ವಿಜಯಪುರ: ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯದ ಹಿರಿಯ ಶಾಸಕ ಶಿವಾನಂದ ಪಾಟೀಲ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಜಲಸಂಪನ್ಮೂಲ ಖಾತೆ ನೀಡಬೇಕು ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಶಿವಾನಂದ ಪಾಟೀಲರು ಅತೀ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಶಾಸಕರಾಗಿ ಮತ್ತು ಸಚಿವರಾಗಿ ಬಸವನ ಬಾಗೇವಾಡಿ ಮತಕ್ಷೇತ್ರ ಅಷ್ಟೇ ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿಯೇ ಚಾಣಕ್ಯ ರಾಜಕಾರಣಿ ಎಂದೇ ಖ್ಯಾತಿ ಹೊಂದಿದ್ದಾರೆ. ಹೀಗಾಗಿ ಶಿವಾನಂದ ಪಾಟೀಲ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಹಲವಾರು ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿವೆ. ಆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶಿವಾನಂದ ಪಾಟೀಲ ಅವರಿಗೆ ಡಿಸಿಎಂ ಮಾಡಬೇಕು. ನಂಜುಂಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ಮತಕ್ಷೇತ್ರವೆಂಬ ಅಪಖ್ಯಾತಿಗೆ ಗುರಿಯಾಗಿದ್ದ ಬಸವ ಜನ್ಮ ಸ್ಥಳ ಬಸವನ ಬಾಗೇವಾಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ನಂಬರ್ ಒನ್ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ಸಿನಿಂದ ಸುಮಾರು 12 ಜನ ಲಿಂಗಾಯಿತ ಪಂಚಮಸಾಲಿ ಸಮಾಜದಿಂದ ಆಯ್ಕೆಯಾಗಿದ್ದಾರೆ. ಅವರಲ್ಲಿ ಶಿವಾನಂದ ಪಾಟೀಲ ಹಿರಿಯರಾಗಿದ್ದಾರೆ. ಅತೀ ಹೆಚ್ಚು ಶಾಸಕರನ್ನು ಕೊಟ್ಟಿರುವ ಪಂಚಮಸಾಲಿ ಸಮಾಜಕ್ಕೆ ನ್ಯಾಯವನ್ನು ಒದಗಿಸಬೇಕು. ಅದೇ ರೀತಿ ನಮ್ಮ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಮತ್ತು ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಎಂದು ಶಂಕರಗೌಡ ಬಿರಾದಾರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ, ವಿಜಯಪುರ ತಾಲೂಕು ಅಧ್ಯಕ್ಷ ಶ್ರೀಶೈಲ ಬುಕ್ಕಾಣಿ, ಕೋಲ್ಹಾರ ತಾಲೂಕಾಧ್ಯಕ್ಷ ರವಿ ಕೆಂಗನಾಳ, ಮುಖಂಡರಾದ ಮಲ್ಲನಗೌಡ ಪಾಟೀಲ ಸಂತೋಷ ಬಿರಾದಾರ, ದಾನೇಶ ಅವಟಿ, ಸಂಗನಗೌಡ ಪಾಟೀಲ(ಮುಳವಾಡ) ಮುಂತಾದವರು ಉಪಸ್ಥಿತರಿದ್ದರು.