಗಳನ್ನು ಮಾಡಿಲ್ಲ. ಪ್ಯಾಕೇಜ್ ಪದ್ದತಿ ಮಾಡುವ ದುರಾಸೆಯಿಂದ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಬಗಲ ಕಾಲುವೆಗಳನ್ನು 40 ಪರ್ಸೆಂಟ್ ಕಮಿಷನ್ ಆಸೆಗಾಗಿ ನನೆಗುದಿಗೆ ಬೀಳುವಂತೆ ಮಾಡಿದೆ. ಅಷ್ಟೇ ಅಲ್ಲ, ರೈತರು, ಮಹಿಳೆಯರು ಮತ್ತು ಯುವಕರ ಕಲ್ಯಾಣಕ್ಕಾಗಿ ಈ ಹಿಂದೆ ಜಾರಿಯಲ್ಲಿದ್ದ ಯೋಜನೆಗಳನ್ನು ಕೈಬಿಟ್ಟಿದೆ. ಆದರೆ, ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ತಮ್ಮಣ್ಣ ಹಂಗರಗಿ, ರಾಮರಾವ ದೇಸಾಯಿ, ಲೇಪು ಕೊಣ್ಣೂರ, ಭಾಗೀರಥಿ ತೇಲಿ, ಪ್ರಭಾವತಿ ನಾಟಿಕಾರ, ಹಾಜಿಲಾಲ ಬಾಗವಾನ, ವಿಜಯಲಕ್ಷ್ಮಿ ಪರನಾಕರ, ಶ್ರೀಶೈಲ ತುಳಜಣ್ಣವರ, ಕಸ್ತೂರಿ ಹಂಜಗಿ, ಬಸಯ್ಯ ವಿಭೂತಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌