ವಿಜಯಪುರ: ಮುಕ್ತ ನ್ಯಾಯ ಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಮೇ 10ರಂದು ಬುಧವಾರ ಮತದಾನ ಹಾಗೂ ಮೇ 13ರಂದು ಶನಿವಾರ ಮತ ಎಣಿಕೆ ನಡೆಯಲಿರುವ ನಗರದ ನಗರದ ಸೈನಿಕ ಶಾಲೆಯಲ್ಲಿ ಮತ ಏಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಆತ್ಮ ಸ್ಥೈರ್ಯ ತುಂಬಿದ ಜಿಲ್ಲಾಧಿಕಾರಿ
ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಬಬಲೇಶ್ವರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ,ಬಿಜಾಪೂರ ನಗರ ಹಾಗೂ ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೈನಿಕ ಶಾಲೆಯಲ್ಲಿ ಸ್ಥಾಪಿಸಿದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ, ಮಸ್ಟರಿಂಗ್ ಕಾರ್ಯದ ಸಮಗ್ರ ವಿವರವನ್ನು ಪಡೆದುಕೊಂಡ ಅವರು, ಈ ಸಂದರ್ಭದಲ್ಲಿ ಚುನಾವಣಾ ಸಾಮಗ್ರಿ ಸಿದ್ಧತಾ ಕೊಠಡಿಗಳಿಗೆ ಭೇಟಿ ನೀಡಿ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಮಾತನಾಡಿ, ಯಾವುದೇ ಆತಂಕವಿಲ್ಲದೆ, ಧೈರ್ಯದಿಂದ ಹಾಗೂ ಪಾರದರ್ಶಕತೆಯಿಂದ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸಿ, ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ನೈತಿಕ ಸ್ಥೈರ್ಯ ತುಂಬಿದರು.
ಜಿಲ್ಲೆಯಾದ್ಯಂತ ಸ್ಥಾಪಿಸಲಾದ 2078 ಮತಗಟ್ಟೆಗಳಿಗೆ ಮತಗಟ್ಟೆಗೊಬ್ಬರಂತೆ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ 1164, ದೇವರಹಿಪ್ಪರಗಿ ಕ್ಷೇತ್ರಕ್ಕೆ 1192, ಬಸವನಬಾಗೇವಾಡಿ ಮತಕ್ಷೇತ್ರಕ್ಕೆ 1114, ಬಬಲೇಶ್ವರ ಮತಕ್ಷೇತ್ರಕ್ಕೆ 1158, ಬಿಜಾಪುರ ನಗರ ಮತಕ್ಷೇತ್ರಕ್ಕೆ 1304, ನಾಗಠಾಣ ಮತಕ್ಷೇತ್ರಕ್ಕೆ 1399, ಇಂಡಿ ಮತಕ್ಷೇತ್ರಕ್ಕೆ 1270 ಹಾಗೂ ಸಿಂದಗಿ ಮತಕ್ಷೇತ್ರಕ್ಕೆ 1283 ಸೇರಿದಂತೆ ಒಟ್ಟು 9884 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 20% ಪ್ರತಿಶತ ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿದೆ.
ಮುದ್ದೇಬಿಹಾಳ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎಂಜಿವಿಸಿ ಕಾಲೇಜ್‍ನಲ್ಲಿ, ದೇವರಹಿಪ್ಪರಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎ.ಬಿ.ಸಾಲಕ್ಕಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ, ಬಸವನಬಾಗೇವಾಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್‍ನಲ್ಲಿ, ಬಬಲೇಶ್ವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಸರ್ಕಾರಿ ಐಟಿಐ ಕಾಲೇಜ್‍ನಲ್ಲಿ, ಬಿಜಾಪುರ ನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೈನಿಕ್ ಶಾಲೆಯಲ್ಲಿ, ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಜಯಪುರ ಸೈನಿಕ ಶಾಲೆಯಲ್ಲಿ, ಇಂಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿ ಆದರ್ಶ ವಿದ್ಯಾಲಯದಲ್ಲಿ ಹಾಗೂ ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಆರ್.ಡಿ.ಪಾಟೀಲ ಹಾಗೂ ಜಿ.ಪಿ.ಪೋರವಾಲ ಕಾಲೇಜ್‍ನಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಹಂತದಲ್ಲಿ ಭದ್ರತಾ ಕೊಠಡಿ ಹಾಗೂ ಈ ಎಲ್ಲ ಕ್ಷೇತ್ರಗಳ ಮತ ಏಣಿಕೆಯು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದೆ.