ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಪರ ಮೆಸೇಜ್ ಬರೆದು ಕೃಷ್ಣನ ಜನ್ಮಸ್ಥಾನ ಸೇರಿದ ನಾಲತವಾಡದ ಯುವಕ ವೀರೇಶ

ವಿಜಯಪುರ: ಯುವಕನೊಬ್ಬ ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಪರ ಬರಹ ಬರೆದು ಕೃಷ್ಣನ ಜನ್ಮಸ್ಥಾನ ಸೇರಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದಿದೆ.

ನಾಲತವಾಡ ಪಟ್ಟಣದ ಕಾನಬಾವಿ ಓಣಿಯ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ(31) ಎಂಬಾತ ಈ ಕೃತ್ಯ ಎಸಗಿದ್ದು, ಈತನನ್ನು ಬಂಧಿಸಿರುವ ಮುದ್ದೇಬಿಹಾಳ ಪೊಲೀಸರು ನ್ಯಾಯಾಧೀಶರ ಎದುರು ಹಾಜರು ಪಡಿಸಿ ಕೋರ್ಟಿನ ಆದೇಶದಂತೆ ವಿಜಯಪುರ ನಗರದ ದರ್ಗಾದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುದ್ದೇಬಿಹಾಳ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಾಜಿ ನಾಡಗೌಡ ಹೆಸರಿನ ವಾಟ್ಸಾಪ್ ಗ್ರುಪ್ ವೊಂದರಲ್ಲಿ ಈ ಯುವಕ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಬರಹವನ್ನು ಪೋಸ್ಟ್ ಮತ್ತು ಶೇರ್ ಮಾಡಿದ್ದ.  ಇದನ್ನು ನೋಡಿದ ಆ ಗ್ರುಪ್ ನ ಸದಸ್ಯರು ಯುವಕನನ್ನು ನಾಲತವಾಡ ಪಟ್ಟಣದಲ್ಲಿರುವ ಪೊಲೀಸ್ ಔಟ್‌ಪೋಸ್ಟ್ ಗೆ ಕರೆತಂದು ಪೊಲೀಸರು ವಶಕ್ಕೆ ಒಪ್ಪಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಆರೋಪಿ ವೀರೇಶ ಪರಯ್ಯ ಕರ್ಪೂರಮಠ

ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು ವೀರೇಶ ಪರಯ್ಯ ಕರ್ಪೂರಮಠ ತಪ್ಪು ಮಾಡಿದ್ದು ಕಂಬು ಬಂದ ಹಿನ್ನೆಲೆಯಲ್ಲಿ ಅವನನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದ್ದರು.  ಈಗ ಆರೋಪಿಯ ವಿರುದ್ಧ ನಾಲತವಾಡ ಭಾಗದ ಬೀಟ್ ಪೊಲೀಸ್ ಪಿ. ಎಸ್. ಪಾಟೀಲ ಅವರು ಸರಕಾರ ಪರವಾಗಿ ಸಲ್ಲಿಸಿದ ದೂರಿನನ್ವಯ ಐಪಿಸಿ ಕಲಂ 153(ಗಲಭೆ ಉಂಟು ಮಾಡುವ ಉದ್ದೇಶದಿಂದ ಕೇವಲ ಪ್ರಚೋದನೆ ನೀಡುವುದು), 153 (ಎ) (ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿ ಸೌಹಾರ್ದತೆ ಕದಡಲು ಯತ್ನಿಸುವುದು) ಮತ್ತು 153 (ಬಿ) (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತ ಆರೋಪ, ಸಮರ್ಥನೆ) ಅಡಿ ಪಿ ಎಸ್ ಐ ಆರೀಫ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.

ಇದು 2ನೇ ಘಟನೆ

ನಾಲತವಾಡದಲ್ಲಿ ಇಂಥದ್ದೇ ಘಟನೆ ಕೆಲ ವರ್ಷಗಳ ಹಿಂದೆ ಪುಲ್ವಾಮಾ ದಾಳಿಯ ಸಂದರ್ಭ ನಡೆದಿತ್ತು.  ಆಗಲೂ ಆರೋಪಿಯೋರ್ವನ ವಿರುದ್ಧ ಅಲ್ಲಿನ ಜನರು ಆಕ್ರೋಶಗೊಂಡು ನಾಲತವಾಡ ಹೊರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.  ಈ ಮತ್ತೆ ಅಂಥದ್ದೆ ಘಟನೆ ನಡೆದಿರುವುದು ವಿಪರ್ಯಾಸವಾಗಿದೆ.

ರಾಜಿ ಸಂಧಾನ ವಿಫಲ

ಈ ಘಟನೆಯ ಗಂಭೀರತೆ ಅರಿವಿದ್ದರೂ ಕೂಡ ನಾಲತವಾಡದ ಒಂದಿಬ್ಬರು ಯುವ ಮುಖಂಡರು ಪರಸ್ಪರ ಮಾತುಕತೆ ಮೂಲಕ ಪ್ರಕರಣದಲ್ಲಿ ಹೊಂದಾಣಿಕೆ ಮಾಡಿಸಿ ಇದು ಪೊಲೀಸ್ ಠಾಣೆ ಮೆಟ್ಟಿಲು ಏರಿ ಮುಂದುವರೆಯದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು.  ಆದರೆ ಘಟನೆಯ ಗಂಭೀರತೆ ಅರಿತಿದ್ದ ಪೊಲೀಸರು ರಾಜಿ ಸಂಧಾನಕ್ಕೆ ಅವಕಾಶ ನೀಡದೇ ಕಾನೂನು ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಶೆಗೆ ಪಾತ್ರವಾಗಿದೆ.

Leave a Reply

ಹೊಸ ಪೋಸ್ಟ್‌