ವಿಜಯಪುರ: ಈ ಚುನಾವಣೆ ಹಿಂದುತ್ವ, ಅಭಿವೃದ್ಧಿ, ಸ್ವಾಭಿಮಾನದ ಮೇಲೆ ನಡೆಯುತ್ತಿದೆ. ಕನಿಷ್ಠ ಶೇ. 90 ರಷ್ಟು ಮತದಾನ ಮಾಡುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ರೋಡ್ ಶೋ ದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಹಿಂದುತ್ವ ಸೋಲಿಸಲು ಎಲ್ಲರೂ ಒಂದಾಗಿದ್ದಾರೆ. ಆದರೆ, ಯಾವ ಕಾರಣಕ್ಕೂ ಅವರ ಉದ್ದೇಶ ಈಡೇರಲು ಸಾಧ್ಯವಿಲ್ಲ. ನಮ್ಮವರು ಕೂಡ ಒಂದಾಗಿದ್ದಾರೆ ಎಂದು ಅವರು ತಿಳಿಸಿದರು.
ಐದು ವರ್ಷ ಅಧಿಕಾರ ಕೊಟ್ಟಿದ್ದೀರಿ. ಮಹಾಮಾರಿ ಕೊರೊನಾದಿಂದ ಎರಡು ವರ್ಷ ಅಭಿವೃದ್ದಿ ಕುಂಠಿತವಾದರೂ, ಉಳಿದ ಕೇವಲ ಮೂರು ವರ್ಷದಲ್ಲಿ ನಿರೀಕ್ಷೆ ಮೀರಿ ನಗರ ಅಭಿವೃದ್ದಿ ಮಾಡುವ ಮೂಲಕ ಇತಿಹಾಸ ಬದಲಿಸಿದ್ದೇನೆ. ಇದರಿಂದ ಕಾಂಗ್ರೆಸ್ಸಿಗೆ ಮತ ಹಾಕುವಂತೆ ಹೇಳುವವರಿಗೆ ಅವರ ಪತ್ನಿಯರೇ ಈವರೆಗೆ ರಾಮನ ಮೆರವಣಿಗೆ ಮಾಡಿ, ಈಗ ಆ ಪಕ್ಷಕ್ಕೆ ಮತ ಹಾಕುತ್ತೀರಾ ಎಂದು ಛಿಮಾರಿ ಹಾಕುತ್ತಿದ್ದಾರೆ. ಅಷ್ಟೊಂದು ಅಭಿಮಾನ ಮೂಡಿದೆ ಎಂದು ಅವರು ವ್ಯಂಗ್ಯವಾಡಿದರು.
ಹಣ ಪಡೆದುಕೊಳ್ಳುವವರು ಹುಷಾರ್ ಆಗಿರಿ. ಕಳೆದ ಬಾರಿ ಹಣ ಪಡೆದವರಿಂದ, ಸೋತ ಮೇಲೆ ಕೊಟ್ಟ ಹಣಕ್ಕಿಂತ ಹೆಚ್ಚಿಗೆ ವಸೂಲಿ ಮಾಡಲಾಗಿದೆ. ಈ ಬಾರಿ ಕೂಡ ಕಾಂಗ್ರೆಸ್ ಸೋಲು ಖಚಿತ. ಹೀಗಾಗಿ ಯಾರು ಕೂಡ ಹಣ ಪಡೆದುಕೊಳ್ಳಬಾರದು. ಈಗಾಗಲೇ ಕೆಲವರ ಒತ್ತಾಯದಿಂದ ಹಣ ಪಡೆದವರು ಸಹ, ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಬಿಜಾಪುರ ವಿಜಯಪುರ ಆಗಿದೆ. ಕೆಲವರ ಸ್ವಾರ್ಥಕ್ಕಾಗಿ ತಪ್ಪು ಮಾಡಿ ಮತ್ತೆ ಫಕೀರ ಬಸ್ತಿಯನ್ನಾಗಿ ಮಾಡುವುದು ಬೇಡ. 2047ಕ್ಕೆ ಇಸ್ಲಾಂ ದೇಶ ಮಾಡುವುದಾಗಿ ಪಿ ಎಫ್ ಐ ಹೇಳಿದೆ. ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದು ಬೇಡ. ಮೇ 10ಕ್ಕೆ ಕಮಲಕ್ಕೆ ಮತ ಒತ್ತಿ, ಜೈ ಭಜಂಗಬಲಿ ಎನ್ನುವ ಮೂಲಕ ಭಜರಂಗ ದಳ ನಿಷೇಧಿಸುವ ಹೇಳಿಕೆಗೆ ಉತ್ತರ ನೀಡಬೇಕು. ಈಗಾಗಲೇ ಡಿಕೆಸಿ ಹೆಲಿಕ್ಯಾಪ್ಟರ್ ಗೆ ಹದ್ದು ಡಿಕ್ಕಿ ಹೊಡೆದು ಮುನ್ಸೂಚನೆ ನೀಡಿದೆ ಎಂದು ಅವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುಣ್ಯದಿಂದ ಜೀವನ ಸಾಗಿಸುತ್ತಿರುವ ಯಾರೊಬ್ಬರೂ ಕಾಂಗ್ರೆಸ್ ಗೆ ಮತ ಹಾಕಬಾರದು. ಕಾರಣ ಅಂಬೇಡ್ಕರ್ ಅವರೇ ಕಾಂಗ್ರೆಸ್ ಗೆ ಮತ ಹಾಕಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹೇಳಿದ್ದಾರೆ. ಇದನ್ನು ತಲೆಯಲ್ಲಿಟ್ಟುಕೊಂಡು ಬಿಜೆಪಿಗೆ ಮತ ನೀಡಬೇಕು. ನಾನು ಯಾವುದೇ ಸಮಾಜದ ವಿರುದ್ಧ ತಪ್ಪಾಗಿ ಮಾತನಾಡಿಲ್ಲ. ಆದರೆ, ಕೆಲವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ವಿನಾಕಾರಣ ನನ್ನ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ. ಸತ್ಯ ಅರಿತಿರುವ ನಮ್ಮ ಜನರು ಅವರ ಮಾತಿಗೆ ಕಿವಿಗೊಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ನಾಡು ಕಂಡ ಶ್ರೇಷ್ಠ ಸಂತರಾಗಿದ್ದ ಜ್ಞಾನಯೋಗಾಶ್ರಮದ ಶ್ರೀಗಳು ನನ್ನ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿದ್ದರು. ಬಸನಗೌಡ್ರ ನಿಮ್ಮನ್ನು ನೋಡಿದರೆ ಬಹಳ ಖುಷಿ ಆಗುತ್ತದೆ. ನಿಮ್ಮಂಥವರು ಹೀಗೆ ಸತ್ಯ ಮಾತಾನಾಡಬೇಕು ಎಂದು ಹೇಳುತ್ತಿದ್ದರು. ಅದೇ ರೀತಿ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮುಲಾಜಿಲ್ಲದೆ ಮಾತನಾಡುವೆ. ಕೆಲವರು ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡುತ್ತಿದ್ದು, ಅವರನ್ನು ಶೀಘ್ರ ಪಕ್ಷದಿಂದ ಹೊರ ಹಾಕುತ್ತಾರೆ ಎನ್ನುತ್ತಿದ್ದರು. ಆದರೆ, ಪಕ್ಷ ನಾನು ತಪ್ಪು ಮಾಡಿಲ್ಲ ಅಂತ ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಿದೆ. ತಪ್ಪು ಮಾಡಿದ್ದರೇ ಪಕ್ಷದಿಂದ ಹೊರ ಹಾಕುತ್ತಿತ್ತು ಎಂದು ಅವರು ಹೇಳಿದರು.
ಒಂದಲ್ಲ ಒಂದು ದಿನ ನಂ.1 ಸ್ಥಾನದಲ್ಲಿ ಇರುತ್ತೇನೆ ಅಂತ ಹೇಳಿರುವೆ, ಆಗ ಪ್ರತಿಯೊಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೂ ಅವಕಾಶಗಳನ್ನು ಕಲ್ಪಿಸುವೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಶುರಾಮಸಿಂಗ ರಜಪೂತ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಜಶೇಖರ ಮಗಿಮಠ, ಎಂ. ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ವಿಠ್ಠಲ ಹೊಸಪೇಟ, ಮುಖಂಡರಾದ ದಯಾಸಾಗರ ಪಾಟೀಲ, ಜಗದೀಶ ಕ್ಷತ್ರಿ, ರಾಜೇಶ ದೇವಗಿರಿ, ಗೂಳಪ್ಪ ಶಟಗಾರ, ಬಸಯ್ಯ ಹಿರೇಮಠ, ಗುರುಪಾದಯ್ಯ ಗಚ್ಚಿನಮಠ, ಪ್ರಕಾಶ ಅಕ್ಕಲಕೋಟ, ವಿವೇಕ ಡಬ್ಬಿ, ಅಶೋಕ ತಿಮ್ಮಶೆಟ್ಟಿ, ರಜನಿ ಸಂಬಣ್ಣಿ, ಬಸವರಾಜ ಸೂಗೂರ, ಶಿಲ್ಪಾ ಕುದರಗೊಂಡ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ವ್ಯಾಪಾರಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.