ವಿಜಯಪುರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಕಠಿಣ ಪ್ರರಿಶ್ರಮ ಮತ್ತು ಶ್ರದ್ಧೆ ಇದ್ದರೆ ಸಾಕು ಯಾವ ಮಾಧ್ಯಮವಾದರೇನು ಕನಸನ್ನು ನನಸು ಮಾಡಬಹುದು ಎಂಬುದಕ್ಕೆ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದ ಯುವಕ ಯಲಗೂರೇಶ ಅರ್ಜುನ ನಾಯಕ ಸಾಕ್ಷಿಯಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಯು ಪಿ ಎಸ್ ಸಿ ಪರೀಕ್ಷೆ ಪಡೆದು ರಾಷ್ಟ್ರ ಮಟ್ಟದಲ್ಲಿ 890ನೇ ಸ್ಥಾನ ಪಡೆದಿರುವ ಯುವಕ ಈಗ ವಿಜಯ.ಪುರ ಜೆಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದ್ದಾರೆ.
ಈ ಸುದ್ದಿ ತಿಳಿದಿದ್ದೇ ತಡ ಯಲಗೂರೇಶ ನಾಯಕ ಅವರ ತಾಯಿ ಉಮಾಬಾಯಿ ಮಗನಿಗೆ ಸಕ್ಕರೆ ತಿನ್ನಿಸಿ ಸಂಭ್ರಮಿಸಿದ್ದಾರೆ. ಬಡಕುಟುಂಬಕ್ಕೆ ಸೇರಿದ ಯುವಕ ಬಾಲ್ಯದಿಂದಲೂ ಪ್ರತಿಭಾವಂತನಾಗಿದ್ದು, ಸರಕಾರಿ ಶಾಲೆ ಮತ್ತು ಬಾಲಕರ ವಸತಿ ನಿಲಯದಲ್ಲಿ ಇದ್ದುಕೊಂಡು ಶಿಕ್ಷಣ ಮುಗಿಸಿದ್ದು ಗಮನಾರ್ಹವಾಗಿದೆ.
ಯುವಕನ ಶೈಕ್ಷಣಿಕ ಹಿನ್ನೆಲೆ
1 ರಿಂದ 5ನೇ ತರಗತಿ ವರೆಗೆ ಸರೂರ ತಾಂಡಾದ ಸರಕಾರಿ ಶಾಲೆಯಲ್ಲಿಯೇ ಓದಿರುವ ಯಲಗೂರೇಶ ನಾಯಕ 6ನೇ ತರಗತಿಯಿಂದ 20ನೇ ತರಗತಿಯವರೆಗೆ ಮುದ್ದೇಬಿಹಾಳ ಪಟ್ಟಣದಲ್ಲಿರುವ ಸಂತ ಕನಕದಾಸ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾನೆ. ನಂತರ ಇದೇ ಪಟ್ಟಣದ ಎಂ. ಜಿ. ವಿ. ಸಿ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿದ್ದಾನೆ. 2018ರಲ್ಲಿ ಬಿ. ಕಾಂ. ಪದವಿ ಪೂರ್ಣಗೊಳಿಸಿದ ಯುವಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದ. ನಂತರ ಬೆಂಗಳೂರಿಗೆ ತೆರಳಿದ ಯುವಕ ಯು. ಪಿ. ಎಸ್. ಸಿ ಗಾಗಿ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ಸ್ಟೇಶನ್ ಸಮೀಪದ ಗ್ರಂಥಾಲಯದಲ್ಲಿ ಓದುತ್ತಿದ್ದೆ ಎಂದು ತನ್ನ ಸಾಧನೆಯ ಶ್ರಮವನ್ನು ಬಿಚ್ಚಿಟ್ಟಿದ್ದಾನೆ.
ನನಗೆ ನಾಗರಿಕ ಸೇವೆ ಎಂದರೆ ಬಲು ಇಷ್ಟ. 2019ರಲ್ಲೆ ಯು. ಪಿ. ಎಸ್. ಸಿ ಪರೀಕ್ಷೆ ಎದುರಿಸಿದೆ. ಅಲ್ಲಿಂದ 2020, 2021ರಲ್ಲಿ ಪರೀಕ್ಷೆ ಬರೆದಿದ್ದೆ. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಯು. ಪಿ. ಎಸ್. ಸಿ. ಪಾಸಾಗಿದ್ದೇನೆ. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದೆ. ವಿಶೇಷವಾಗಿ ಯಾವುದೇ ಕೋಚಿಂಗ್ ಸೆಂಟರ್‍ಗೆ ಹೋಗಿಲ್ಲ. ನನ್ನ ಮೆಚ್ಚಿನ ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆದಿದ್ದೇನೆ. ಸ್ವಲ್ಪ ಕಠಿಣ ಎನಿಸಿದರೂ ಪರಿಶ್ರಮದಿಂದ ಓದಿದರೆ ಕನ್ನಡದಲ್ಲೂ ಸಾಧನೆ ಮಾಡಬಹುದು ಎಂದು ಯಲಗೂರೇಶ ನಾಯಕ ಸಂತಸ ಹಂಚಿಕೊಂಡಿದ್ದಾನೆ.
ಕೊರೊನಾ ಸಂದರ್ಭದಲ್ಲಿ ಬಸ್ ಟಿಕೆಟ್ ಗೆ ಹಣ ಹೊಂದಿಸಲು ಪರದಾಡಿದ್ದ ಯುವಕ
ಯಲಗೂರೇಶ ನಾಯಕ ಸಾಧನೆ ಕುರಿತು ಸಂತಸ ಹಂಚಿಕೊಂಡಿರುವ ಅವರ ತಾಯಿ ಉಮಾಬಾಯಿ ನಾಯಕ, ನಮ್ಮದು ಕೂಲಿ ಮಾಡುವ ಕುಟುಂಬ. ನನಗೆ ಆರು ಜನ ಮಕ್ಕಳಿದ್ದಾರೆ. ಈತ ಐದನೇಯವ. ಯು. ಪಿ. ಎಸ್. ಸಿ. ತರಬೇತಿಗೆಂದು ದೆಹಲಿಗೆ ನಾಲ್ಕು ತಿಂಗಳು ಹೋಗಿದ್ದ. ಆಗ ಕೊರೊನಾ ಲಾಕಡೌನ್ ನಿಂದಾಗಿ ಒಂದೂವರೆ ತಿಂಗಳು ದೆಹಲಿಯಲ್ಲಿಯೇ ಉಳಿದುಕೊಂಡಿದ್ದ. ಮರಳಿ ಊರಿಗೆ ಬರಲು ಬಸ್ ಟಿಕೆಟ್ ಗಾಗಿ ಹಣ ಹೊಂದಿಸಲು ಹರಸಾಹಸ ಪಟ್ಟಿದ್ದ. ನಾವು ಅವರಿವರ ಕಡೆ ವಿನಂತಿ ಮಾಡಿ ರೂ. 25 ಸಾವಿರ ಹಣ ಖರ್ಚು ಮಾಡಿ ಆತನನ್ನು ಮೈಸೂರಿಗೆ ಕರೆಯಿಸಿಕೊಂಡಿದ್ದೇವು. ಆಗ ನನ್ನ ಜೀವನಾನ ಹೋಯ್ತು, ಫ್ರೀ ಕೋಚಿಂಗ್ ಆದ್ರೂ ಓದುದು ಆಗಲಿಲ್ಲ ಎಂದು ಮಗ ಬಹಳ ನೊಂದುಕೊಂಡಿದ್ದ. ಆಗ ಅವರ ಅಣ್ಣಸಚೀನ ನಾಯಕ ಇಷ್ಟು ದಿನ ನಿನ್ನನ್ನು ಮನೆಯವರು ಕೂಲಿ ಮಾಡಿ ಓದಿಸಿದ್ದಾರೆ. ಈಗ ನಾನು ಕೂಲಿ ಮಾಡಿ ಓದಿಸುತ್ತೇನೆ ಎಂದು ಓದಿಸಿದ್ದಾನೆ. ಈಗ ನನ್ನ ಮಗ ಯು. ಪಿ. ಎಸ್. ಸಿ. ಪರೀಕ್ಷೆ ಪಾಸು ಮಾಡಿರುವ ಕುರಿತು ಫೋನ್‍ನಲ್ಲಿ ಹೇಳಿದ. ಆಗ ನಮಗೆಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ಉಮಾಬಾಯಿ ನಾಯಕ ಸಂತಸ ವ್ಯಕ್ತಪಡಿಸಿದರು.
ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೊಳಗಾಗಿರುವ ಯುವಕನ ತಾಯಿ
ಯಲಗೂರೇಶ ನಾಯಕ ಸಹೋದರಿ ಮತ್ತು ಸಧ್ಯಕ್ಕೆ ಫಾಳಪೂಜಿ ಎಚ್. ಪಿ. ಎಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರೇಖಾ ಲಮಾಣಿ ಮಾತನಾಡಿ, ನಮ್ಮ ಕುಟುಂಬದಲ್ಲಿ ಆರು ಜನ ಮಕ್ಕಳಿದ್ದೇವೆ. ಮೂವರು ಗಂಡು,ಮೂವರು ಹೆಣ್ಣು ಮಕ್ಕಳು. ಅದರಲ್ಲಿ ಆರು ಜನಕ್ಕೆ ನಮ್ಮ ತಾಯಿ ಕೂಲಿ ಮಾಡಿ ಓದಿಸಿದ್ದಾರೆ. ಮೊದಲು ಗುಡಿಸಲಲ್ಲಿ ಇದ್ದೇವು. ತಾಯಿ ಎಲ್ಲರಿಗೂ ಪದವಿ ಶಿಕ್ಷಣ ಕೊಡಿಸಿದ ನಂತರ ನಾವು ಕೆಲಸಕ್ಕೆ ಸೇರಿದ್ದೇವೆ. ಆಗ ಮನೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಈ ಸಂದರ್ಭದಲ್ಲಿ ತಾ ಯಿ ಒಮ್ಮೆ ಆಕಳನ್ನು ಕಟ್ಟುವಾಗ ಬಿದ್ದು ಬೆನ್ನುಮೂಳೆ ಮುರಿದುಕೊಂಡಿದ್ದರು. ಈಗ ಅವರಿಗೆ ಆಪರೇಷನ್ ಆಗಿದೆ. ಅವರನ್ನು ನಾವೆಲ್ಲರೂ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಸಹೋದರ ಯಲಗೂರೇಶ ನಾಯಕನ ಸಾಧನೆಗೆ ನಮ್ಮ ಇನ್ನೋರ್ವ ಸಹೋದರ ಮೈಸೂರಿನಲ್ಲಿ ಡಿ. ಆರ್. ಪೊಲೀಸ್ ಆಗಿರುವ ಸಚಿನ ನಾಯಕ ಅವರ ಪರಿಶ್ರಮ ಇದೆ ಎಂದು ಹೇಳಿದರು.
ಯಲಗೂರೇಶ ನಾಯಕ ಕುಟುಂಬ
ಯಲಗೂರೇಶನ ತಂದೆ ಅರ್ಜುನ್ ನಾಯಕ ಎಲ್. ಐ. ಸಿ ಏಜೆಂಟರಾಗಿದ್ದು ಹುಣಸಗಿ ಶಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಉಮಾಬಾಯಿ ಗೃಹಿಣಿಯಾಗಿದ್ದರೆ, ಹಿರಿಯ ಪುತ್ರಿ ರೇಖಾ ಲಮಾಣಿ ಶಿಕ್ಷಕಿಯಾಗಿದ್ದಾರೆ. ಇನ್ನೋರ್ವ ಸಹೋದರಿ ಶಿಲ್ಪಾ ಲಮಾಣಿ ಗೋವಾದಲ್ಲಿ ಪತಿಯೊಂದಿಗೆ ವಾಸವಾಗಿದ್ದರೆ. ಮತ್ತೊರ್ವ ಸಹೋದರಿ ಅಶ್ವಿನಿ ನಾಯಕ ಎಂ. ಕಾಂ ಓದುತ್ತಿದ್ದಾರೆ. ಸಹೋದರ ಸಚಿನ ಮೈಸೂರಿನಲ್ಲಿ ಡಿ. ಆರ್. ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕನ ತಮ್ಮ ರಾಹುಲ ನಾಯಕ ಬಿ. ಎ. ಓದುತ್ತಿದ್ದಾನೆ.
ಹಾಸ್ಟೆಲ್‍ನಲ್ಲಿದ್ದು ಪದವಿ ಮುಗಿಸಿದ ಯುವಕ
ಪದವಿ ಓದುವಾಗ ಯಲಗೂರೇಶ ನಾಯಕ ಮುದ್ದೇಬಿಹಾಳ ಪಟ್ಟಣದ ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿದ್ದುಕೊಂಡು ಡಿಗ್ರಿ ಪೂರೈಸಿದ್ದಾನೆ ಎಂದು ಹಾಸ್ಟೇಲಿನ ವಾರ್ಡನ್ ಐ. ಾರ್. ಮೋರ್ಖೆ ನೆನಪು ಮಾಡಿಕೊಂಡಿದ್ದಾರೆ. ಯುವಕನ ಈ ಸಾಧನೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಉಪನಿರ್ದೇಶಕ ಈರಣ್ಣ ಆಶಾಪೂರ, ಮುದ್ದೇಬಿಹಾಳ ತಾಲೂಕು ಕಲ್ಯಾಣಾಧಿಕಾರಿ ಎಲ್. ಎನ್. ಸಣದಿ, ವಿಸ್ತೀರ್ಣಾಧಿಕಾರಿ ಉಮೇಶ ಮಾಟೂರ, ಮೇಲ್ವಿಚಾರಕ ಐ. ಎಸ್.ಮೋರ್ಖೆ, ಅಡಿವೆಪ್ಪ ಸಾಹುಕಾರ, ಎಂ. ಬಿ. ಜಾಯವಾಡಗಿ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ. ಯಲಗೂರೇಶ ಪ್ರಾಥಮಿಕ ಶಿಕ್ಷಣ ಓದಿದ ಸರೂರ ಎಲ್. ಟಿ. ಎಚ್. ಪಿ. ಎಸ್. ಶಾಲೆ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಓದಿದ ಸಂತ ಕನಕದಾಸ ಶಾಲೆ, ಪಿಯು ಹಾಗೂ ಪದವಿ ಶಿಕ್ಷಣ ಓದಿದ ಎಂ. ಜಿ. ವಿ. ಸಿ ಕಾಲೇಜಿನ ಬೋಧಕ ಸಿಬ್ಬಂದಿ ಯಲಗೂರೇಶ ನಾಯಕ ಸಾಧನೆಗೆ ಸಂತರಸ ವ್ಯಕ್ತಪಡಿಸಿ್ದ್ದಾರೆ.