ವಿಜಯಪುರ: ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಿ ಅಭ್ಯರ್ಥಿಗಳ ಗೆಲುವಿಗೆ ಹಗಲು ರಾತ್ರಿ ಶ್ರಮಿಸಬೇಕು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರದ ಆದರ್ಶ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಮೀದ್ ಮುಶ್ರಿಫ್ ಪರ ಪಾದಯಾತ್ರೆ ಮೂಲಕ ಪ್ರಚಾರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸಾಧ್ಯವಾದಷ್ಟು ಮತದಾರರನ್ನು ಭೇಟಿ ಮಾಡಬೇಕು. ಮತದಾನ ಪ್ರಮಾಣ ಹೆಚ್ಚಾಗುವಂತೆ ಅರಿವು ಮೂಡಿಸಬೇಕು. ಅಲ್ಲದೇ, ಮತದಾರರಿಗೆ ಕಾಂಗ್ರೆಸ್ ಕೊಡುಗೆಗಳು, ರಾಜ್ಯ ಸರಕಾರ ವೈಫಲ್ಯಗಳು ಹಾಗೂ ಗ್ಯಾರಂಟಿ ಸ್ಕೀಂ ಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಆಶ್ರಮ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬರುವುದು ಖಚಿತ. ಹೀಗಾಗಿ ವಿಜಯಪುರ ನಗರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಹಮೀದ ಮುಶ್ರಿಫ್ ಮತ್ತು ನಾಗಠಾಣ (ಮೀ) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೋಂಡ ಅವರನ್ನು ಬಾರಿ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಬಲೇಶ್ವರ ಮತಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ. ಹೀಗಿರುವಾಗ ಪ್ರತಿಪಕ್ಷದಿಂದ ಯಾವ ನಾಯಕರು ಬಂದು ಪ್ರಚಾರ ಮಾಡಿದರೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಈ ಪಾದಯಾತ್ರೆಯಲ್ಲಿ ಹಮೀದ ಮುಶ್ರಿಫ್, ಎಸ್.ಎಂ.ಪಾಟೀಲ ಗಣಿಹಾರ, ಟಪಾಲ್ ಇಂಜನೀಯರ್, ಡಾ.ಗಂಗಾಧರ ಸಂಬಣ್ಣಿ, ಅಜಾದ ಪಟೇಲ, ವೈಜನಾಥ ಕರ್ಪೂರಮಠ, ಅಲ್ತಾಫ್ ಖಾದ್ರಿ, ಕೆ.ಎಪ್.ಅಂಕಲಗಿ, ವಿದ್ಯಾವತಿ ಅಂಕಲಗಿ, ಆರತಿ ಶಹಾಪುರ, ಡಾ.ರವಿ ಬಿರಾದಾರ, ಜಮೀರ ಭಕ್ಷಿ, ಸನ್ನಿ ಎಸ್. ಗವಿಮಠ, ಇದುಸ್ ಭಕ್ಷಿ, ಪಯಾಜ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು.