ಖೊಟ್ಟಿ ಮತದಾರರ ಹೆಸರು ಸೇರ್ಪಡೆ ಕುರಿತು ನ್ಯಾಯಾಂಗ ತನಿಖೆ ನಡೆಸು ಆಗ್ರಹ- ಅಬ್ದುಲ್ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಬಿಜಾಪುರ ನಗರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಖೊಟ್ಟಿ ಹೆಸರುಗಳನ್ನು ಸೇರ್ಪಡೆಯಾಗಿದ್ದು, ಈ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಬ್ದುಲ್ ಹಮೀದ್ ಮುಶ್ರಿಫ್ ಮತ್ತು ಕಾಂಗ್ರೆಸ್ ಮುಖಂಡರು ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಹಮೀದ್ ಮುಶ್ರಿಫ್, ಬಿಜಾಪುರ ನಗರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮತಕ್ಷೇತ್ರದ ಸಿದ್ದಸಿರಿ      ಶುಗರ ಪ್ಯಾಕ್ಟರಿಯ ಸಿಬ್ಬಂದಿಗಳ ಹಾಗೂ ನಾಗಠಾಣ ಮತಕ್ಷೇತ್ರದ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ.  ಈ ಕುರಿತು ನ್ಯಾಯಾಂಗ ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಬಿಜಾಪುರ ನಗರ ಬಿಜೆಪಿ ಶಾಸಕರ ಒತ್ತಾಯಕ್ಕೆ ಮಣಿದು ಚುನಾವಣಾಧಿಕಾರಿಗಳು ಖೊಟ್ಟಿ ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ.  ಇದರಿಂದ ವಿಜಯಪುರ ನಗರ ಮತಕ್ಷೇತ್ರದ ಮತದಾರರಿಗೆ ಅನ್ಯಾಯವಾಗಿದೆ.  ಮತದಾನದ ದಿನ ನಾವು ಅನೇಕ ಜನ ನಕಲಿ ಮತದಾರರನ್ನು ಹಿಡಿದು ಪೋಲಿಸರ ವಶಕ್ಕೆ ಒಪ್ಪಿಸಿದ್ದೇವೆ.  ಆದರೆ, ಜಿಲ್ಲಾಡಳಿತ ಈವರೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.  ಈ ಪ್ರಕರಣದಲ್ಲಿ ಬಿಜಾಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳು ನೇರವಾಗಿ ಶಾಮೀಲಾಗಿರುವು ಮೇಲ್ನೊಟಕ್ಕೆ ಕಂಡು ಬಂದಿರುತ್ತಿದೆ.  ಅಷ್ಟೇ ಅಲ್ಲ, ಕಂದಾಯ ಅಧಿಕಾರಿಗಳ ಕೈವಾಡವೂ ಇದರಲ್ಲಿದೆ.  ಇದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು. ಮೊನ್ನೆ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತದಾರ ಪಟ್ಟಿ ಹಾಗೂ ಮತದಾನ ಮಾಡಿದ ಪಟ್ಟಿ ಪರಿಶೀಲಿಸಿ ಬಿಜಾಪೂರ– 30 ನಗರ ಮತಕ್ಷೇತ್ರದ ರಹವಾಸಿ ಅಲ್ಲದಿದ್ದರೂ ಸಹ ಅಕ್ರಮವಾಗಿ ನಕಲಿ ಮತದಾನ ಮಾಡಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡಿದ್ದಾರೆ.  ಈ ಹಿನ್ನೆಲೆಯಲ್ಲಿ ಬಿಜಾಪೂರ ನಗರ ಮತಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಯ ಸದಸ್ಯತ್ವವನ್ನು ತಡೆಹಿಡಿದು ನ್ಯಾಯಾಂಗ ತನಿಖೆ ಮಾಡಿಸಿ ಸತ್ಯಾಸತ್ಯತೆಯನ್ನು ಮತದಾರರಿಗೆ ತಿಳಿಸಬೇಕು.  ಈ ಮೂಲಕ ನೂತನವಾಗಿ ಆಯ್ಕೆಯಾದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ವಿಜಯಪುರ ಡಿಸಿ ಡಾ. ದಾನಮ್ಮನವರ ಭೇಟಿ ಮಾಡಿದ ಅಬ್ದುಲ್ ಹಮೀದ್ ಮುಶ್ರಿಫ್, ಕಾಂಗ್ರೆಸ್ ಮುಖಂಡರು

 

ಈ ಅಕ್ರಮದಲ್ಲಿ ಶಾಮಿಲಾಗಿರುವ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಿ ನ್ಯಾಯಾಂಗ ತನಿಖೆಗೊಳಪಡಿಸಬೇಕು.  ಈ ಮೊದಲು ಬಿಜಾಪೂರ- 30 ನಗರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ಸುಮಾರು 2,47,000 ಮತದಾರರಿದ್ದು, ನಂತರದ ದಿನಗಳಲ್ಲಿ ಸುಮಾರು 17,000 ಮತದಾರರ ಹೆಸರು ಡಿಲೀಟ್ ಮಾಡಿದ್ದರು.  ನಂತರ ಮತ್ತೆ ಜನವರಿ 2023 ರಲ್ಲಿ ಏಕಾಏಕಿ 2,61,000 ಮತದಾರರನ್ನು ಸೇರ್ಪಡೆ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದಾರೆ.  ಅಲ್ಲದೇ, ಮತದಾನದ 12 ದಿನ ಮೊದಲು ಒಮ್ಮೇಲೆ 2,81,000 ಮತದಾರರ ಪಟ್ಟಿಯನ್ನು ಮತದಾನ ಕೇಂದ್ರಕ್ಕೆ ಕಳುಹಿಸಿದ್ದರು.  51,000 ದಷ್ಟು ಮತದಾರರನ್ನು ಜನೇವರಿ- 2023 ರಿಂದ ಏಪ್ರಿಲ 31ರ ವರೆಗೆ ಹೇಗೆ ಸೇರ್ಪಡೆ ಮಾಡಲು ಸಾಧ್ಯವಿದೆ ಎಂಬುದರ ಕುರಿತೂ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕು.  ಮೇಲ್ನೊಟಕ್ಕೆ ಇದರಲ್ಲಿ ದೊಡ್ಡಮಟ್ಟದ ಮೋಸ ನಡೆದಿದ್ದು ಕಂಡು ಬರುತ್ತಿದೆ.  ನಗರ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ- 149 ರಲ್ಲಿ ಒಟ್ಟು ಮತದಾರ ಸಂಖ್ಯೆ- 1463 ಇದ್ದು ಈ ಈ ಮತಗಟ್ಟೆಯಲ್ಲಿ ಸುಮಾರು- 1113 ಮತಗಳು ಚಲಾವಣೆಯಾಗಿವೆ.  ಇಲ್ಲಿ ನಕಲಿ ಮತದಾನವಾಗಿರೋದು ಮೇಲ್ನೊಟಕ್ಕೆ ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.

ಈ ಮತಗಟ್ಟೆಯಲ್ಲಿ ಬರುವ ಜನಸಂಖ್ಯೆಗೆ ಅನುಗುಣವಾಗಿ ಅಲ್ಲಿ ಸುಮಾರು 100 ರಿಂದ 150 ಮನೆಗಳು ಮಾತ್ರ ಇವೆ.  ಅಲ್ಲಿ ಯಾವುದೇ ತರಹದ ಮನೆಗಳು ಇರುವುದಿಲ್ಲ.  ಅಲ್ಲಿ ಇಷ್ಟೊಂದು ಸಂಖ್ಯೆಯ ಮತದಾರರು ಇರುವುದಿಲ್ಲ.  ಇಲ್ಲಿ ಸಂಪೂರ್ಣ ಖೊಟ್ಟಿ ಮತದಾರರ ಹೆಸರು ಸೇರ್ಪಡೆಯಾಗಿದೆ.  ಈ ಭಾಗ ಸಂಖ್ಯೆಯಲ್ಲಿ ಮತದಾನ ಮಾಡಿದ ಪಟ್ಟಿಯನ್ನು ಕುಲಂಕಷವಾಗಿ ಪರಿಶೀಲಿಸಿ ಮನೆ- ಮನೆಗೆ ತರಳಿ ಸಮೀಕ್ಷೆ ಮಾಡಿಸಿದರೆ ಉಳಿದ ಎಲ್ಲಾ ಸತ್ಯಾಸತ್ಯತೆಗಳು ಹೊರ ಬರುತ್ತವೆ.  ಇದೇ ರೀತಿ ಮತಗಟ್ಟೆ ಸಂಖ್ಯೆ 1 ರಿಂದ 66ರ ವರೆಗಿನ ಮತದಾರರ ಪಟ್ಟಿಯಲ್ಲಿ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತದಾರರ ಹೆಸರುಗಳನ್ನು ತೆಗೆದು ಅಕ್ರಮವಾಗಿ ಬಿಜಾಪೂರ ನಗರ- 30 ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಮಾರು 15,000 ನಕಲಿ ಮತದಾರರ ಹೆಸರನ್ನು ಸೇರ್ಪಡೆ ಮಾಡಿ ಸಕ್ರಮವಾಗಿ ತೋರಿಸಿ ಮತದಾನ ಮಾಡಿಸಲಾಗಿದೆ ಎಂದು ಅವರು ಆರೋಪಿಸಿದರು.

ಈ ಎಲ್ಲ ಮತಗಟ್ಟೆಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು.  ಇಂಥ ಅಕ್ರಮಗಳನ್ನು ಎಸಗಿ ಮತದಾರರ ಹಕ್ಕು ಕಸಿದುಕೊಂಡಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬಿಜಾಪೂರ- 30 ವಿಧಾನಸಭೆ ಮತಕ್ಷೇತ್ರದ ಮತದಾರರಿಗೆ ಹಾಗೂ ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಅಬ್ದಲ್ ಹಮೀದ್ ಮುಶ್ರಿಫ್ ಹೇಳಿದರು.

ಅಲ್ಲದೇ, ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ರಾಜ್ಯಪಾಲ, ಕೇಂದ್ರ ಮುಖ್ಯ ಚುನಾವಣಾಧಿಕಾರಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಮುಖ್ಯಮಂತ್ರಿ, ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ, ಅಲ್ತಾಫ್ ಇಟಗಿ, ಆಸಿಫ್ ಶಾನವಾಲೆ,ಅಪ್ಪು ಪೂಜಾರಿ, ದಿನೇಶ ‌ಹಳ್ಳಿ, ಜಮೀರ ಬಾಂಗಿ, ಮೈನೂದ್ದೀನ ಬೀಳಗಿ, ವೈಜನಾಥ ಕರ್ಪೂರಮಠ, ಗಿರೀಶ ಇಟ್ಟಂಗಿ, ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಅಪ್ಜಲ್ ಜಾನವೆಕರ, ಸದ್ದಾಂ ಇನಾಮದಾರ, ಭಾರತಿ ಹೊಸಮನಿ, ರಾಜೇಶ್ವರಿ ಚೋಳಕೆ, ಆಸ್ಮಾ ಕಾಲೆಬಾಗ, ರೂಬಿನಾ ಹಳ್ಳೂರ, ಶಮಿಮ ಅಕ್ಕಲಕೋಟ, ಧನರಾಜ ಎ, ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌