ವಿಜಯಪುರ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ಹಾಗೂ 2022-23ನೇ ಆರ್ಥಿಕ ವರ್ಷದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಉತ್ತಮ ಸಾಧನೆ ಮಾಡಿದ ಅಧಿಕಾರಿ-ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುಷ್ಠಾನ ಇಲಾಖೆಯಾದ ಕೃಷಿ ಇಲಾಖೆಗೆ ಜಿಲ್ಲೆಯ ಅತ್ಯತ್ತುಮ ಅನುಷ್ಠಾನ ಇಲಾಖೆ ಪ್ರಶಸ್ತಿ, 2022-23ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ತಾಲೂಕು ಪಂಚಾಯಿತಿಗಳಲ್ಲಿ ಚಡಚಣ ತಾಲೂಕು ಪ್ರಥಮ ಸ್ಥಾನ, ತಿಕೋಟಾ ದ್ವಿತೀಯ ಹಾಗೂ ಇಂಡಿ ತಾಲೂಕಿಗೆ ತೃತಿಯ ಸ್ಥಾನ ನಿಗದಿತ ಸಮಯದಲ್ಲಿ ಕೂಲಿಕಾರರಿಗೆ ಕೂಲಿ ಪಾವತಿ ಮಾಡುವಲ್ಲಿ 100% ಪ್ರಗತಿ ಸಾಧಿಸಿದ ಕೋಲ್ಹಾರ ತಾಲೂಕಿಗೆ ವಿಶೇಷ ಪ್ರಶಸ್ತಿ, ಬಿಜ್ಜರಗಿ ಮತ್ತು ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರಿಗೆ ಅತೀ ಹೆಚ್ಚು ಉದ್ಯೋಗ ನೀಡಿದ ಹಿನ್ನೆಲೆ ವಿಶೇಷ ಚೇತನ ಪ್ರಶಸ್ತಿ, ಜೈನಾಪುರ ಹಾಗೂ ಮಧಭಾವಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡಿದ ಹಿನ್ನೆಲೆ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ನಾನಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.