ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆ ಮತ್ತು ರಾಜ್ಯಾದ್ಯಂತ ಕಾಂಗ್ರೆಸ್ ಭರ್ಜರಿ ಜಯಗಳಿಸಿರುವುದಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ಬಿಜೆಪಿಯವರ ವರ್ತನೆಯಿಂದ ಬೇಸತ್ತ ಭಜರಂಗಿ ಹನುಮಂತ ಈ ಬಾರಿ ಶನಿವಾರದ ದಿನವೇ ಕಾಂಗ್ರೆಸ್ಸಿಗೆ ಭರ್ಜರಿ ಆಶೀರ್ವಾದ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾಧ್ಯ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಮತಕ್ಷೇತ್ರದ ಜನತೆಯ ಆಶೀರ್ವಾದ, ತಾಯಂದಿರು, ಹಿರಿಯರು, ಸಹೋದರ, ಸಹೋದರಿಯರ ಆಶೀರ್ವಾದದಿಂದ ಆರನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ರಾಜ್ಯದ ಜನತೆ ಕಾಂಗ್ರೆಸ್ಸಿಗೆ ಅಭೂತಪೂರ್ವ ಬಹುಮತ ನೀಡಿರುವುದಕ್ಕೆ ಮತ್ತು ಸುಭದ್ರ ಸರಕಾರ ರಚನೆಗೆ ಆಶೀರ್ವದಿಸಿರುವುದಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಘನತೆ, ಗೌರವ ಮಣ್ಣು ಪಾಲಾಗಿತ್ತು. ನಮ್ಮ ಹಿರಿಯರಾದ ಕೆ. ಸಿ. ರೆಡ್ಡಿ, ಕೆಂಗಲ ಹನುಮಂತಯ್ಯ, ಬಿ. ಡಿ. ಜತ್ತಿ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಎಸ್. ಆರ್. ಕಂಠಿ, ದೇವರಾಜ ಅರಸು, ಎಸ್. ಎಂ. ಕೃಷ್ಣ, ರಾಮಕೃಷ್ಣ ಹೆಗಡೆ, ಜೆ. ಎಚ್. ಪಟೇಲ ಮತ್ತು ಸಿದ್ಧರಾಮಯ್ಯ ರಾಜ್ಯದ ಘನತೆ ಗೌರವವನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದರು. ಆದರೆ, ಬಿಜೆಪಿ ಅಭಿವೃದ್ಧಿ ನಿರ್ಲಕ್ಷಿಸಿ, 40 ಪರ್ಸೆಂಟ್ ಭ್ರಷ್ಟಾಚಾರ ನಡೆಸಿ, ಜನರ ಭಾವನೆಗಳನ್ನು ಕೆರಳಿಸುವ ಮೂಲಕ ದುರಾಡಳಿತ ನಡೆಸಿದ್ದು ಎಂದು ಅವರು ತಿಳಿಸಿದರು.
ಪ್ರಧಾನಿಯನ್ನು ಕರೆದುಕೊಂಡು ಬಂದು ಜೈ ಭಜರಂಗಿ ಎಂದು ಘೋಷಣೆ ಹಾಕಿಸುವ ಮಟ್ಟಕ್ಕೆ ಬಿಜೆಪಿಯವರು ಹೋಗಿದ್ದರು. ಆದರೆ, ಇಂದು ಶನಿವಾರ ಹನುಮಾನ ದೇವರ ಇವರ ಅಪಪ್ರಚಾರದಿಂದ ಬೇಸತ್ತು ಇವರನ್ನು ತಿರಸ್ಕಾರ ಮಾಡಿದ್ದಾರೆ. ನನ್ನ ಹೆಸರು ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ಕಾಂಗ್ರೆಸ್ಸಿಗೆ ಆಶೀರ್ವದಿಸುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಿದ್ದಾನೆ ಎಂದು ಅವರು ತಿಳಿಸಿದರು.
ನಾವು ತಂಡಗಳನ್ನು ರಚಿಸಿಕೊಂಡು ಸಂಘಟಿತರಾಗಿ ಪಕ್ಷವನ್ನು ಸಂಘಟಿಸಿದ್ದೇವೆ. ರಂದೀಪಸಿಂಗ್ ಸುರ್ಜೆವಾಲಾ, ಡಿ ಕೆ. ಶಿವಕುಮಾರ, ಎಸ್. ಸಿದ್ಧರಾಮಯ್ಯ ತಂಡವಾಗಿ ಕೆಲಸ ಮಾಡಿದ್ದೇವೆ. ಡಿ. ಕೆ. ಶಿವಕುಮಾರ ಸಂಘಟನೆಯಲ್ಲಿ ಚತುರರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅನುಭವ, ಸಿದ್ಧರಾಮಯ್ಯ ಅವರ ಮಾರ್ಗದರ್ಶನ, ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರ ಮಾರ್ಗದರ್ಶನದಲ್ಲಿ ನಡೆಸಿದ ಯಾತ್ರೆ, ಜನರನ್ನು ಜೋಡಿಸುವ ಒಡೆದ ಮತಗಳನ್ನು ಕೂಡಿಸುವ ಕೆಲಸ ಮಾಡಿದರು. ಇದೆಲ್ಲದರ ಪರಿಣಾಮ ಅಭೂತಪೂರ್ವ ಬೆಂಬಲ ಕಾಂಗ್ರೆಸ್ಸಿಗೆ ಸಿಕ್ಕಿದೆ. ಮೋದಿ ಅವರ ಮೋಡಿ ಈ ಬಾರಿ ನಡೆದಿಲ್ಲ. ಬೆಲೆಯೇರಿಕೆ, ದುರಾಡಳಿತದಿಂದಾಗಿ ಮೋದಿಯವರ ವರ್ಚಸ್ಸು ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಬಬಲೇಶ್ವರ ಮತಕ್ಷೇತ್ರಕ್ಕೆ ನೀರಾವರಿ ಮಾಡಿದ್ದು ಜನರ ಮನಸ್ಸನ್ನು ಗೆದ್ದಿದೆ. ಇನ್ನೂ ಬಾಕಿ ಇರುವ ಕೆಲಸಗಳನ್ನು ಮಾಡಲು ಈ ಗೆಲವು ಪ್ರೋತ್ಸಾಹ ನೀಡಿದೆ. ನಮ್ಮ ಪಕ್ಷದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಅಲ್ಲಿ ಶಾಸಕರ ಅಭಿಪ್ರಾಯವನ್ನು ವಿಕ್ಷಕರು ಸಂಗ್ರಹಿಸಿ ಅದನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರಿಗೆ ಸಲ್ಲಿಸಿದ ನಂತರ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಆರು ಜನ ಶಾಸಕರು ಆಯ್ಕೆಯಾಗಿರುವುದು ಸಂತಸ ತಂದಿದೆ. ಆದರೆ, ವಿಜಯಪುರ ನಗರ ಮತಕ್ಷೇತ್ರದ ಅಭ್ಯರ್ಥಿ ಹಮೀದ ಮುಶ್ರಿಫ್ ಸೋತಿರುವುದು ದುಃಖ ತಂದಿದೆ. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಸೋತಿರುವುದು ಬೇಸರ ತಂದಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರನಗೌಡ ಬಿರಾದಾರ, ಮುಖಂಡರಾದ ಸಂಗಮೇಶ ಬಬಲೇಶ್ವರ, ಅರ್ಜುನ ರಾಠೋಡ ಮುಂತಾದವರು ಉಪಸ್ಥಿತರಿದ್ದರು.