ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆದ್ದಿದ್ದಾರೆ- ಶಿವಾನಂದ ಪಾಟೀಲರಿಗೆ ಡಿಸಿಎಂ ಆಗುವ ಅರ್ಹತೆ ಇದೆ- ಸಂಯುಕ್ತಾ ಪಾಟೀಲ

ವಿಜಯಪುರ: ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಪುನರಾಯ್ಕೆಯಾಗಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಾರಣ.  ಈ ಗೆಲವು ಕೇವಲ ಕಾಂಗ್ರೆಸ್ ಪಕ್ಷದ ಜಯವಲ್ಲ.  ಶಿವಾನಂದ ಪಾಟೀಲ ಅವರ ಜಯವಲ್ಲ.  ಇದು ಸಮಸ್ತ ಕಾಂಗ್ರೆಸ್ ಕಾರ್ಯಕರ್ತರ ಗೆಲುವು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಮತ್ತು ಶಾಸಕ ಶಿವಾನಂದ ಪಾಟೀಲ ಅವರ ಜೇಷ್ಠ ಪುತ್ರಿ ಸಂಯುಕ್ತಾ ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಮಾಡಿರುವ ಶ್ರಮದ ಫಲವಾಗಿ ಶಿವಾನಂದ ಪಾಟೀಲ ಅವರು ಮರುಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಶಿವಾನಂದ ಪಾಟೀಲ ಅವರು ಅಭಿವೃದ್ಧಿ ವಿಷಯಗಳನ್ನು ಮೂಲಮಂತ್ರವಾಗಿ ಇಟ್ಟುಕೊಂಡು ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ ಮತದಾರರು ಅಭಿವೃದ್ಧಿಗೆ ಮತ್ತೊಮ್ಮೆ ಬೆಂಬಲ ನೀಡಿದ್ದಾರೆ.  ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಹೀಗೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಮಸಬಿನಾಳ ಗ್ರಾಮದಲ್ಲಿ ಹೆಚ್ಚುವರಿ ಇವಿಎಂ ಮಶೀನ್ ಗಳನ್ನು ಧ್ವಂಸಗೊಳಿಸಿದ ಪ್ರಕಣ

ಇದೇ ವೇಳೆ, ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಮೇ 19 ರಂದು ಮತದಾನದ ದಿನ ಹೆಚ್ಚುವರಿ ಇವಿಎಂ ತೆಗೆದುಕೊಂಡು ಹೋಗುತ್ತಿದ್ದ ಸರಕಾರಿ ವಾಹನ ಅಡ್ಡಗಟ್ಟಿ ಅದನ್ನು ಜಖಂ ಗೊಳಿಸಿ ಹೆಚ್ಚುವರಿ ಇವಿಎಂ ಮಶೀನ್ ಗಳನ್ನು ಪುಡಿಪುಡಿ ಮಾಡಿದ ವಿಚಾರದ ಕುರಿತು ಅವರು ಪ್ರತಿಕ್ರಿಯೆ ನೀಡಿದರು.  ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ.  ಈ ರೀತಿ ಯಾರು ಮಾಡಿದರೂ ಸಹ ಅದು ತಪ್ಪು.  ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಅನುಮಾನ ಕಾಡಿದರೆ ಅದನ್ನು ಕಾನೂನಾತ್ಮಕ ಅಂಶಗಳ ಮೂಲಕ ಪರಿಹರಿಸಿಕೊಳ್ಳಬೇಕು.  ಅಧಿಕಾರಿಗಳ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದರೆ ಅದು ತಪ್ಪು ಎಂದು ಅವರು ತಿಳಿಸಿದರು.

ಆ ಘಟನೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಭಾಗಿಯಾಗಿಲ್ಲ.  ಈ ಘಟನಾವಳಿ ದೃಶ್ಯ ವೀಕ್ಷಿಸಿದಾಗ ಅವರು ಒಂದು ಪಕ್ಷದ ಅಭ್ಯರ್ಥಿ ಪರವಾಗಿ ಜಯಘೋಷ ಹಾಕುತ್ತಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಶಾಸಕ ಶಿವಾನಂದ ಪಾಟೀಲ ಡಿಸಿಎಂ ಆಗುವ ವಿಚಾರ

ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಡಿಸಿಎಂ ಆಗುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ತಂದೆಗೆ ಡಿಸಿಎಂ ಆಗುವ ಅರ್ಹತೆ ಇದೆ.  ಅವರೊಬ್ಬ ದಕ್ಷ ರಾಜಕಾರಣಿ.  ಅವಕಾಶ ಸಿಕ್ಕರೆ ಇನ್ನೂ ಪರಿಣಾಮಕಾರಿಯಾಗಿ ಹಾಗೂ ಗುಣಾತ್ಮಕವಾಗಿ ಅವರು ಜನಸೇವೆ ಮಾಡುತ್ತಾರೆ.  ಇದು ನನ್ನ ವೈಯುಕ್ತಿಕ ಅಭಿಪ್ರಾಯ.  ಕಾಂಗ್ರೆಸ್ ಹೈಕಮಾಂಡಿಗೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ.  ನಾನು ಓರ್ವ ಸಾಮಾನ್ಯ ಕಾರ್ಯಕರ್ತೆಯಾಗಿದ್ದೇನೆ ಎಂದು ಸಂಯುಕ್ತಾ ಎಸ್. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌