ವಿಜಯಪುರ: ಮತದಾನದ ಬಳಿಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಮತದಾನದ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮತದಾನದ ಪ್ರಮಾಣ ಮತ್ತು ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಇತ್ತ ಅವರ ಪತ್ನಿ ಆಶಾ ಎಂ. ಪಾಟೀಲ ಅವರು, ಮತದಾನದ ಬಳಿಕ ಕುಟುಂಬ ಸದಸ್ಯರ ಕಾಳಜಿಯಲ್ಲಿ ತೊಡಗಿದ್ದಾರೆ. ಇಷ್ಟು ದಿನ ಪತಿಯ ಪರ ಗ್ರಾಮ ಗ್ರಾಮಗಳಿಗೆ ತೆರಳಿ ಪ್ರಚಾರ ಕೈಗೊಂಡ ಅವರು ಈಗ ಮತದಾನದ ಲೆಕ್ಕಾಚಾರವನ್ನು ಪತಿಗೆ ಬಿಟ್ಟು ಅಡುಗೆ ಮನೆಯಲ್ಲಿ ಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ. ಮನೆಯಲ್ಲಿ ಪಾಕತಜ್ಞರಿದ್ದರೂ ಕುಟುಂಬ ಸದಸ್ಯರಿಗಾಗಿ ಖುದ್ದಾಗಿ ಅಡುಗೆ ಮಾಡಿ ಉಣಬಡಿಸುವ ಅವರು ಇಂದು ಮತ್ತೆ ತಮ್ಮ ಅಡುಗೆ ಕೈರುಚಿ ತೋರಿಸಲು ಮಗ್ನರಾಗಿದ್ದಾರೆ.
ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ದಂಪತಿಯ ಪುತ್ರರಾದ ಬಸನಗೌಡ(ರಾಹುಲ) ಮತ್ತು ಧ್ರುವ ಅವರೂ ಕೂಡ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಪಾಕಪ್ರವೀಣೆಯೂ ಆಗಿರುವ ಅವರು ಕುಟುಂಬ ಸದಸ್ಯರಿಗೆ ಇಷ್ಟವಾದ ಅಡುಗೆಯನ್ನು ತಯಾರಿಸಿ ಉಣಬಡಿಸಿದರು. ಜೊತೆಗೆ ಮನೆಗೆ ಬಂದಿರುವ ಅತಿಥಿಗಳಿಗೂ ಅವರು ರುಚಿಕಟ್ಟಾದ ಅಡುಗೆ ತಯಾರಿಸಿ ಊಟ ಮಾಡಿಸಿರುವುದೂ ಕೂಡ ಗಮನಾರ್ಹವಾಗಿದೆ.
ಸಾಮಾಜಿಕ ಕೆಲಸಗಳ ಜೊತೆ ಕುಟುಂಬದ ಬಗ್ಗೆಯೂ ಅಪಾರ ಕಾಳಜಿ ಹೊಂದಿರುವ ಆಶಾ ಎಂ. ಪಾಟೀಲ, ಪ್ರತಿಯೊಂದು ಆಗು- ಹೋಗುಗಳ ಬಗ್ಗೆ ಗಮನ ವಹಿಸುತ್ತಾರೆ. ಈ ಮೂಲಕ ಮನೆಯ ಎಲ್ಲ ಸದಸ್ಯರಿಗೂ ಸ್ಪೂರ್ತಿಯಾಗಿ ನಿಲ್ಲುತ್ತಿದ್ದಾರೆ. ಇದರಿಂದಾಗಿ ಎಂ. ಬಿ. ಪಾಟೀಲರು ಕುಟುಂಬದ ಬಗ್ಗೆ ನಿಶ್ಚಿಂತೆಯಿಂದ ಹೆಚ್ಚಾಗಿ ಸಮಾಜ ಸೇವೆ ಕೈಗೊಳ್ಳಲು ಸಾಧ್ಯವಾಗಿದೆ.