ವಿಜಯಪುರ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗಾಗಿ ಮೇ 22 ರಿಂದ ಜೂನ್ 22ರ ವರೆಗೆ ಒಂದು ತಿಂಗಳು ಗ್ರಾಮ ಆರೋಗ್ಯ ಅಭಿಯಾನ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನರೇಗಾ ಕೂಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆದೇಶದ ಮೇರೆಗೆ ಆರೋಗ್ಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ (ಕರ್ನಾಟಕ ಹೆಲ್ತ್ ಪ್ರಮೋಶನ್ ಟ್ಟಸ್ಟ್), ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಗ್ರಾಮ ಆರೋಗ್ಯ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಅಭಿಯಾನದಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕೂಲಿ ಕಾರ್ಮಿಕರು ಉಚಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈಗಾಗಲೇ ಈ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಾತ್ಮ ಗಾಂಧಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ನರೇಗಾದಡಿ ಕೆಲಸ ನಿರ್ವಹಿಸುತ್ತಿರುವ ಇನ್ನು ಹಲವು ಕೂಲಿಕಾರ್ಮಿಕರು ಇದರಿಂದ ಹೊರಗುಳಿದಿದ್ದಾರೆ. ಹೆಚ್ಚಿನ ಕೂಲಿಕಾರ್ಮಿಕರಿಗೆ ಅನುಕೂಲ ಒದಗಿಸಿಕೊಡುವ ದೃಷ್ಟಿಯಿಂದ ಆರೋಗ್ಯ ಸೇವೆಯನ್ನು ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ಒದಗಿಸಲಾಗುತ್ತಿದೆ.
ಆರೋಗ್ಯ ಕಿಟ್ ವಿತರಣೆ
ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಗೆ ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗಳ ನಿವಾರಣೆಯ ಉದ್ಧೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಹಾಗೂ ಕೆ.ಎಚ್.ಪಿ.ಟಿ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಅಮೃತ ಆರೋಗ್ಯ ಅಭಿಯಾನದಡಿ ಹೆಲ್ತ್ ಸ್ಕ್ರೀನ್ ಕಿಟ್’ ವಿತರಿಸಲಾಗಿದೆ. ಈ ಕಿಟ್ ಉಪಯೋಗಿಸಿಕೊಂಡು ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ಹಾಗೂ ಕೆ.ಎಚ್.ಪಿ.ಟಿ ಸಿಬ್ಬಂದಿಗಳ ಸಹಾಯದಿಂದ ಗ್ರಾಮೀಣರ ಹಾಗೂ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು.
ನರೇಗಾ ಸಮುದಾಯ ಆಧಾರಿತ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ
ಗ್ರಾಮ ಪಂಚಾಯತಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಚಾಲ್ತಿಯಲ್ಲಿರುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಅತೀ ಹೆಚ್ಚು ಜನರು ಕೆಲಸ ನಿರ್ವಹಿಸುತ್ತಿರುವುದರಿಂದ ಸ್ಥಳದಲ್ಲಿಯೇ ಗ್ರಾಮ ಆರೋಗ್ಯ ಅಭಿಯಾನ ಆಯೋಜಿಸಲಾಗುತ್ತಿದೆ.
ವಿಡಿಯೋ ಕಾನ್ಫರೆನ್ಸ್ ಆಧಾರಿತ ತರಬೇತಿ
ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ವತಿಯಿಂದ ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿಗಳಿಗೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಚುನಾಯಿತ ಸದಸ್ಯರುಗಳಿಗೆ, ಕೆ.ಎಚ್.ಪಿ.ಟಿಯ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ, ನರೇಗಾ ಯೋಜನೆಯ ಕಾಯಕ ಬಂಧುಗಳಿಗೆ ಮಾರ್ಗದರ್ಶನದ ಜೊತೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಗ್ರಾಮ ಮಟ್ಟದಲ್ಲಿ ಅಭಿಯಾನದ ಕುರಿತು ಜಾಗೃತಿ: ಗ್ರಾಮ ಆರೋಗ್ಯ ಅಭಿಯಾನವನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಗೊಳಿಸಲು ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಆರೋಗ್ಯ ಅಭಿಯಾನ ಗ್ರಾಮದಲ್ಲಿ ನಡೆಯುವ ದಿನಾಂಕ, ಸ್ಥಳ, ಸಮಯ ನಿಗದಿಪಡಿಸಿ ಗ್ರಾಮದಲ್ಲಿ ಡಂಗುರ ಸಾರುವುದು, ಕಸ ವಿಲೇವಾರಿ ಘಟಕದಲ್ಲಿ ಜಿಂಗಲ್ಸ್ ಮೂಲಕ, ಮಾಹಿತಿ ವಿವರದ ಕರ ಪತ್ರ ಮುದ್ರಿಸಿ ಹಂಚುವುದೂ ಸೇರಿದಂತೆ ನಾನಾ ಪ್ರಚಾರ ಮಾಧ್ಯಮಗಳ ಮೂಲಕ ಬೃಹತ್ ಜಾಗೃತಿ ಮೂಡಿಸಿ ಉದ್ಯೋಗ ಚೀಟಿ ಹೊಂದಿರುವ ಪ್ರತಿಯೊಬ್ಬರು ಆರೋಗ್ಯ ತಪಾಸಣೆಗೊಳಪಡಲು ಜಾಗೃತಿ ಮೂಡಿಸುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದು ರಾಹುಲ ಶಿಂಧೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.