ಕಾಂಗ್ರೆಸ್ ಬಹುಮತ ಪಡೆಯಲು ಲಿಂಗಾಯಿತರ ಪಾತ್ರ ದೊಡ್ಡದು- ಸಮುದಾಯದ ಎಂ. ಬಿ. ಪಾಟೀಲರನ್ನು ಸಿಎಂ ಮಾಡಬೇಕು- ಸಂಗಮೇಶ ಬಬಲೇಶ್ವರ

ವಿಜಯಪುರ: ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ಲಿಂಗಾಯಿತ ಪಾತ್ರ ಪ್ರಮುಖವಾಗಿದ್ದು, ಸಮುದಾಯಕ್ಕೆ ಸೇರಿರುವ ಎಂ. ಬಿ. ಪಾಟೀಲರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವುದಕ್ಕೆ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾಗಿದೆ.  ನಮ್ಮನ್ನು ಬಳಸಿ ಬಿಸಾಡಿರುವ ಬಿಜೆಪಿಗೆ ಲಿಂಗಾಯತರು ಈಗ ತಕ್ಕಪಾಠ ಕಲಿಸಿದ್ದಾರೆ. ಕಾಂಗ್ರೆಸ್ಸಿನ ಕಡೆ ವಾಲಿರುವ ಲಿಂಗಾಯತ ಸಮುದಾಯದ ಮತಗಳನ್ನು ಉಳಿಸಿಕೊಳ್ಳುವ ನೈತಿಕ ಜವಾಬ್ದಾರಿ ಕಾಂಗ್ರೆಸ್ ಹೈಕಮಾಂಡ್ ಗೆ ಸೇರಿದೆ.  ಪಕ್ಷಕ್ಕೆ ಮತ ಹಾಕಲು ಲಿಂಗಾಯತರು ಬೇಕು.  ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗಲು ಲಿಂಗಾಯಿತರು ಅರ್ಹರಲ್ಲವೇ? ಲಿಂಗಾಯತರು ನಾವೇನು ಪಾಪ ಮಾಡಿದ್ದೇವೆ? ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಅವರ ಬಗ್ಗೆ ನಮ್ಮೆಲ್ಲರಿಗೂ ಅಪಾರವಾದ ಗೌರವವಿದೆ.  ಅವರಿಗೆ ಅಧಿಕಾರ ಹಂಚಿಕೆ ಮಾಡಲು ಈಗ ಚಿಂತನೆ ನಡೆದಿದೆ.  ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲು ಲಿಂಗಾಯಿತ ಮತಗಳನ್ನು ಒಗ್ಗೂಡಿಸಿ ಕಾಂಗ್ರೆಸ್ಸಿನತ್ತ ಸೆಳೆಯಲು ನಮ್ಮ ಸಮುದಾಯದ ಪ್ರಭಾವಿ ನಾಯಕ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಯಶಸ್ವಿಯಾಗಿದ್ದಾರೆ.  ಲಿಂಗಾಯಿತ ಸಮುದಾಯದ 39 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ.  ಹೀಗಾಗಿ ಎಂ ಬಿ ಪಾಟೀಲ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಎನ್ನುವುದು ಸಮಸ್ತ ಲಿಂಗಾಯತ ಸಮುದಾಯದ ಮತ್ತು ನಾಡಿನ ವೀರಶೈವ ಲಿಂಗಾಯತ ಮಠಾಧೀಶರ ಹಾಗೂ ಸಮುದಾಯದ ಸದಾಶಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಲಿಂಗಾಯತ ಸಮುದಾಯದ ಕೋರಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು.  ಕಾಂಗ್ರೆಸ್ಸಿನತ್ತ ವಾಲಿರುವ ಮತಗಳನ್ನು ಲೋಕಸಭೆ ಚುನಾವಣೆಯಲ್ಲಿ ಉಳಿಸಿಕೊಳ್ಳಬೇಕಾದರೆ ಮತ್ತು ಕಾಂಗ್ರೆಸ್ಸಿಗೆ ದೊರೆತಿರುವ ಈ ವೈಭವದ ದಿನಗಳು ದೀರ್ಘಕಾಲದವರೆಗೆ ರಾಜ್ಯದಲ್ಲಿ ಹಾಗೂ ರಾಜಕೀಯದಲ್ಲಿ ಪಕ್ಷ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಎಂ. ಬಿ. ಪಾಟೀಲ ಅವರನ್ನು ಮುಖ್ಯಮಂತ್ರಿಯನ್ನಾಗಿ ಪರಿಗಣಿಸಬೇಕು.  ಲಿಂಗಾಯತರಿಗೂ ಅವಧಿ ಹಂಚಿಕೆ ಮಾಡಿಕೊಡಬೇಕು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

Leave a Reply

ಹೊಸ ಪೋಸ್ಟ್‌