ವಿಜಯಪುರ: ಎಸ್. ಯು. ಸಿ. ಐ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಎಚ್. ಟಿ. ಅವರು ಚುನಾವಣೆ ಬಹಿರಂಗ ಸಭೆಯ ಕೊನೆಯ ದಿನ ನಗರದ ಪ್ರಮುಖ ರಸ್ತೆಗಳು ಮತ್ತು ಪ್ರಮುಖ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ವಿಜಯಪುರ ನಗರದ ಜಲನಗರ, ಕಿರ್ತಿನಗರ, ಶ್ರೀ ಸಿದ್ದೇಶ್ವರ ರಸ್ತೆ, ತೊರವಿ ರಸ್ತೆ, ಸ್ಟೇಷನ್ ರಸ್ತೆ, ಬಾಗಲಕೋಟ ರಸ್ತೆ, ಜುಮ್ಮಾ ಮಸೀದಿ ರಸ್ತೆಗಳಲ್ಲಿ ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ರೋಡ್ ಶೋ ಮಾಡಿದ ಅವರು ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ನಾನಾ ಕಡೆ ಕಾರ್ನರ್ ಮೀಟಿಂಗ್ ನಲ್ಲಿ ಮಾತನಾಡಿದ ಅವರು, ಹಣ, ಹೆಂಡ, ಜಾತಿ, ಧರ್ಮಗಳ ಮೇಲೆ ರಾಜಕೀಯ ಮಾಡುವುದು ಜನತೆಗೆ ಮತ್ತು ಮನುಷ್ಯತ್ವಕ್ಕೆ ಮಾಡುವ ಅಪಮಾನ. ರಾಷ್ಟ್ರೀಯ ಪಕ್ಷಗಳು ಎಂದು ಹೇಳುವ ಎಲ್ಲ ಬಂಡವಾಳಶಾಹಿ ಪಕ್ಷಗಳು ಇದೇ ಹೀನ ಕೆಲಸ ಮಡುತ್ತಿವೆ. ಹಣ ಹೆಂಡ ಹಂಚುವ ಮೂಲಕ ಜನರಲ್ಲಿನ ನೈತಿಕತೆಯನ್ನೂ ನಾಶಮಾಡುತ್ತಿವೆ. ಆದರೆ, ಜನತೆ ಇದ್ಯಾವುದಕ್ಕೂ ಬಲಿಬೀಳದೆ ಈ ಬಾರಿ ಯೋಗ್ಯ ಅಭ್ಯರ್ಥಿಯಾದ ತಮಗೆ ಮತ ನೀಡಿ ಗೆಲ್ಲಿಸಬೇಕು. ಪ್ರಾಮಾಣಿಕರು, ಸಮಾಜದ ಬಗ್ಗೆ ಕಾಳಜಿಇರುವ ವ್ಯಕ್ತಿಗಳು ಈ ಹೊಲಸು ರಾಜಕೀಯ ಕಂಡು ನಿರಾಶರಾಗದೇ ಪ್ರಾಮಾಣಿಕ ರಾಜಕೀಯವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಭಗತ್ ಸಿಂಗ್, ನೇತಾಜಿಯವರ ಹೋರಾಟದ ಹೆಜ್ಜೆಗಳೇ ನಮ್ಮ ಹೋರಾಟದ ದಾರಿಯಾಗಿದೆ. ನಿಜವಾದ ದೇಶ ಕಟ್ಟುವ ರಚನಾತ್ಮಕ ಆದರೆ ಸಂಧಾನಾತೀತವಾಗಿ ಹೋರಾಡುತ್ತಿರುವ ಎಸ. ಯು. ಸಿ. ಐ ಕಮ್ಯೂನಿಷ್ಟ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಅವರು ವಿನಂತಿ ಮಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಇವರಿಗೆ ಜನರ ಅಭಿವೃದ್ದಿಗಿಂತಲೂ ತಮ್ಮೊಡೆಯರಾದ ಬಂಡವಾಳಶಾಹಿಗಳ ಪ್ರಾಮಾಣಿಕ ಸೇವೆಕರು ಅಷ್ಟೇ. ಇಂಥವರಿಂದ ಅಭಿವೃದ್ದಿ ಎನ್ನುವುದು ಮರೀಚಿಕೆಯಷ್ಟೇ. ಇದುವರೆಗೂ ಆಯ್ಕೆಯಾದ ಯಾವೊಬ್ಬ ಶಾಸಕರು ಜಿಲ್ಲೆಯಲ್ಲಿ ಶ್ರಮಾಧಾರಿತ ಕೈಗಾರಿಕಗಳನ್ನು ಆರಂಭಿಸಲು ಹಾಗೂ ಸರಕಾರಿ ಎಂಜಿನೀಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ತೆರೆಯಲು ಪ್ರಯತ್ನಿಸಿಲ್ಲ. ಅಲ್ಲದೇ, ಉದ್ದೇಶಿತ ಸರಕಾರಿ ಆಸ್ಪತ್ರೆಯ ಖಾಸಗೀಕರಣದ ಬಗ್ಗೆ ತುಟಿ ಬಿಚ್ಚಿಲ್ಲ. ಇದಕ್ಕಾಗಿ ನಿರಂತರ ಹೋರಾಟ ಕಟ್ಟಿ ಬೆಳೆಸುತ್ತಿರುವ ತಮ್ಮನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಈ ರೋಡ್ ಶೋ ನಲ್ಲಿ ಎಸ್. ಯು. ಸಿ. ಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಮತ್ತು ರಾಜ್ಯ ಸೆಕ್ರೇಟರೀಯೇಟ್ ಸದಸ್ಯರಾದ ಡಾ. ಟಿ. ಎಸ್. ಸುನೀತ ಕುಮಾರ ಮತ್ತು ಕೆ. ಸೋಮಶೇಖರ, ಜಿಲ್ಲಾ ಸಮಿತಿಯ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ ಮತ್ತು ಎಚ್. ಟಿ. ಭರತಕುಮಾರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.