ಮಗಳೆದುರು ತಾಯಿಯನ್ನು ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ ವಿಧಿಸಿದ ವಿಜಯಪುರ ನ್ಯಾಯಾಲಯ

ವಿಜಯಪುರ: ಮಹಿಳೆಯೊಬ್ಬಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗೆ ವಿಜಯಪುರ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಆರೋಪಿ ಅಕ್ಬರ್ ಉರ್ಫ್ ಅಕ್ಬರಬಾಷಾ ಗಾಲಿಬಸಾಬ ಬಾಗವಾನ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ ಎಲ್. ಪಿ. ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಸರಕಾರ ಪರ ಅಭಿ.ಯೋಜಕಿ ವಿ. ಎಸ್. ಇಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ

ಕೊಕಟನೂರ ಗ್ರಾಮದಲ್ಲಿ 27.01.2018 ರಂದು ಸಂಜೆ 5 ಗಂಟೆಗೆ ಶಮಶಾದ ಅಕ್ಬರ ಮಕಾನದಾರ ಎಂಬ ಮಹಿಳೆ ತನ್ನ ಮನೆಯ ಮುಂದೆ ಕುಳಿತಿದ್ದಾಗ ಆಗಮಿಸಿದ ಆರೋಪಿ ಅಕ್ಬರ್ ಉರ್ಫ್ ಅಕ್ಬರಬಾಷಾ ಗಾಲಿಬಸಾಬ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪಲಾಯನ ಮಾಡಿದ್ದ.  ಈ ಮಹಿಳೆಯ ಚಿಕಿತ್ಸೆ ಫಲಕಾರಿಯಾಗದೇ 15.02.2018 ರಂದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಈ ಕುರಿತು ದಾಖಲಾದ ಪ್ರಕಣವನ್ನು ಕೈಗೆತ್ತಿಕೊಂಡ ಸಿಂದಗಿಯ ಅಂದಿನ ಸಿಪಿಐ ಮಹಾಂತೇಶ ಕೆ. ಧಾಮಣ್ಣನವರ ಆರೋಪಿಯನ್ನು ಬಂಧಿಸಿದ್ದರು.  ಅಲ್ಲದೇ, ಕೊಲೆಯಾದ ಮಹಿಳೆ ತನಗ ಅವಮಾನ ಮಾಡಿದ್ದಾಳೆ ಎಂದು ಸಿಟ್ಟಾದ ಆರೋಪಿ ಆಕೆಯನ್ನು ಕೊಲೆ ಮಾಡಿರುವುದನ್ನು ತನಿಖೆಯ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಿದ್ದರು.  ಈ ಕುರಿತು ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್. ಪಿ. ಆರೋಪಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಕಲಂ 302ರ ಅಡಿ ಮರಣ ದಂಡನೆ, 354(ಸಿ) ಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ ರೂ. 2000 ದಂಡ, ಕಲಂ 506ರ ಆರು ತಿಂಗಳು ಜೈಲು ಶಿಕ್ಷೆ ಮತ್ತು ರೂ. 2000 ದಂಡ ಮತ್ತು ಆರೋಪಿಯಿಂದ ಕೊಲೆಯಾದ ಮಹಿಳೆಯ ಕುಟುಂಬಕ್ಕೆ ರೂ. 50 ಸಾವಿರ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ ಎಂದು ವಿ. ಎಸ್. ಇಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌