ವಿಜಯಪುರ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 10ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಮತದಾನ ನಡೆದಿದ್ದು, ಮೇ 13 ರ ಮತ ಎಣಿಕೆ ನಡೆಯಲಿದ್ದು, ಸುಗಮವಾಗಿ ಮತ ಎಣಿಕೆ ಕಾರ್ಯ ನಡೆಸುವಂತೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ, ದಾನಮ್ಮನವರ ಅವರು ಸೂಚನಾ ನೀಡಿದರು.
ನಗರದ ಸೈನಿಕ ಶಾಲೆಯ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆಗೆ ನಿಯೋಜಿಸಿರುವ ಅಧಿಕಾರಿಸ ಸಿಬ್ಬಂದಿಗಳಿಗೆ ಆಯೋಜಿಸಿದ 2ನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ, ದಾನಮ್ಮನವರ ಮಾತನಾಡಿಸ ಮೇ 13ರಂದು ನಡೆಯುವ ಮತ ಎಣಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ ಚುನಾವಣೆ ಆಯೋಗದ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು, ಯಾವುದೇ ಸಮಸ್ಯೆಗಳು ಬಂದಲ್ಲಿ ತಕ್ಷಣ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಮತ ಎಣಿಕೆ ಕಾರ್ಯ ನಿರ್ವಹಿಸಲು ತಮಗೆ ತಿಳಿಯದ ವಿಷಯಗಳ ಕುರಿತು ತರಬೇತಿಯಲ್ಲಿ ಮಾಹಿತಿ ಪಡೆದು ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ ತರಬೇತಿ ನೀಡಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲೆಯ ಎಂಟೂ ವಿಧಾನಸಭೆ ಮತಕ್ಷೇತ್ರದ ನಿರ್ವಾಚಣಾಧಿಕಾರಿ ಹಾಗೂ ಸಹಾಯಕ ನಿರ್ವಾಚಣಾಧಿಕಾರಿಗಳು ಉಪಸ್ಥಿತರಿದ್ದರು.
ಮತ ಎಣಿಕೆ ಸಿದ್ಧತೆ ಕುರಿತು ಪರಿಶೀಲನೆ
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೇ 13 ರಂದು ನಗರದ ಸೈನಿಕ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಸಿದ್ಧತೆ ಕುರಿತು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ, ದಾನಮ್ಮನವರ ಅವರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 26-ಮುದ್ದೇಬಿಹಾಳ ಹಾಗೂ 27-ದೇವರಹಿಪ್ಪರಗಿ ಮತಕ್ಷೇತ್ರದ ಮತ ಎಣಿಕೆ ಕಾರ್ಯ ಒಡೆಯರ ಸದನ, 28-ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಮತಕ್ಷೇತ್ರದ ಮತ ಎಣಿಕೆ ಕಾರ್ಯ ಆದಿಲ್‍ಶಾಹಿ ಸದನ, 30-ಬಿಜಾಪುರ ನಗರ ಹಾಗೂ 31-ನಾಗಠಾಣ ಮತಕ್ಷೇತ್ರದ ಮತ ಎಣಿಕೆ ಕಾರ್ಯ ಹೊಯ್ಸಳ ಸದನ ಹಾಗೂ 32-ಇಂಡಿ ಮತ್ತು 33-ಸಿಂದಗಿ ಮತಕ್ಷೇತ್ರದ ಮತ ಎಣಿಕೆ ಕಾರ್ಯ ವಿಜಯ ನಗರ ಸದನದಲ್ಲಿ ನಡೆಯಲಿದೆ ಎಂದು ಹೇಳಿದರು.
ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳ ಮತ ಏಣಿಕೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭೆ ಮತಕ್ಷೇತ್ರಕ್ಕೆ 14 ಟೇಬಲ್‍ಗಳ ವ್ಯವಸ್ಥೆ ಹಾಗೂ 4 ಟೇಬಲ್‍ಗಳಲ್ಲಿ ಅಂಚೆ ಮತಪತ್ರದ ಎಣಿಕೆ ಮತ್ತು ಸೇವಾ ಮತದಾರರ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಯಲಿದೆ. ಬಸವನ ಬಾಗೇವಾಡಿ ಮತಕ್ಷೇತ್ರದ 17 ಸುತ್ತುಗಳು, ಮುದ್ದೇಬಿಹಾಳ, ದೇವರ ಹಿಪ್ಪರಗಿ ಹಾಗೂ ಬಬಲೇಶ್ವರ ಮತಕ್ಷೇತ್ರದ 18 ಸುತ್ತುಗಳು ಹಾಗೂ ಬಿಜಾಪುರ ನಗರ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ 20 ಸುತ್ತುಗಳು ಹಾಗೂ ನಾಗಠಾಣ ಮತಕ್ಷೇತ್ರದ 22 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದ್ದು, ಸುಗಮವಾಗಿ ಮತ ಎಣಿಕೆ ಕಾರ್ಯ ನಡೆಸಲು ಅಗತ್ಯ ಟೇಬಲ್‍ಗಳ ವ್ಯವಸ್ಥೆ, ಸಿಸಿಟಿವಿ, ಅಧಿಕಾರಿ-ಸಿಬ್ಬಂದಿಗಳು ನಿಯೋಜನೆ, ಪೋಲಿಸ್ ಬಂದೋಬಸ್ತ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪೊಲೀಸ್ ಬಂದೋಬಸ್ತ್
ಈ ಸಂದರ್ಭದಲ್ಲಿ ಜಿಲ್ಲಾ ಎಸ್ಪಿ ಎಚ್. ಡಿ. ಆನಂದಕುಮಾರ ಅವರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದ ಅವರು, ಮತ ಎಣಿಕೆ ಕಾರ್ಯದ ಸಂದರ್ಭದಲ್ಲಿ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು 5 ಜನ ಡಿವೈಎಸ್‍ಪಿ, 8 ಇನ್ಸ್‍ಪೆಕ್ಟರ್, 22 ಪಿಎಸ್‍ಐ, 34 ಎಎಸ್‍ಐ, 272 ಪೋಲಿಸ್ ಸಿಬ್ಬಂದಿ, 60 ಜನ ಮಹಿಳಾ ಪೋಲಿಸ್, 200ಜನ ಹೋಂಗಾರ್ಡ್, 8 ಕೆಎಸ್‍ಆರ್‍ಪಿ ತುಕಡಿ, 4 ಡಿಎಆರ್ ತುಕಡಿ, 60 ಜನ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಮಾಧ್ಯಮ ಕೇಂದ್ರಕ್ಕೆ ಭೇಟಿ
ನಗರದ ಸೈನಿಕ ಶಾಲೆಯಲ್ಲಿ ಸ್ಥಾಪಿಸಲಾದ ಮಾಧ್ಯಮ ಕೇಂದ್ರಕ್ಕೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಭೇಟಿ ನೀಡಿ ಮಾಧ್ಯಮ ಕೇಂದ್ರದಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿ ಎಣಿಕೆ ಕಾರ್ಯ ಮಾಹಿತಿ ಮಾಧ್ಯಮದವರಿಗೆ ಸಕಾಲದಲ್ಲಿ, ಶೀಘ್ರವಾಗಿ ತಲುಪಿಸಲು ಕೈಗೊಂಡಿರುವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಮಲಜಿ ಉಪಸ್ಥಿತರಿದ್ದರು.
ಮತ ಎಣಿಕೆ ವೀಕ್ಷಕರು
ಮತ ಎಣಿಕೆ ವೀಕ್ಷಕರಾಗಿ 26-ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಚಂದ್ರಶೇಖರ ಸಖಮೂರಿ, 27-ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಸುಖವೀರ ಸೈನಿ, 28-ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಪ್ರಕಾಶ ಬಿಂದು, 29-ಬಬಲೇಶ್ವರ ಮತಕ್ಷೇತ್ರಕ್ಕೆ ಶ್ರೀಮತಿ ಫಾರೂಗ್ ಆಖ್ತರ್, 30-ಬಿಜಾಪುರ ನಗರ ಮತಕ್ಷೇತ್ರಕ್ಕೆ ಉದಿತ್ ಪ್ರಕಾಶ ರೈ, 31-ನಾಗಠಾಣ ಮತಕ್ಷೇತ್ರಕ್ಕೆ ನವೀನಕುಮಾರ ಅಹೂಜಾ, 32-ಇಂಡಿ ಮತಕ್ಷೇತ್ರಕ್ಕೆ ರಿಷಿರೇಂದ್ರ ಕುಮಾರ ಹಾಗೂ 33-ಸಿಂದಗಿ ಮತಕ್ಷೇತ್ರಕ್ಕೆ ಎ.ಕುಮಾರ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.