ಈ ಬಾರಿ ಮೋದಿ ಮೋಡಿ ನಡೆಯುವುದಿಲ್ಲ- ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ- ಎಂ. ಬಿ.

ವಿಜಯಪುರ: ಚುನಾವಣೆ ಮತದಾನದ ಬಳಿಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಸ್ವಲ್ಪ ರಿಲ್ಯಾಕ್ಸಗ ಮೂಡ್ ನಲ್ಲಿದ್ದು, ಅವರ ಪತ್ನಿ ಆಶಾ ಎಂ. ಪಾಟೀಲ ಮನೆಯಲ್ಲಿ ಕುಟುಂಬ ಸದಸ್ಯರಿಗಾಗಿ ಅಡುಗೆ ತಯಾರಿಸಿದರು.

ಬಿ.ಎಂ.ಪಾಟೀಲ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕಾರ್ಯಕರ್ತರಿಂದ ಮತದಾನದ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೇ ಗೆಲುವಿನ ಅಂತರದ ಲೆಕ್ಕಾಚಾರ ನಡೆಸಿದರು. ಆಗಮಿಸಿದ ಬಬಲೇಶ್ವರ ಮತಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರಿಂದ ಮತದಾನ ಮತ್ತು ಕಾಂಗ್ರೆಸ್ ಪರವಾಗಿ ಮತದಾರರಿಂದ ವ್ಯಕ್ತವಾದ ಪ್ರತಿಕ್ರಿಯೆ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ. ಬಿ. ಪಾಟೀಲರು, ನಿನ್ನೆ ರಾತ್ರಿ ತಡವಾಗಿ ಮಲಗಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಹಗಲು ರಾತ್ರಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಯೊಂದು ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರು ಖುದ್ದಾಗಿ ಬಂದು ಮತ್ತು ಮೊಬೈಲ್ ಕರೆ ಮಾಡಿ ಮತದಾನದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈವರೆಗೆ ಸಿಕ್ಕಿರುವ ಮಾಹಿತಿಯಂತೆ ಒಳ್ಳೆಯ ಲೀಡ್ ಸಿಗಲಿದೆ. ಈ ಸಲವೂ ದೊಡ್ಡ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಚುನಾವಣೆ ಮತದಾನದ ಮಾಹಿತಿ ಪಡೆದ ಕೆಪಿಸಿಸಿ ಪ್ರಚಾರ ಸಮಿತಿಿ ಅಧ್ಯಕ್ಷ ಎಂ. ಬಿ. ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 120 ರಿಂದ 140 ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಕುರಿತು ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಅವರು ಸಹ ಈ ಮುಂಚೆಯೇ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳಿದ್ದಾರೆ. ಮತಕ್ಷೇತ್ರದ ಜನರು ಕೂಡ ಆಶೀರ್ವಾದ ಮಾಡಿದ್ದಾರೆ. ಜಿಲ್ಲೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಬಾರಿ ಪ್ರಧಾನಿ ಮೋದಿ ಅವರ ಮೋಡಿ ನಡೆದಿಲ್ಲ. ಜನತೆ 40 ಪರ್ಸೆಂಟ್ ಭ್ರಷ್ಟಾಚಾರದ ಸರಕಾರದಿಂದ ಬೇಸತ್ತಿದ್ದಾರೆ. ಜನವಿರೋಧಿ ನೀತಿಗಳಿಂದ ರೋಸಿ ಹೋಗಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಡಬಲ್ ಎಂಜಿನ್ ಸರಕಾರದ ದುರಾಡಳಿತದಿಂದ ಮತ್ತು ಕಾಂಗ್ರೆಸ್ಸಿನ ಜನಪರ ಹಳೆಯ ಯೋಜನೆಗಳು ಹಾಗೂ ಗ್ಯಾರಂಟಿ ಸ್ಕೀಂ ಗಳ ಪರ ಮನಸೋತು ಕಾಂಗ್ರೆಸ್ಸಿಗೆ ಹೆಚ್ಚಿನ ಮತ ನೀಡಿದ್ದಾರೆ. ಮೇ 13 ರಂದು ಇದು ಫಲಿತಾಂಶದ ರೂಪದಲ್ಲಿ ಬಹಿರಂಗವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಸಾರವಾಗುವ ಮುಂಚೆಯಿಂದಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಕುರಿತು ನಾವು ಸಾರ್ವಜನಿಕವಾಗಿ ತಿಳಿಸಿದ್ದೇವೆ. ಇದು ಫಲಿತಾಂಶದ ನಂತರ ನಿಜವಾಗಲಿದೆ ಎಂದು ಅವರು ತಿಳಿಸಿದರು.

ಚುನಾವಣೆ ಬಳಿಕ ಕಾಂಗ್ರೆಸ್ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು, ಹೈಕಮಾಂಡಿಗೆ ವರದಿ ನೀಡಲಿದ್ದಾರೆ. ಆ ನಂತರ ಕಾಂಗ್ರೆಸ್ ಸರಕಾರ ಅಧಿಕಾರ ಸ್ವೀಕರಿಸಲಿದೆ ಎಂದು ತಿಳಿಸಿದ ಎಂ. ಬಿ. ಪಾಟೀಲ ಅವರು ಈ ಚುನಾವಣೆಯಲ್ಲಿ ಮತದಾನ ಮಾಡಿದ ಎಲ್ಲ ಮತದಾರರು, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌